ಸ್ಯಾನ್ ಫ್ರಾನ್ಸಿಸ್ಕೋ- ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಮುಖ ಸಂಸ್ಥೆ ಓಪನ್ಎಐನ ಕಚೇರಿಯಲ್ಲಿ ರಹಸ್ಯವಾಗಿ ರೆಕಾರ್ಡಿಂಗ್ ಸಾಧನ ಅಳವಡಿಸಿದ ಆರೋಪದ ಮೇಲೆ ಸೌದಿ ಪ್ರಜೆ ಹಾಗೂ ಸಂಸ್ಥೆಯ ಮಾಜಿ ಉದ್ಯೋಗಿ ಅಬ್ದುಲ್ರಹಮಾನ್ ಅಲ್ಫೋಜಾನ್ ಅವರನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಎಫ್ಬಿಐ) ಬಂಧಿಸಿದೆ.
ಕಚೇರಿಯಲ್ಲಿ ಪತ್ತೆಯಾದ ಸಾಧನದ ಮೂಲವನ್ನು ಪತ್ತೆಹಚ್ಚಲು ಹಾಗೂ ಅದನ್ನು ಅಳವಡಿಸಿದ ವ್ಯಕ್ತಿಯನ್ನು ಗುರುತಿಸಲು ತನ್ನದೇ ಆದ ಎಐ ಮಾದರಿಗಳನ್ನು ಬಳಸಿರುವುದಾಗಿ ಓಪನ್ಎಐ ತಿಳಿಸಿದೆ.
ಅಕ್ಟೋಬರ್ 14ರಂದು ಪ್ರಕಟವಾದ ವರದಿಯ ಪ್ರಕಾರ, 35 ವರ್ಷದ ಅಲ್ಫೋಜಾನ್ ಅವರು ಓಪನ್ಎಐನ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿರುವ ಕಾರ್ಯನಿರ್ವಾಹಕರ ಸಭಾಂಗಣದಲ್ಲಿ ರಹಸ್ಯವಾಗಿ ರೆಕಾರ್ಡಿಂಗ್ ಸಾಧನ ಅಳವಡಿಸಿದ ಆರೋಪ ಎದುರಿಸುತ್ತಿದ್ದಾರೆ. ಅಕ್ಟೋಬರ್ 9ರಂದು ಅವರನ್ನು ಬಂಧಿಸಲಾಗಿದ್ದು, ಮಂಗಳವಾರ ಫೆಡರಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಟಾಯ್ಲೆಟ್ ಪೇಪರ್ನಲ್ಲಿ ಅಡಗಿಸಿಟ್ಟಿದ್ದ ಸಾಧನ
ಟಾಯ್ಲೆಟ್ ಪೇಪರ್ನಲ್ಲಿ ಅಡಗಿಸಿಟ್ಟಿದ್ದ ಸಾಧನ
ಓಪನ್ಎಐ ಸಿಬ್ಬಂದಿ ಸೆಪ್ಟೆಂಬರ್ 30ರಂದು ನಡೆಸಿದ ಭದ್ರತಾ ಪರಿಶೀಲನೆಯ ಸಂದರ್ಭದಲ್ಲಿ ಹೆಬ್ಬೆರಳಿನ ಗಾತ್ರದ ರೆಕಾರ್ಡಿಂಗ್ ಸಾಧನವನ್ನು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ. ಟಾಯ್ಲೆಟ್ ಪೇಪರ್ನಲ್ಲಿ ಅಡಗಿಸಿಟ್ಟಿದ್ದ ಸಾಧನವನ್ನು ಸಭಾಂಗಣದಲ್ಲಿನ ಟಿವಿಯ ಹಿಂಭಾಗದ ಯುಎಸ್ಬಿ ಪೋರ್ಟ್ಗೆ ಸಂಪರ್ಕಿಸಲಾಗಿತ್ತು ಎಂದು ವರದಿಯಾಗಿದೆ.
ಈ ಸಾಧನದಲ್ಲಿ ಮೈಕ್ರೊಫೋನ್, ಪ್ರತ್ಯೇಕಿಸಬಹುದಾದ ಕ್ಯಾಮೆರಾ ಸೆನ್ಸರ್ ಮತ್ತು ಮೈಕ್ರೊ ಎಸ್ಡಿ ಸಂಗ್ರಹಣಾ ವ್ಯವಸ್ಥೆ ಇದ್ದವು ಎನ್ನಲಾಗಿದೆ. ಸಾಧನದಲ್ಲಿನ ಮಾಹಿತಿಯು ಎನ್ಕ್ರಿಪ್ಟ್ ಆಗಿದ್ದರಿಂದ ಅದರಲ್ಲಿರುವ ವಿಷಯಗಳನ್ನು ನೇರವಾಗಿ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಲಾಗಿದೆ.
