E-PAPER
17 Nov 2026, 12:23:33 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಇಡೀ ದಿನ ರಸದೌತಣ ಉಣಬಡಿಸಿದ ಸಾಹಿತ್ಯೋತ್ಸವ -2025

ಬೆಳಗಾವಿ-02 : ಬೆಳಗಾವಿಯಲ್ಲಿ ಭಾನುವಾರ ನಡೆದ ಸಾಹಿತ್ಯೋತ್ಸವ -2025 ಸಾಹಿತ್ಯ ಪ್ರಿಯರಿಗೆ ಇಡೀ ದಿನ ಸಾಹಿತ್ಯದ ರಸದೌತಕಣ ಉಣಬಡಿಸಿತು. 10 ಗಂಟೆಗಳ ಕಾಲ ಉದ್ಘಾಟನೆ, ಸಮಾರೋಪ ಸೇರಿದಂತೆ 10 ಗೋಷ್ಠಿಗಳೊಂದಿಗೆ, ಸಂಗೀತ, ಸಂವಾದಗಳೂ ಸೇರಿ ಒಂದು ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಇಲ್ಲಿಯ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಎಜ್ಯುಕೇಷನ್‌ ಆ್ಯಂಡ್‌ ರಿಸರ್ಚ್‌(ಐಎಂಇಆರ್‌) ಸಭಾಂಗಣದಲ್ಲಿ ಬೆಳಗ್ಗೆ 8.30ಕ್ಕೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದೊದಿಗೆ ಕಾರ್ಯಕ್ರಮ ವಿದ್ಯುಕ್ತ ಚಾಲನೆ ಪಡೆಯಿತು. ಡಾ.ಅಯ್ಯಪ್ಪಯ್ಯ ಹಲಗಲಿಮಠ ಅವರಿಂದ ಶಾಸ್ತ್ರಿಯ ಸಂಗೀತ ಜರುಗಿತು. ತಬಲಾ ನಾರಾಯಣ ಗಣಾಚಾರಿ, ಹಾರ್ಮೋನಿಯಂ ಯೋಗೇಶ ರಾಮದಾಸ ಸಾಥ ನೀಡಿದರು. ಹಿರಿಯ ತಬಲಾ ವಾದಕ ಜಿ.ಎ.ಕುಲಕರ್ಣಿ (ಬಂಡೋಪಂತ) ಉಪಸ್ಥಿತರಿದ್ದರು. ನೀರಜಾ ಗಣಾಚಾರಿ ಕಾರ್ಯಕ್ರಮ ನಿರೂಪಿಸಿದರು.
ನಂತರ ಹಿರಿಯ ಸಾಹಿತ್ಯ ರಾಘವೇಂದ್ರ ಪಾಟೀಲ ಅವರು ಗುರುದೇವಿ ಹುಲೆಪ್ಪನವರಮಠ ಅವರ ಕೃತಿಯೊಂದನ್ನು ಬಿಡುಗಡೆ ಮಾಡುವ ಮೂಲಕ ಸಾಹಿತ್ಯೋತ್ಸವ ಉದ್ಘಾಟಿಸಿದರು. ಆಧುನೀಕರಣ ಸಾಂಸ್ಕೃತಿಕ ಪಲ್ಲಟ ಸೃಷ್ಟಿ ಮಾಡಿದೆ. ಕರ್ತೃ ತಾನು ಮಾಡಿದ ಕೃತಿಗೆ ಜವಾಬ್ದಾರಿ ತೆಗೆದುಕೊಳ್ಳದ ರಾಕ್ಷಸೀಯ ನೆಲೆಗೆ ಇಂದು ನಾವು ತಲುಪುತ್ತಿದ್ದೇವೆ. ಭೂಮಿಯ ಮೇಲೆ ಕ್ರೌರ್ಯ ಹೆಚ್ಚಾಗುತ್ತಿದೆ. ಸಿನೇಮಾಗಳೂ ಕ್ರೌರ್ಯ ಪ್ರಧಾನವಾಗುತ್ತಿದೆ. ಇಂದಿನ ಮಕ್ಕಳ ಆಟಿಕೆಗಳ ಸ್ವರೂಪ ಕೂಡ ಬದಲಾಗಿದೆ. ಕರಗುವ ಗುಣ ಇಲ್ಲವಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
‘ಪ್ರಸ್ತುತ ಕಾಲಘಟ್ಟದಲ್ಲಿ ಆಧುನಿಕ ತಂತ್ರಜ್ಞಾನದ ಭರಾಟೆ ಮನುಷ್ಯನಲ್ಲಿ ರಾಕ್ಷಸಿ ಪ್ರವೃತ್ತಿ ಬೆಳೆಸುತ್ತಿದೆ. ಇದನ್ನು ಹೋಗಲಾಡಿಸುವ ಶಕ್ತಿ ಸಂಗೀತ ಮತ್ತು ಸಾಹಿತ್ಯಕ್ಕಿದೆ. ಹಾಗಾಗಿ ಮಕ್ಕಳಲ್ಲಿ ಸಂಗೀತ, ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಬೇಕಿದೆ’ ಎಂದು ರಾಘವೇಂದ್ರ ಪಾಟೀಲ ಕರೆ ನೀಡಿದರು.

