ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪಗಳ ಕಾವು ಏರಿದೆ. ಈ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಮರ ಸಾರಿದ್ದು, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರು ಸಚಿವ ನಾಗೇಂದ್ರ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಅತ್ಯಂತ ಕಠಿಣ ಶಬ್ದಗಳಿಂದ ವಾಗ್ದಾಳಿ ನಡೆಸಿದ್ದಾರೆ.
ನಿಗಮದ ಲೇಖಾಪಾಲಕ (ಅಕೌಂಟೆಂಟ್) ಚಂದ್ರಶೇಖರನ್ ಅವರ ಆತ್ಮಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದ ಗಾಲಿ ಜನಾರ್ಧನ ರೆಡ್ಡಿ, "ನಿಜವಾದ ಶಂಭುಕ ಅಂದರೆ ಮೃತ ಅಧಿಕಾರಿ ಚಂದ್ರಶೇಖರನ್. ಕಾಂಗ್ರೆಸ್‌ನವರು ಚಂದ್ರಶೇಖರನ್ ಅವರನ್ನು ಕೊಲೆ ಮಾಡಿದ್ದಾರೆ," ಎಂದು ಗಂಭೀರ ಆರೋಪ ಮಾಡಿದರು. ಅಧಿಕಾರಿ ಸಾವಿಗೆ ಕಾರಣವಾಗಿ ಈಗ ರಾಮಾಯಣದ ಕಥೆಗಳನ್ನು ಹೇಳುತ್ತೀರಾ ಎಂದು ಆಕ್ರೋಶ ಹೊರಹಾಕಿದ ಅವರು, ನಾಗೇಂದ್ರ ಅವರ ವಿರುದ್ಧ ಹಿಗ್ಗಾಮುಗ್ಗಾ ಹರಿದಾಯ್ದಿದ್ದಾರೆ.
ಮುಂದುವರಿದು ಮಾತನಾಡಿದ ರೆಡ್ಡಿ, "ಅಧಿಕಾರಿ ಚಂದ್ರಶೇಖರ್ ಅವರ ಸಾವಿಗೆ ನೇರವಾಗಿ ಕಾಂಗ್ರೆಸ್ ಸರ್ಕಾರವೇ ಕಾರಣ. ರಾಮಾಯಣ ಕಾಲದ ಘಟನೆಗಳನ್ನು ಮತ್ತು ಪಾತ್ರಗಳನ್ನು ಉದಾಹರಣೆಗೆ ತಂದು ಹೋಲಿಕೆ ಮಾಡಲು ಈ ನಾಯಕರಿಗೆ ಯಾವುದೇ ಯೋಗ್ಯತೆ ಇಲ್ಲ. ಅಂತಹ ಮಾತುಗಳನ್ನು ನಿಮ್ಮ ಬಾಯಿಂದ ಹೇಳಲು ನಿನಗೆ ಯಾವುದೇ ಅರ್ಹತೆಯೂ ಇಲ್ಲ," ಎಂದು ಸಚಿವ ನಾಗೇಂದ್ರ ಅವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಗರಣದ ಸಂಪೂರ್ಣ ಸತ್ಯಾಂಶ ಹೊರಬರಲು ಈ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.