ಆರೋಪಿಯನ್ನು ಪತ್ತೆಹಚ್ಚಲು ಎಐ ಬಳಕೆ
ಆರೋಪಿಯನ್ನು ಪತ್ತೆಹಚ್ಚಲು ಎಐ ಬಳಕೆ
ಸಾಧನವನ್ನು ಪತ್ತೆಹಚ್ಚಿದ ಬಳಿಕ ಅದರ ಸ್ವರೂಪ, ಮೂಲ ಮತ್ತು ಅದನ್ನು ಅಳವಡಿಸಿದ ವ್ಯಕ್ತಿಯ ಸುಳಿವುಗಳನ್ನು ಕಂಡುಹಿಡಿಯಲು ಆಂತರಿಕ ಎಐ ಮಾದರಿಗಳ ನೆರವು ಪಡೆದಿದ್ದಾಗಿ ಓಪನ್ಎಐ ಹೇಳಿದೆ. ಈ ಪ್ರಕ್ರಿಯೆಯಲ್ಲಿ ನಿರ್ದಿಷ್ಟ ಉದ್ಯೋಗಿಯೊಬ್ಬರು ಸಾಧನವನ್ನು ಅಳವಡಿಸಿರುವುದನ್ನು ಗುರುತಿಸಲು ಸಾಧ್ಯವಾಯಿತು ಎಂದು ಕಂಪನಿ ತಿಳಿಸಿದೆ. ಬಳಿಕ ಘಟನೆಯ ಕುರಿತು ಎಫ್ಬಿಐಗೆ ಮಾಹಿತಿ ನೀಡಲಾಗಿದೆ.
ತನಿಖಾಧಿಕಾರಿಗಳ ಆರೋಪದ ಪ್ರಕಾರ, ಅಲ್ಫೋಜಾನ್ ಅವರು ಓಪನ್ಎಐನ ಕಟ್ಟಡಗಳು, ಸಭಾಂಗಣಗಳು, ಕಾರ್ಯನಿರ್ವಾಹಕರ ಕೊಠಡಿಗಳು, ಸಭೆಗಳ ವೇಳಾಪಟ್ಟಿ ಹಾಗೂ ಬಾಹ್ಯ ಪಾಲುದಾರರೊಂದಿಗಿನ ಸಭೆಗಳ ಕುರಿತು ಮಾಹಿತಿ ಸಂಗ್ರಹಿಸಲು ಎಐ ಚಾಟ್ಬಾಟ್ ಬಳಸಿದ್ದರು. ಸೆಪ್ಟೆಂಬರ್ 24ರಿಂದ 30ರ ಅವಧಿಯಲ್ಲಿ ಸಾಧನ ನಿರ್ಮಾಣ, ಅಳವಡಿಕೆ, ಧ್ವನಿ ಮುದ್ರಣ ಮತ್ತು ದೂರದಿಂದಲೇ ಸಾಧನವನ್ನು ಪ್ರವೇಶಿಸುವ ವಿಧಾನಗಳ ಕುರಿತು ಚಾಟ್ಬಾಟ್ನಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬ ಆರೋಪವೂ ಇದೆ.
ಸಿಸಿಟಿವಿ ದೃಶ್ಯಾವಳಿಗಳೂ ತನಿಖೆಗೆ ನೆರವು
ಸಿಸಿಟಿವಿ ದೃಶ್ಯಾವಳಿಗಳೂ ತನಿಖೆಗೆ ನೆರವು
ಅಧಿಕೃತ ದೂರಿನ ಪ್ರಕಾರ, ಸೆಪ್ಟೆಂಬರ್ 28ರ ಸುಮಾರಿಗೆ ಸಾಧನವನ್ನು ಅಳವಡಿಸಲಾಗಿತ್ತು ಎನ್ನಲಾಗಿದೆ. ಅಕ್ಟೋಬರ್ 5ರಂದು ಅಲ್ಫೋಜಾನ್ ಅವರು ಸಭಾಂಗಣಕ್ಕೆ ಪ್ರವೇಶಿಸಿ ಟಿವಿಯ ಹಿಂಭಾಗವನ್ನು ಪರಿಶೀಲಿಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಅದೇ ದಿನ ಮತ್ತೊಂದು ಕೊಠಡಿಯಲ್ಲಿ ಅವರು ಚೀಲವೊಂದನ್ನು ಬಿಟ್ಟು ಹೋಗಿದ್ದರು ಎನ್ನಲಾಗಿದ್ದು, ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಅದರಲ್ಲಿ ಅವರ ಗುರುತಿನ ಚೀಟಿ ಹಾಗೂ ಮೊದಲ ಸಾಧನವನ್ನು ಹೋಲುವ ಮತ್ತೊಂದು ಎನ್ಕ್ರಿಪ್ಟ್ ಮಾಡಿದ ರೆಕಾರ್ಡಿಂಗ್ ಸಾಧನ ಪತ್ತೆಯಾಗಿತ್ತು ಎಂದು ಪ್ರಾಸಿಕ್ಯೂಷನ್ ತಿಳಿಸಿದೆ. ಈ ಎಲ್ಲ ಅಂಶಗಳು ತನಿಖೆಯ ಭಾಗವಾಗಿವೆ.
