ಕೊಡಗು : ಜಿಲ್ಲೆಯಲ್ಲಿ ಅಕ್ರಮ ವಲಸಿಗರ ಕುರಿತಾದ ಆತಂಕಕಾರಿ ಪ್ರಕರಣವೊಂದು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿನ ಬಾಳೆಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಿಗೇರಿಯಲ್ಲಿ ತೋಟದ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ನಾಲ್ವರು ಶಂಕಿತರನ್ನು ಹಿಂದೂ ಜಾಗರಣ ವೇದಿಕೆ ಹಾಗೂ ಆಟೋ ಚಾಲಕರ ಸಂಘದ ಸದಸ್ಯರು ಪತ್ತೆಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಪೊಲೀಸರಿಗೆ ಒಪ್ಪಿಸಲಾದವರಲ್ಲಿ ಗಂಡ, ಹೆಂಡತಿ ಹಾಗೂ ಇಬ್ಬರು ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಇವರು ಪಶ್ಚಿಮ ಬಂಗಾಳದ ಬ್ರೋಕರ್ ಮೂಲಕ ಭಾರತಕ್ಕೆ ಪ್ರವೇಶಿಸಿರುವುದಾಗಿ ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ. ಆದರೆ ಇವರ ಬಳಿ ಬೆಂಗಳೂರು ನೋಂದಣಿಯ ದ್ವಿಚಕ್ರ ವಾಹನ ಪತ್ತೆಯಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಇವರ ಅತಿಥಿ ಹಾಗೂ ವಲಸೆಯ ಅಸಲಿ ಉದ್ದೇಶದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಈ ಘಟನೆಯ ಹಿನ್ನೆಲೆಯಲ್ಲಿ ನಾಲ್ವರ ಹಿನ್ನೆಲೆ, ಗುರುತಿನ ಚೀಟಿಗಳು ಹಾಗೂ ಇತರ ದಾಖಲೆಗಳು ನೈಜವೇ ಅಥವಾ ನಕಲಿಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಹಿಂದೂ ಸಂಘಟನೆಗಳು ತೀವ್ರವಾಗಿ ಆಗ್ರಹಿಸಿವೆ. ಅಕ್ರಮವಾಗಿ ಜಿಲ್ಲೆಗೆ ವಲಸೆ ಬಂದವರ ಕುರಿತು ಈ ಹಿಂದೆ ಹಲವು ಬಾರಿ ಮಾಹಿತಿ ನೀಡಿದ್ದರೂ ಪೊಲೀಸ್ ಇಲಾಖೆ ಹಾಗೂ ಗುಪ್ತಚರ ವಿಭಾಗ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಮುಖಂಡರು ಆರೋಪಿಸಿದ್ದು, ಆಂತರಿಕ ಭದ್ರತೆಯ ದೃಷ್ಟಿಯಿಂದ ಇಲಾಖೆಯ ಕಾರ್ಯವೈಖರಿಯ ಬಗ್ಗೆಯೂ ಪ್ರಶ್ನೆ ಎತ್ತಿದ್ದಾರೆ.
ಕೊಟ್ಟಿಗೇರಿಯಲ್ಲಿ ಬೆಳಕಿಗೆ ಬಂದಿರುವ ಈ ಪ್ರಕರಣವು ಜಿಲ್ಲೆಯಾದ್ಯಂತ ಮತ್ತೊಮ್ಮೆ ಆತಂಕ ಮೂಡಿಸಿದ್ದು, ಅಧಿಕಾರಿಗಳು ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಲಾಗಿದೆ. ಸದ್ಯ ಶಂಕಿತರನ್ನು ವಶಕ್ಕೆ ಪಡೆದಿರುವ ಪೊಲೀಸರು ದಾಖಲೆಗಳ ಪರಿಶೀಲನೆ ಹಾಗೂ ತನಿಖೆಯನ್ನು ಕೈಗೊಂಡಿದ್ದು, ಈ ತನಿಖೆಯಿಂದಷ್ಟೇ ವಲಸಿಗರ ನೈಜ ಹಿನ್ನೆಲೆ ಮತ್ತು ಸ್ಪಷ್ಟ ಮಾಹಿತಿ ಹೊರಬರಬೇಕಿದೆ.