‘ಸಂಗೀತ, ಸಾಹಿತ್ಯ ಮತ್ತು ಉಪನ್ಯಾಸದಿಂದ ಕೂಡಿರುವ ಈ ಸಾಹಿತ್ಯೋತ್ಸವ ನಮ್ಮ ಮನದಲ್ಲಿನ ಕಲ್ಮಶಗಳನ್ನು ತೆಗೆದುಹಾಕುವ ಕೆಲಸ ಮಾಡಿದೆ. ಸಂಗೀತವೇ ಪ್ರಧಾನವಾಗಿದ್ದ ಈ ಹಿಂದಿನ ಚಲನಚಿತ್ರಗಳು ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತಿದ್ದವು. ಆದರೆ, ಇಂದಿನ ಚಲನಚಿತ್ರಗಳಲ್ಲಿ ಕ್ರೌರ್ಯವೇ ಪ್ರಧಾನವಾಗಿದೆ. ಬಾಲ್ಯದಲ್ಲಿ ನಾವು ಕೃಷಿ ಸಂಬಂಧಿ ಆಟಿಕೆ ಹೆಚ್ಚಾಗಿ ಬಳಸುತ್ತಿದ್ದೆವು. ಇಂದಿನ ಮಕ್ಕಳ ಕೈಯಲ್ಲಿ ಬಂದೂಕು, ನೆಲ ಅಗೆಯುವ ಹಿಟಾಚಿ ಕಾಣಸಿಗುತ್ತಿವೆ’ ಎಂದು ಬೇಸರಿಸಿದರು.

‘ಸಮಾಜದಲ್ಲಿ ಇಂದು ಜಾತಿ ವ್ಯವಸ್ಥೆ ಹೆಚ್ಚಾಗಿದೆ. ಯಾವುದೇ ರಂಗ ಮತ್ತು ಯಾವುದೇ ಚಟುವಟಿಕೆಯಲ್ಲಿ ಜಾತಿಯೇ ಮುಂಚೂಣಿಯಲ್ಲಿ ನಿಲ್ಲುತ್ತಿದೆ. ಇದು ಆಶಾದಾಯಕ ಬೆಳವಣಿಗೆಯಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಅನುವಾದಕ ಚಂದ್ರಕಾಂತ ಪೋಕಳೆ, ‘ಬಹುಭಾಷಾ ಮತ್ತು ಬಹು ಸಂಸ್ಕೃತಿಗಳ ಬೆಳಗಾವಿ ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಮರಾಠಿ ಭಾಷಿಕರು ಮರಾಠಿ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಾರೆ. ವಿವಾಹ ಕಾರ್ಯಕ್ರಮಗಳಿಗಿಂತ ಮರಾಠಿ ಸಾಹಿತ್ಯ ಸಮ್ಮೇಳನಗಳಲ್ಲಿ ಮರಾಠಿಗರು ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ಕನ್ನಡಿಗರೂ ಈ ದಿಸೆಯಲ್ಲಿ ಹೆಜ್ಜೆ ಇರಿಸಬೇಕು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಚಾಲಕ ಶಿರೀಷ ಜೋಶಿ, ‘ಸಾಹಿತ್ಯೋತ್ಸವ ನಮ್ಮ ಮೊದಲ ಕಾರ್ಯಕ್ರಮ. ಸಂಗೀತ, ಸಾಹಿತ್ಯ, ನಾಟಕ... ಹೀಗೆ ವಿವಿಧ ಕಲಾ ಪ್ರಕಾರಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದ್ದೇವೆ. ಈ ಉತ್ಸವ ಪ್ರತಿವರ್ಷ ನಡೆಯಲಿದೆ’ ಎಂದು ತಿಳಿಸಿದರು. ಸಾಹಿತಿ ಗುರುದೇವಿ ಹುಲೆ‍ಪ್ಪನವರಮಠ ಅವರು, ತಮ್ಮ ಕೃತಿ ‘ರವಿವಾರಾಯ ನಮಃ’ ಕುರಿತಾಗಿ ಮಾತನಾಡಿದರು. ರಾಗರಾಗಿಣಿ ತಂಡದವರ ಪ್ರಾರ್ಥನೆಯೊಂದಿಗೆ ಕಾರ‍್ಯಕ್ರಮ ಪ್ರಾರಂಭವಾಯಿತು. ಎಂ. ಬಿ. ಹೊಸಳ್ಳಿ ನಿರೂಪಿಸಿದರು.

