ಸಾಗರ: ಐತಿಹಾಸಿಕ ಕಾಗೋಡು ಸತ್ಯಾಗ್ರಹ ನಡೆದು 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಯುವ ಪೀಳಿಗೆಗೆ ಈ ಹೋರಾಟದ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ಅಕ್ಟೋಬರ್ 24 ರಂದು ಪಟ್ಟಣದಲ್ಲಿ ‘ಕಾಗೋಡು ಸತ್ಯಾಗ್ರಹ ಪುನರ್ಮನನ’ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ ಎಂದು ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರವೀಂದ್ರ ಜಿ. ಕಾಟೋಟ ತಿಳಿಸಿದ್ದಾರೆ.
ಇಂದು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಭಿವೃದ್ಧಿ ಸಮಿತಿ (ಸಿಡಿಸಿ) ಸಭೆಯಲ್ಲಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಮಾಹಿತಿ ಹಂಚಿಕೊಂಡ ಅವರು, ಕಾಲೇಜಿನ ಎನ್ಎಸ್ಎಸ್, ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ಸಾಂಸ್ಕೃತಿಕ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ಅಂದು ಬೆಳಿಗ್ಗೆ 10 ಗಂಟೆಗೆ ಕಾಲೇಜು ಆವರಣದಲ್ಲಿ ಸಮಾರಂಭ ನಡೆಯಲಿದೆ ಎಂದರು.
ಗಣ್ಯರ ಉಪಸ್ಥಿತಿ ಮತ್ತು ಸನ್ಮಾನ
ಕಾರ್ಯಕ್ರಮವನ್ನು ಸ್ಥಳೀಯ ಶಾಸಕರೂ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದಾರೆ. ಇದೇ ವೇಳೆ ಗೇಣಿ ಹೋರಾಟದ ಪ್ರಮುಖ ನಾಯಕರಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಆರ್. ಜಯಂತ್ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು.
ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ರಾಮಪ್ಪ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಬಿಬಿಎಂಪಿ ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್ ಅವರು ‘ಮಳಲಗದ್ದೆ’ ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಯುವಜನರಿಗೆ ಚಳವಳಿಯ ಅರಿವು ಮೂಡಿಸುವ ಉದ್ದೇಶ
ಕಾರ್ಯಕ್ರಮದ ಮಹತ್ವದ ಕುರಿತು ಮಾತನಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಲ್. ಚಂದ್ರಪ್ಪ, "ಕಾಗೋಡು ರೈತ ಚಳವಳಿಯು ಶೋಷಿತ ಗೇಣಿ ರೈತರಿಗೆ ಭೂಮಿಯ ಹಕ್ಕು ದೊರಕಿಸಿಕೊಡುವಲ್ಲಿ ದೇಶದಲ್ಲೇ ಮುಂಚೂಣಿ ಪಾತ್ರ ವಹಿಸಿತ್ತು. ಸಮಾಜವಾದಿ ನಾಯಕ ಡಾ. ರಾಮಮನೋಹರ ಲೋಹಿಯಾ ಅವರ ನೇತೃತ್ವದಿಂದಾಗಿ ಈ ಸತ್ಯಾಗ್ರಹ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು. ಗೇಣಿದಾರರನ್ನು ಜೀತಪದ್ಧತಿ ಹಾಗೂ ದಾಸ್ಯದಿಂದ ಮುಕ್ತಗೊಳಿಸಿ ಉಳುಮೆ ಮಾಡುವವನೇ ಭೂಮಿಯ ಒಡೆಯನಾಗಲು ಕಾರಣವಾದ ಈ ಐತಿಹಾಸಿಕ ಹೋರಾಟದ ಅರಿವನ್ನು ಇಂದಿನ ವಿದ್ಯಾರ್ಥಿಗಳಿಗೆ ಹಾಗೂ ಯುವಸಮೂಹಕ್ಕೆ ದಾಟಿಸುವುದೇ ಈ ಸಮ್ಮೇಳನದ ಮುಖ್ಯ ಉದ್ದೇಶ" ಎಂದರು.
ಸಭೆಯಲ್ಲಿ ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ಶಿವಾನಂದ ಎಸ್. ಭಟ್, ಸಮಿತಿ ಸದಸ್ಯರಾದ ನಾರಾಯಣ, ರಂಜನ್ ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.