ಬೆಂಗಳೂರು: ಗೌರಿ-ಗಣೇಶ ಹಬ್ಬ ಹಾಗೂ ವಾರಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬೆಂಗಳೂರಿನಿಂದ ರಾಜ್ಯದ ವಿವಿಧ ಸ್ಥಳಗಳಿಗೆ ಮತ್ತು ಹೊರ ರಾಜ್ಯಗಳಿಗೆ ಒಟ್ಟು 2,400 ವಿಶೇಷ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ಸೆಪ್ಟೆಂಬರ್ 12 ಮತ್ತು 13ರ ವಾರಾಂತ್ಯ ಹಾಗೂ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿ ಇರುವ ಕಾರಣ, ಸೆಪ್ಟೆಂಬರ್ 11ರಿಂದ 13ರವರೆಗೆ ಬೆಂಗಳೂರಿನಿಂದ ಹೊರಡುವ ವಿಶೇಷ ಬಸ್‌ಗಳು ಸಂಚರಿಸಲಿವೆ. ಬಳಿಕ ಸೆಪ್ಟೆಂಬರ್ 14ರಿಂದ ರಾಜ್ಯದ ವಿವಿಧ ಊರುಗಳು ಮತ್ತು ಅಂತರರಾಜ್ಯಗಳಿಂದ ಬೆಂಗಳೂರಿಗೆ ಹಿಂದಿರುಗುವ ವಿಶೇಷ ಬಸ್‌ಗಳ ಸೇವೆ ಲಭ್ಯವಿರಲಿದೆ.
ಪ್ರಮುಖ ಬಸ್ ನಿಲ್ದಾಣಗಳಿಂದ ಮಾರ್ಗಗಳ ಹಂಚಿಕೆ
ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರಿನ ವಿವಿಧ ಪ್ರಮುಖ ನಿಲ್ದಾಣಗಳಿಂದ ಪ್ರತ್ಯೇಕ ಮಾರ್ಗಗಳ ಬಸ್‌ಗಳು ಕಾರ್ಯನಿರ್ವಹಿಸಲಿವೆ.
-
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್): ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್ ಹಾಗೂ ನೆರೆ ರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಇಲ್ಲಿಂದ ವಿಶೇಷ ಬಸ್‌ಗಳು ಹೊರಡಲಿವೆ.
-
ಮೈಸೂರು ರಸ್ತೆ ಬಸ್ ನಿಲ್ದಾಣ: ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ ಹಾಗೂ ಮಡಿಕೇರಿ ಭಾಗಕ್ಕೆ ತೆರಳುವ ಬಸ್‌ಗಳು ಈ ನಿಲ್ದಾಣದಿಂದ ಸಂಚರಿಸಲಿವೆ.
-
ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ (ಟಿಟಿಎಂಸಿ): ತಮಿಳುನಾಡು ಮತ್ತು ಕೇರಳ ರಾಜ್ಯಗಳ ಮಾರ್ಗಗಳಾದ ಮಧುರೈ, ಕುಂಭಕೋಣಂ, ಚೆನ್ನೈ, ಕೊಯಮತ್ತೂರು, ತಿರುಚಿರಾಪಳ್ಳಿ, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೋಝಿಕ್ಕೋಡ್ ಮೊದಲಾದ ಕಡೆಗಳಿಗೆ ತೆರಳುವ ಎಲ್ಲಾ ಪ್ರೀಮಿಯರ್ ವಿಶೇಷ ಬಸ್‌ಗಳು ಇಲ್ಲಿಂದ ಕಾರ್ಯಾಚರಣೆ ನಡೆಸಲಿವೆ.
ಮುಂಗಡ ಬುಕಿಂಗ್ ಮತ್ತು ವಿಶೇಷ ರಿಯಾಯಿತಿ
ವಿಶೇಷ ಬಸ್‌ಗಳಿಗೆ ಮುಂಗಡ ಆಸನ ಕಾಯ್ದಿರಿಸುವ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಪ್ರಯಾಣಿಕರು ಅಧಿಕೃತ ವೆಬ್‌ಸೈಟ್ www.ksrtc.karnataka.gov.in ಮೂಲಕ ಟಿಕೆಟ್ ಬುಕ್ ಮಾಡಬಹುದು. ಒಂದೇ ಟಿಕೆಟ್‌ನಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಪ್ರಯಾಣಿಕರು ಒಟ್ಟಿಗೆ ಬುಕಿಂಗ್ ಮಾಡಿದರೆ ಪ್ರಯಾಣ ದರದಲ್ಲಿ ಶೇಕಡ 5ರಷ್ಟು ರಿಯಾಯಿತಿ ದೊರೆಯಲಿದೆ. ಅದೇ ರೀತಿ ಹೋಗುವ ಮತ್ತು ಬರುವ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದರೆ, ಹಿಂದಿರುಗುವ ಪ್ರಯಾಣದ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ಸಿಗಲಿದೆ.
ನೆರೆ ರಾಜ್ಯಗಳಲ್ಲೂ ಬುಕಿಂಗ್ ಕೌಂಟರ್
ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪುದುಚೇರಿ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಪ್ರಮುಖ ನಗರಗಳಲ್ಲಿರುವ ಕೆಎಸ್‌ಆರ್‌ಟಿಸಿ ಮುಂಗಡ ಕಾಯ್ದಿರಿಸುವಿಕೆ ಕೌಂಟರ್‌ಗಳಲ್ಲೂ ಟಿಕೆಟ್ ಬುಕಿಂಗ್ ವ್ಯವಸ್ಥೆ ಮಾಡಲಾಗಿದೆ. ಬಸ್ ಹೊರಡುವ ಸ್ಥಳ ಮತ್ತು ಸಮಯದ ಮಾಹಿತಿಯು ಮುಂಗಡ ಕಾಯ್ದಿರಿಸಿದ ಟಿಕೆಟ್‌ನಲ್ಲಿ ಹಾಗೂ ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದ್ದು, ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಯಿಂಟ್ ಅನ್ನು ಸರಿಯಾಗಿ ಪರಿಶೀಲಿಸಿಕೊಳ್ಳುವಂತೆ ನಿಗಮ ತಿಳಿಸಿದೆ. ಇದರ ಜತೆಗೆ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನಿಗಮದ ವ್ಯಾಪ್ತಿಯ ಎಲ್ಲ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಂದಲೂ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..