ಶಿವಮೊಗ್ಗ: ಸಾಗರ ಮೂಲದ ಮಹಿಳೆಯೊಬ್ಬರಿಗೆ ನಡೆಸಲಾದ ಫೈಬ್ರಾಯ್ಡ್ ಗರ್ಭಾಶಯದ (Fibroid Uterus) ಶಸ್ತ್ರಚಿಕಿತ್ಸೆಯಿಂದ ಸಮಸ್ಯೆ ಉಂಟಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತನಿಖೆಗೆ ಆದೇಶಿಸಿದೆ. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನಾಲ್ವರು ತಜ್ಞ ವೈದ್ಯರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ನಾಳೆ ಈ ತಂಡವು ಸಾಗರಕ್ಕೆ ಭೇಟಿ ನೀಡಲಿದೆ. ಜೊತೆಗೆ ವೈದ್ಯ ಡಾ.ನಾಗೇಂದ್ರಪ್ಪ, ಸಂತ್ರಸ್ತೆಯನ್ನು ವಿಚಾರಣೆ ನಡೆಸಲಿದೆ.
ಸಾಗರದ ಶ್ರೀಧರ ನಗರ ನಿವಾಸಿ ಮಹಿಳೆಯೊಬ್ಬರಿಗೆ ಗರ್ಭಕೋಶದ ಶಸ್ತ್ರಚಿಕಿತ್ಸೆಯ ವೇಳೆ ತೊಂದರೆಯಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ದೂರು ಸಲ್ಲಿಕೆಯಾಗಿತ್ತು. ಈ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಆರೋಗ್ಯ ಇಲಾಖೆಯು ವಾಸ್ತವಾಂಶಗಳನ್ನು ಪರಿಶೀಲಿಸಲು ಮುಂದಾಗಿದೆ.
ತಜ್ಞ ವೈದ್ಯರ ಸಮಿತಿ ರಚನೆ
ಪ್ರಕರಣದ ತನಿಖೆಗಾಗಿ ಶಿವಮೊಗ್ಗ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಕಿರಣ್ ಎಸ್.ಕೆ. ಅವರ ಅಧ್ಯಕ್ಷತೆಯಲ್ಲಿ ನುರಿತ ವೈದ್ಯರನ್ನೊಳಗೊಂಡ ತಂಡವನ್ನು ನಿಯೋಜಿಸಲಾಗಿದೆ. ಈ ಸಮಿತಿಯಲ್ಲಿ:
-
ಡಾ. ಕಿರಣ್ ಎಸ್.ಕೆ. – ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು, ಶಿವಮೊಗ್ಗ
-
ಡಾ. ಪ್ರಕಾಶ್ – ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಎಂ.ಸಿ.ಹೆಚ್ ಆಸ್ಪತ್ರೆ, ಶಿಕಾರಿಪುರ
-
ಡಾ. ನವೀನ್ ಜಿ.ಎಸ್. – ಶಸ್ತ್ರಚಿಕಿತ್ಸಾ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಶಿಕಾರಿಪುರ
-
ಡಾ. ವಿನಯ್ ಬಿ.ಆರ್. – ಅರಿವಳಿಕೆ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಶಿಕಾರಿಪುರ
ನಾಳೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ವಿಚಾರಣೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 29, 2026ರಂದು ಬೆಳಗ್ಗೆ 10:30ಕ್ಕೆ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮುಖಾಮುಖಿ ವಿಚಾರಣೆ ನಿಗದಿಯಾಗಿದೆ.
ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಚಿಕಿತ್ಸಾ ದಾಖಲೆಗಳು, ವೈದ್ಯಕೀಯ ವರದಿಗಳು ಹಾಗೂ ಇತರ ಅಗತ್ಯ ದಾಖಲೆಗಳೊಂದಿಗೆ ನಿಗದಿತ ಸಮಯ ಮತ್ತು ಸ್ಥಳದಲ್ಲಿ ತಪ್ಪದೇ ಹಾಜರಾಗುವಂತೆ ಸಂತ್ರಸ್ತೆಗೆ ನೋಟಿಸ್ ಮೂಲಕ ಸೂಚಿಸಲಾಗಿದೆ. ಅಲ್ಲದೇ ಶಸ್ತ್ರಚಿಕಿತ್ಸೆ ವೇಳೆಯಲ್ಲಿ ಯಡವಟ್ಟು ಮಾಡಿದಂತ ವೈದ್ಯ ಡಾ.ನಾಗೇಂದ್ರಪ್ಪ ಅವರಿಗೂ ನೋಟಿಸ್ ನೀಡಲಾಗಿದ್ದು ಅವರನ್ನು ನಾಳೆ ತಜ್ಞರ ತಂಡವು ವಿಚಾರಣೆಗೆ ಒಳಪಡಿಸಲಿದೆ. ವಿಚಾರಣೆ ವೇಳೆ ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಮುಂದಿನ ಕ್ರಮಕ್ಕಾಗಿ ವರದಿ ಸಿದ್ಧಪಡಿಸಿ ಉನ್ನತ ಮಟ್ಟದ ಅಧಿಕಾರಿಗಳಿಗೆ ತಂಡ ಸಲ್ಲಿಸಲಿದೆ. ಆ ವರದಿ ಆಧರಿಸಿ ಯಾವ ಕ್ರಮ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..