ಬಳಿಕ, ಪ್ರೊ.ಎಂ.ಎಸ್.ಇಂಚಲ ಉಪಸ್ಥಿತಿಯಲ್ಲಿ ನಡೆದ ಗೋಷ್ಠಿಯಲ್ಲಿ ಪಿ.ಜಿ.ಕೆಂಪಣ್ಣವರ ಅವರು ‘ಜಿಲ್ಲೆಯ ಕಾವ್ಯ ಪರಂಪರೆ’ ಕುರಿತು ಮಾತನಾಡಿದರು. ‘ಮಾಧ್ಯಮಗಳ ಸಾಂಸ್ಕೃತಿಕ ಹೊಣೆ’ ಕುರಿತ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರಾದ ಎಂ.ಕೆ.ಹೆಗಡೆ ಮತ್ತು ದೇವು ಪತ್ತಾರ ವಿಷಯ ಮಂಡಿಸಿದರು. ರಮೇಶ ಜಂಗಲ್ ವೇದಿಕೆಯಲ್ಲಿದ್ದರು. ದೀಪಿಕಾ ಚಾಟೆ ಪ್ರತಿಕ್ರಿಯೆ ನೀಡಿದರು. ಶ್ರದ್ಧಾ ಪಾಟೀಲ ನಿರೂಪಿಸಿದರು.