ಗ್ರಾಹಕರ ಮಾಹಿತಿ ಸೋರಿಕೆಯಾಗಿಲ್ಲ ಎಂದ ಓಪನ್ಎಐ
ಗ್ರಾಹಕರ ಮಾಹಿತಿ ಸೋರಿಕೆಯಾಗಿಲ್ಲ ಎಂದ ಓಪನ್ಎಐ
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಓಪನ್ಎಐ, ತನ್ನ ಮಾದರಿಗಳ ಮೂಲ ತೂಕ (ಮಾಡೆಲ್ ವೇಯಿಟ್ಸ್), ಮೂಲ ಕೋಡ್ ಅಥವಾ ಗ್ರಾಹಕರ ಮಾಹಿತಿಯನ್ನು ಅಲ್ಫೋಜಾನ್ ಅನಧಿಕೃತವಾಗಿ ಪ್ರವೇಶಿಸಿರುವ ಅಥವಾ ಹೊರತೆಗೆದಿರುವ ಯಾವುದೇ ಸೂಚನೆಗಳು ಸದ್ಯಕ್ಕೆ ಕಂಡುಬಂದಿಲ್ಲ ಎಂದು ತಿಳಿಸಿದೆ. ಘಟನೆ ಬೆಳಕಿಗೆ ಬಂದ ಬಳಿಕ ಕಂಪನಿಯು ಅವರ ಉದ್ಯೋಗ ಒಪ್ಪಂದವನ್ನು ರದ್ದುಗೊಳಿಸಿದೆ.
ಅಲ್ಫೋಜಾನ್ ಅವರು 2025ರ ಜುಲೈನಲ್ಲಿ ಓಪನ್ಎಐ ಸೇರಿದ್ದರು ಎನ್ನಲಾಗಿದೆ. ಇದಕ್ಕೂ ಮೊದಲು ಮೆಟಾ, ಮೈಕ್ರೋಸಾಫ್ಟ್ ಮತ್ತು ಎಸ್ಎಪಿಯಂತಹ ತಂತ್ರಜ್ಞಾನ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು ಎಂದು ಅವರ ವೃತ್ತಿಪರ ವಿವರಗಳು ಸೂಚಿಸುತ್ತವೆ.
ಅಪರಾಧ ಸಾಬೀತಾದರೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ
ಅಪರಾಧ ಸಾಬೀತಾದರೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ
ಅಮೆರಿಕದ ನ್ಯಾಯಾಂಗ ಇಲಾಖೆಯ ಪ್ರಕಾರ, ಆರೋಪ ಸಾಬೀತಾದಲ್ಲಿ ಅಲ್ಫೋಜಾನ್ ಅವರಿಗೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ, 2.5 ಲಕ್ಷ ಡಾಲರ್ವರೆಗೆ ದಂಡ ಹಾಗೂ ಮೂರು ವರ್ಷಗಳ ಮೇಲ್ವಿಚಾರಣೆಯ ಬಿಡುಗಡೆ ವಿಧಿಸುವ ಸಾಧ್ಯತೆಯಿದೆ. ಆದರೆ ಆರೋಪ ಸಾಬೀತಾಗುವವರೆಗೆ ಅವರನ್ನು ನಿರ್ದೋಷಿ ಎಂದು ಪರಿಗಣಿಸಬೇಕಾಗುತ್ತದೆ.
ಎಐ ತಂತ್ರಜ್ಞಾನಕ್ಕೆ ಸಂಬಂಧಿಸಿದ ಭದ್ರತಾ ಸವಾಲುಗಳ ನಡುವೆ ಈ ಪ್ರಕರಣ ಮಹತ್ವ ಪಡೆದಿದೆ. ಒಂದೆಡೆ, ರಹಸ್ಯ ಸಾಧನದ ಸುಳಿವು ಪತ್ತೆಹಚ್ಚಲು ಎಐ ಬಳಕೆಯಾಗಿರುವುದು ಗಮನ ಸೆಳೆದಿದ್ದರೆ, ಮತ್ತೊಂದೆಡೆ ಅತ್ಯಾಧುನಿಕ ತಂತ್ರಜ್ಞಾನ ಸಂಸ್ಥೆಗಳಲ್ಲಿಯೂ ಆಂತರಿಕ ಭದ್ರತೆ, ಗೌಪ್ಯತೆ ಮತ್ತು ಉದ್ಯೋಗಿಗಳ ಮೇಲ್ವಿಚಾರಣೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.