ಬೆಂಗಳೂರು: ಸರ್ಕಾರದ ಮಹತ್ವಾಕಾಂಕ್ಷೆಯ 'ಗೃಹಲಕ್ಷ್ಮಿ' ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಜಮೆಯಾಗಬೇಕಿದ್ದ 2,000 ರೂ. ಮಾಸಿಕ ಕಂತು ಸಕಕಾಲಕ್ಕೆ ಬಾರದೆ ಇರುವುದು ಫಲಾನುಭವಿಗಳಲ್ಲಿ ತೀವ್ರ ನಿರಾಶೆ ಹಾಗೂ ಆತಂಕ ಮೂಡಿಸಿದೆ. ಗೌರಿ ಹಬ್ಬದ ಬಾಗಿನವಾಗಿ ಬರಬೇಕಿದ್ದ ಹಣ ಇದುವರೆಗೆ ಕೈ ಸೇರದಿರುವುದರಿಂದ, ದೀಪಾವಳಿಗಾದರೂ ಹಣ ಖಾತೆಗೆ ಜಮೆಯಾಗಬಹುದೇ ಎಂಬ ನಿರೀಕ್ಷೆಯಲ್ಲಿ ಮಹಿಳೆಯರು ಕಾಯುತ್ತಿದ್ದಾರೆ. ಹಣ ಬಾರದ ಕಾರಣ ದಿನನಿತ್ಯದ ಖರ್ಚುಗಳು, ಔಷಧೋಪಚಾರ ಹಾಗೂ ಸಣ್ಣಪುಟ್ಟ ಅಗತ್ಯಗಳನ್ನು ನಿಭಾಯಿಸಲು ಫಲಾನುಭವಿಗಳು ಪರದಾಡುವಂತಾಗಿದೆ.
ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ತಿಂಗಳಿಗೆ 2,000 ರೂ.ನಂತೆ ಪಾವತಿಸಲಾಗುತ್ತಿದ್ದು, ಕೇವಲ ಒಂದು ತಿಂಗಳಿಗೆ ಅಂದಾಜು 88.44 ಕೋಟಿ ರೂ. ಹಣದ ಅವಶ್ಯಕತೆಯಿದೆ. ಸದ್ಯ ಸುಮಾರು ಎರಡು ತಿಂಗಳ ಹಣ ಬಾಕಿಯಿದ್ದು, ಕೇವಲ ಒಂದು ಜಿಲ್ಲೆಯಲ್ಲೇ 176 ಕೋಟಿ ರೂ.ಗೂ ಅಧಿಕ ಮೊತ್ತ ಪಾವತಿಯಾಗಬೇಕಿದೆ. ಆಗಸ್ಟ್ನಿಂದ ಹಣ ಜಮೆಯಾಗದಿರುವ ಹಿನ್ನೆಲೆಯಲ್ಲಿ ಮಹಿಳೆಯರು ಬ್ಯಾಂಕ್ಗಳಿಗೆ ಅಲೆದಾಡುವುದು ಮತ್ತು ಇತರ ಫಲಾನುಭವಿಗಳಿಗೆ ಕರೆ ಮಾಡಿ ವಿಚಾರಿಸುವುದು ಸಾಮಾನ್ಯವಾಗಿದೆ. ಆದರೆ ಬಹುತೇಕ ಕಡೆಗಳಿಂದ ಹಣ ಜಮೆಯಾಗಿಲ್ಲ ಎಂಬ ನಿರಾಶಾದಾಯಕ ಉತ್ತರವೇ ಕೇಳಿಬರುತ್ತಿದೆ.
ಅರ್ಹರಲ್ಲದವರು ಹಾಗೂ ಆದಾಯ ತೆರಿಗೆ ಪಾವತಿದಾರರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸುವ ಪ್ರಕ್ರಿಯೆ ನಡೆಯಬೇಕಿದೆ. ಆದರೆ, ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕರ್ತವ್ಯಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿರುವುದರಿಂದ ಈ ಪರಿಷ್ಕರಣಾ ಕಾರ್ಯ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಅರ್ಹ ಫಲಾನುಭವಿಗಳಿಗೂ ಕೂಡ ಹಣ ತಲುಪಲು ವಿಳಂಬವಾಗುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.
ಅನರ್ಹರನ್ನು ಗುರುತಿಸುವ ಪ್ರಕ್ರಿಯೆ ಏನೇ ಇದ್ದರೂ, ದಿನನಿತ್ಯದ ಬದುಕಿಗಾಗಿ ಈ ಯೋಜನೆಯನ್ನೇ ನೆಚ್ಚಿಕೊಂಡಿರುವ ಅರ್ಹ ಮಹಿಳೆಯರಿಗೆ ಅನಗತ್ಯ ವಿಳಂಬವಿಲ್ಲದೆ ಹಣ ತಲುಪಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಸರ್ಕಾರದ ಕಡೆಯಿಂದ ಹಣ ಬಿಡುಗಡೆ ಹಾಗೂ ಪಾವತಿಯ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಸಿಗದೆ ಇರುವುದರಿಂದ ಫಲಾನುಭವಿಗಳು ಗೊಂದಲಕ್ಕೊಳಗಾಗಿದ್ದಾರೆ. ಇನ್ನು ಮುಂದಾದರೂ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಿ, ಬಾಕಿ ಇರುವ ಮೊತ್ತವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಮಹಿಳೆಯರು ಒತ್ತಾಯಿಸುತ್ತಿದ್ದಾರೆ.