ರಾಮನಗರ: ರಾತ್ರಿ ಕುಟುಂಬಸ್ಥರೊಂದಿಗೆ ಕುಳಿತು ಊಟ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏಕಾಏಕಿ ಹೃದಯಾಘಾತದಿಂದ ಕುಸಿದುಬಿದ್ದು, ಮಗಳು ಮತ್ತು ಅಳಿಯನ ಕಣ್ಣೆದುರೇ ಕೊನೆಯುಸಿರೆಳೆದಿರುವ ದಾರುಣ ಘಟನೆ ತಾಲೂಕಿನ ಮಂಚಶೆಟ್ಟಹಳ್ಳಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಮಂಚಶೆಟ್ಟಹಳ್ಳಿ ಗ್ರಾಮದ ನಿವಾಸಿ ಶಿವಲಿಂಗಯ್ಯ (ಅಂದಾಜು 55 ವರ್ಷ) ಎಂದು ಗುರುತಿಸಲಾಗಿದೆ.
ಊಟದ ತಟ್ಟೆಯ ಮುಂದೆಯೇ ಕುಸಿದ ವ್ಯಕ್ತಿ ಆಗಸ್ಟ್ 22ರ ರಾತ್ರಿ ಶಿವಲಿಂಗಯ್ಯ ಅವರು ತಮ್ಮ ಮನೆಯಲ್ಲಿ ಎಂದಿನಂತೆ ಕುಟುಂಬದವರ ಜೊತೆ ಕುಳಿತು ಊಟ ಮಾಡುತ್ತಿದ್ದರು. ಮನೆಯಲ್ಲಿ ಎಲ್ಲರೂ ನಗುನಗುತ್ತಾ ಮಾತನಾಡುತ್ತಾ ಊಟ ಸವಿಯುತ್ತಿದ್ದ ಸಂದರ್ಭದಲ್ಲೇ, ಶಿವಲಿಂಗಯ್ಯ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಅವರು ಊಟದ ತಟ್ಟೆಯ ಮುಂದೆಯೇ ಪ್ರಜ್ಞಾಹೀನರಾಗಿ ಹಿಂದಕ್ಕೆ ವಾಲಿದ್ದಾರೆ.
ಮಗಳು ಎಷ್ಟೇ ಸಿಪಿಆರ್ ಮಾಡಿದರೂ ದಕ್ಕದ ಜೀವ! ತಂದೆ ಕುಸಿದುಬಿದ್ದಿದ್ದನ್ನು ಕಂಡು ಗಾಬರಿಗೊಂಡ ಮಗಳು, ಸಮಯಪ್ರಜ್ಞೆ ಮೆರೆದು ಕೂಡಲೇ ತಂದೆಯನ್ನು ನೆಲದ ಮೇಲೆ ಮಲಗಿಸಿ ಪ್ರಥಮ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಎದೆಯನ್ನು ಸತತವಾಗಿ ಒತ್ತಿ ಸಿಪಿಆರ್ (CPR) ಮಾಡಿ, ಬಾಯಿಯ ಮೂಲಕ ಕೃತಕ ಉಸಿರಾಟ ನೀಡಿ ತಂದೆಯನ್ನು ಬದುಕಿಸಿಕೊಳ್ಳಲು ಮಗಳು ಮತ್ತು ಅಳಿಯ ಕಣ್ಣೀರು ಹಾಕುತ್ತಲೇ ಹರಸಾಹಸ ಪಟ್ಟಿದ್ದಾರೆ. ಆದರೆ, ಹೃದಯಾಘಾತದ ತೀವ್ರತೆ ಹೆಚ್ಚಾಗಿದ್ದ ಪರಿಣಾಮ ಶಿವಲಿಂಗಯ್ಯ ಅವರ ದೇಹ ಯಾವುದೇ ಸ್ಪಂದನೆ ನೀಡದೆ, ಮನೆಯಲ್ಲೇ ಪ್ರಾಣಪಕ್ಷಿ ಹಾರಿಹೋಗಿದೆ.
ತಮ್ಮ ಕಣ್ಣೆದುರೇ ತಂದೆ ಒದ್ದಾಡಿ ಪ್ರಾಣಬಿಟ್ಟ ದೃಶ್ಯ ಕಂಡು ಮಗಳು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಮಂಚಶೆಟ್ಟಹಳ್ಳಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.