ಬಳಿಕ ‘ನಾಕು ತಂತಿ’ಗೆ ಜ್ಞಾನಪೀಠದ ಸುವರ್ಣಸಂಭ್ರಮದ ಹಿನ್ನೆಲೆಯಲ್ಲಿ ಬೇಂದ್ರೆಯವರ ‘ನಾಕುತಂತಿ’ ಕೃತಿಯ ಕುರಿತು ಬೆಂಗಳೂರಿನ ಡಾ.ಎನ್.ಎಸ್.ಶ್ರೀಧರಮೂರ್ತಿ ಉಪನ್ಯಾಸ ನೀಡಿದರು. ಸುಮಾ ಕಿತ್ತೂರ ಪ್ರತಿಕ್ರಿಯೆ ನೀಡಿದರು. ರಾಜಕುಮಾರ ಕಂಬಾರ ನಿರೂಪಿಸಿದರು. ನಂತಂರ ನಡೆದ ಕವಿಗೋಷ್ಠಿಯಲ್ಲಿ ನಾಗೇಶ ನಾಯಕ, ಆಶಾ ಯಮಕನಮರಡಿ ಕವನ ವಾಚಿಸಿದರು. ಶೈಲಜಾ ಭಿಂಗೆ ಉಪಸ್ಥಿತರಿದ್ದರು.
ಮಧ್ಯಾಹ್ನ ಸಾಹಿತಿಗಳ ಸಂಗ, ಮೋಜಿನ ಪ್ರಸಂಗ. ಕಾರ್ಯಕ್ರಮದಲ್ಲಿ ಡಾ. ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸಿದ್ದರು. ಎಲ್.ಎಸ್.ಶಾಸ್ತ್ರಿ, ಗುಂಡೇನಟ್ಟಿ ಮಧುಕರ, ಡಾ.ಶ್ರೀಧರ ಹುಕ್ಕೇರಿ ಮೊದಲಾದವರು ಪಾಲ್ಗೊಂಡಿದ್ದರು. ಬಳಿಕ ವರ್ತಮಾನದ ರಂಗಭೂಮಿ ಕುರಿತು ಸಂವಾದ ನಡೆಯಿತು. ಪ್ರಕಾಶ ಗರುಡ, ರಘು ಕಮ್ಮಾರ, ಡಾ.ರಾಮಕೃಷ್ಣ ಮರಾಠೆ, ಡಾ.ಅರವಿಂದ ಕುಲಕರ್ಣಿ, ರವಿ ಕೋಟಾರಗಸ್ತಿ ಮೊದಲಾದವರು ಪಾಲ್ಗೊಂಡಿದ್ದರು. ಜ್ಯೋತಿ ಬದಾಮಿ ನಿರೂಪಿಸಿದರು. ಬಳಿಕ ನಾನು ಮತ್ತು ನನ್ನ ಪುಸ್ತಕ ವಿಷಯದ ಕುರಿತು ಗೋಷ್ಠಿಯಲ್ಲಿ ಸಂಕೇತ ಪಾಟೀಲ, ಡಾ.ಎಚ್.ಬಿ.ರಾಜಶೇಖರ ಉಪಸ್ಥಿತರಿದ್ದರು. ಕುವೆಂಪು ಕಾದಂಬರಿಗಳ ಕುರಿತ ಗೋಷ್ಠಿಯಲ್ಲಿ ಡಾ.ಗುರುಪಾದ ಮರಿಗುದ್ದಿ ಉಪನ್ಯಾಸ ನೀಡಿದರು. ಎನ್.ಬಿ.ದೇಶಪಾಂಡೆ ಉಪಸ್ಥಿತರಿದ್ದರು. ರಮೇಶ ಮುರ್ಜಿ ನಿರ್ವಹಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಸಾಹಿತಿ ಡಾ.ಶ್ಯಾಮಸುಂದರ ಬಿದರಕುಂದಿ ಸಮಾರೋಪ ನುಡಿಗಳನ್ನಾಡಿದರು. ಯಾವುದರಲ್ಲೂ ಇಂದು ಗುಣಮಟ್ಟ ಇಲ್ಲವಾಗಿದೆ. ರಾಜಕಾರಣದಲ್ಲಾಗಲಿ, ವಿಶ್ವವಿದ್ಯಾಲಯದ ಜ್ಞಾನದಲ್ಲಾಗಲಿ ಯಾವುದರಲ್ಲೂ ಗುಣಮಟ್ಟ ಇಲ್ಲ, ಹಲವು ಕಾರಣದಿಂದಾಗಿ ಇಂದು ಇಳಿಗಾಲ ಕಾಣುತ್ತಿದ್ದೇವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಸಾಹಿತ್ಯೋತ್ಸವ ಇಡೀ ದಿನ ಅಚ್ಚುಕಟ್ಟಾಗಿ ನಡೆದಿದೆ ಎಂದು ಅವರ ಪ್ರಶಂಸಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ , ಇಡೀ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ. ಶಿರೀಷ್ ಜೋಶಿ ಮತ್ತು ಅವರ ತಂಡ ಬಹಳ ಕಷ್ಟಪಟ್ಟು ಸಂಘಟನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡದಾಗಿ ನಡೆಯಲಿ ಎಂದು ಆಶಿಸಿದರು. ಬೇಂದ್ರೆ ಮತ್ತು ಕುವೆಂಪು ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ ಎಂದು ಅವರು ತಿಳಿಸಿದರು.

ಈ ವೇಳೆ ಸಾಹಿತಿ ಬಿ.ಎಸ್.ಗವಿಮಠ ಅವರು ಉತ್ತಮ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಶಿರೀಷ್ ಜೋಶಿ ಅವರನ್ನು ಸನ್ಮಾನಿಸಿದರು. ಶರಣಯ್ಯ ಮಠಪತಿ ನಿರೂಪಿಸಿದರು.

ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, ರಂಗಸೃಷ್ಟಿ, ಬಿಜಾಪುರೆ ಹಾರ್ಮೋನಿಯಂ ಪ್ರತಿಷ್ಠಾನ, ಹಾಸ್ಯಕೂಟ ಮತ್ತು ಐಎಂಇಆರ್ ಸಹಯೋಗ ಒದಗಿಸಿದ್ದವು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.