ಬಳ್ಳಾರಿ: ಪತಿಯ ಅಮಾನವೀಯ ಕಿರುಕುಳಕ್ಕೆ ಬೇಸತ್ತು ತಾಯಿಯೊಬ್ಬಳು ತನ್ನಿಬ್ಬರು ಹಸುಗೂಸುಗಳನ್ನು ಒಂದೇ ವೇಲ್ನಲ್ಲಿ ಕಟ್ಟಿ ತುಂಗಭದ್ರಾ ಕಾಲುವೆಗೆ ಎಸೆದು, ತಾನೂ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಬಳ್ಳಾರಿ ಹೊರವಲಯದ ಅಲ್ಲೀಪುರ ಬಳಿ ನಡೆದಿದೆ.
ಬಳ್ಳಾರಿ ನಗರದ ಮಿಲ್ಲರ್ಪೇಟೆ ನಿವಾಸಿ ಲತೀಪಾ ಸಿಮ್ರಾನ್ (29) ಹಾಗೂ ಆಕೆಯ ಮುದ್ದಾದ ಮಕ್ಕಳಾದ ಮಹಮ್ಮದ್ ಅಯಾನ್ (3) ಮತ್ತು ಆಯಿಷಾ ಫಾತಿಮಾ (2) ಜಲಸಮಾಧಿಯಾದ ದುರ್ದೈವಿಗಳು.
ಕಾಲುವೆಯಲ್ಲಿ ತೇಲಿಬಂದ ಶವಗಳು
ನಿನ್ನೆ ಸಂಜೆಯ ವೇಳೆ ಲತೀಪಾ ಸಿಮ್ರಾನ್ ಅವರು ಮಕ್ಕಳನ್ನು ಕರೆದುಕೊಂಡು ಅಲ್ಲೀಪುರ ಸಮೀಪದ ತುಂಗಭದ್ರಾ ಕಾಲುವೆ ಬಳಿ ತೆರಳಿದ್ದಾರೆ. ಅಲ್ಲಿ ಇಬ್ಬರೂ ಮಕ್ಕಳನ್ನು ಒಂದೇ ದುಪಟ್ಟಾ (ವೇಲ್)ದಿಂದ ಪರಸ್ಪರ ಬಿಗಿಯಾಗಿ ಕಟ್ಟಿ, ನೀರಿನ ರಭಸಕ್ಕೆ ಎಸೆದು ಬಳಿಕ ತಾವೂ ಕಾಲುವೆಗೆ ಹಾರಿದ್ದಾರೆ.
ಇಂದು ಮುಂಜಾನೆ ಅಲ್ಲೀಪುರ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ನೀರಿನ ಹರಿವಿಗೆ ಕೊಚ್ಚಿ ಹೋಗಿದ್ದ ಇಬ್ಬರು ಕಂದಮ್ಮಗಳ ಶವಗಳು ಕರ್ನಾಟಕ-ಆಂಧ್ರ ಗಡಿಭಾಗದ ನಾಗಲಾಪುರ ಬಳಿ ಕಾಲುವೆಯಲ್ಲಿ ಪತ್ತೆಯಾಗಿವೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರತೆಗೆದಿದ್ದಾರೆ.
ವರದಕ್ಷಿಣೆಗಾಗಿ ಪತಿಯಿಂದ ನಿರಂತರ ದೌರ್ಜನ್ಯ
ಲತೀಪಾ ಅವರ ಈ ಕಠಿಣ ನಿರ್ಧಾರಕ್ಕೆ ಪತಿ ಸದ್ದಾಂ ಹುಸೇನ್ ನೀಡುತ್ತಿದ್ದ ವರದಕ್ಷಿಣೆ ಕಿರುಕುಳವೇ ನೇರ ಕಾರಣ ಎಂದು ಮೃತಳ ಪೋಷಕರು ಕಣ್ಣೀರು ಹಾಕಿದ್ದಾರೆ. ಮದುವೆಯಾದಾಗಿನಿಂದಲೂ ಸದ್ದಾಂ ಹುಸೇನ್ ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ನಿತ್ಯವೂ ಆಕೆಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಮಾನಸಿಕ ಹಾಗೂ ದೈಹಿಕ ಯಾತನೆ ನೀಡುತ್ತಿದ್ದ. ತಾನು ಇಲ್ಲದಿದ್ದರೆ ಈ ಮುಗ್ಧ ಕಂದಮ್ಮಗಳಿಗೂ ಪತಿ ಹಾಗೂ ಆತನ ಮನೆಯವರು ಇದೇ ರೀತಿ ಚಿತ್ರಹಿಂಸೆ ನೀಡಬಹುದು ಎಂಬ ಭಯದಿಂದಲೇ ಲತೀಪಾ ಮಕ್ಕಳ ಸಮೇತ ಪ್ರಾಣಬಿಟ್ಟಿದ್ದಾರೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಪತಿ ಸೇರಿ ಆರು ಮಂದಿ ವಿರುದ್ಧ ಕೇಸ್
ಈ ದಾರುಣ ಘಟನೆಗೆ ಸಂಬಂಧಿಸಿದಂತೆ ಮೃತ ಲತೀಪಾ ಪೋಷಕರು ನೀಡಿದ ದೂರಿನ ಮೇರೆಗೆ ಪತಿ ಸದ್ದಾಂ ಹುಸೇನ್ ಸೇರಿದಂತೆ ಕುಟುಂಬದ ಆರು ಮಂದಿ ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.