ಬೆಂಗಳೂರು : ಕರ್ನಾಟಕ ಭೂಸುಧಾರಣಾ ಕಾಯ್ದೆಯಡಿ ಕುಟುಂಬದ ಮುಖ್ಯಸ್ಥರಿಗೆ ಮಂಜೂರಾದ ಗೇಣಿ ಜಮೀನಿನಲ್ಲಿ ವಿವಾಹಿತ ಹೆಣ್ಣುಮಕ್ಕಳಿಗೂ ಗಂಡುಮಕ್ಕಳಷ್ಟೇ ಸಮಾನ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠವು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಬಿ. ಮುರಳೀಧರ ಪೈ ಅವರಿದ್ದ ಏಕಸದಸ್ಯ ನ್ಯಾಯಪೀಠವು ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದ ಮೇಲ್ಮನವಿಯನ್ನು ವಜಾಗೊಳಿಸುವ ಮೂಲಕ ಈ ಮಹತ್ವದ ತೀರ್ಪು ನೀಡಿದೆ.
ಭೂ ನ್ಯಾಯಮಂಡಳಿಯು ಕುಟುಂಬದ ಮುಖ್ಯಸ್ಥನಿಗೆ ಗೇಣಿ ಆಧಾರದ ಮೇಲೆ ಜಮೀನು ಮಂಜೂರು ಮಾಡಿದ್ದರೆ, ಅದು ಕೇವಲ ಆ ವ್ಯಕ್ತಿಗೆ ಮಾತ್ರ ಸಿಕ್ಕ ವೈಯಕ್ತಿಕ ಆಸ್ತಿಯಲ್ಲ, ಬದಲಿಗೆ ಇಡೀ ಅವಿಭಕ್ತ ಕುಟುಂಬದ ಒಳಿತಿಗಾಗಿ ದೊರೆತ ಹಕ್ಕು ಎಂದು ಸುಪ್ರೀಂ ಕೋರ್ಟ್ನ ಹಿಂದಿನ ತೀರ್ಪುಗಳನ್ನು ನ್ಯಾಯಪೀಠ ಈ ವೇಳೆ ಉಲ್ಲೇಖಿಸಿದೆ. ತಂದೆಯ ನಿಧನದ ನಂತರ ಉತ್ತರಾಧಿಕಾರ ನಿಯಮಗಳ ಅಡಿಯಲ್ಲಿ ಗಂಡುಮಕ್ಕಳಿಗೆ ಸಿಗುವಷ್ಟೇ ಸಮಾನ ಪಾಲು ವಿವಾಹಿತ ಹೆಣ್ಣುಮಕ್ಕಳಿಗೂ ದೊರೆಯಬೇಕು ಎಂದು ನ್ಯಾಯಾಲಯ ಖಚಿತಪಡಿಸಿದೆ.
ಏನಿದು ಪ್ರಕರಣ?
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ಜಮೀನಿಗೆ ಸಂಬಂಧಿಸಿದಂತೆ ಶಿವಪ್ಪ ಮತ್ತು ಅವರ ಸಹೋದರ ಗೇಣಿದಾರರಾಗಿದ್ದು, ಭೂ ನ್ಯಾಯಮಂಡಳಿಯಿಂದ ಜಮೀನು ಮಂಜೂರು ಮಾಡಿಸಿಕೊಂಡಿದ್ದರು. ಶಿವಪ್ಪನವರ ನಿಧನದ ನಂತರ ಅವರ ಪತ್ನಿ, ನಾಲ್ವರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳು ಜಂಟಿ ಸ್ವಾಧೀನದಲ್ಲಿದ್ದರು. ಆದರೆ ಮಗ ಬಸವರಾಜ್ ಮೃತಪಟ್ಟ ಬಳಿಕ ಅವರ ವಾರಸುದಾರರು ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ವಿವಾದ ಉದ್ಭವಿಸಿತ್ತು.
ಈ ಕುರಿತು ಶಿಗ್ಗಾಂವಿಯ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ದಾಖಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು ಹೆಣ್ಣುಮಕ್ಕಳಿಗೂ ಸಮಾನ ಹಕ್ಕಿದೆ ಎಂದು ಅಭಿಪ್ರಾಯಪಟ್ಟು ತಲಾ ಏಳನೇ ಒಂದು ಭಾಗದ (1/7) ಪಾಲು ನೀಡಿ ತೀರ್ಪು ನೀಡಿತ್ತು. ನಂತರ ಹಾವೇರಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲೂ ವಿಚಾರಣಾ ನ್ಯಾಯಾಲಯದ ಈ ಆದೇಶವೇ ಎತ್ತಿಹಿಡಿಯಲ್ಪಟ್ಟಿತ್ತು. ಅಂತಿಮವಾಗಿ ಹೈಕೋರ್ಟ್ ಕೂಡ ಕೆಳಾಲಯಗಳ ತೀರ್ಪನ್ನುಮೋದಿಸಿ, ಹೆಣ್ಣುಮಕ್ಕಳ ಸಮಾನ ಹಕ್ಕನ್ನು ಎತ್ತಿಹಿಡಿದಿದೆ.