ಬೆಂಗಳೂರು: ಜ್ಯೋತಿಷ್ಯ ಹೇಳುವುದಾಗಿ ನಂಬಿಸಿ 62 ವರ್ಷದ ವೃದ್ಧೆಯೊಬ್ಬರಿಂದ ಬರೋಬ್ಬರಿ 300 ಗ್ರಾಂ ಚಿನ್ನಾಭರಣವನ್ನು ಪಡೆದು ವಂಚಿಸಿದ್ದ ನಕಲಿ ಜ್ಯೋತಿಷಿ ವೆಂಕಟೇಶ್ ಎಂಬಾತನನ್ನು ಬ್ಯಾಟರಾಯನಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ವಂಚನೆ ಎಸಗಿದ ಬಳಿಕ ಅಪಘಾತದ ಸುಳ್ಳು ಕಥೆ ಕಟ್ಟಿ ಆಂಧ್ರಪ್ರದೇಶಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಆತನಿಂದ 200 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಆಗಾಗ ವಿಕ್ಟೋರಿಯಾ ಆಸ್ಪತ್ರೆಗೆ ತೆರಳುತ್ತಿದ್ದ 62 ವರ್ಷದ ಶಾಂತಮ್ಮ ಎಂಬುವವರಿಗೆ ಆರೋಪಿ ವೆಂಕಟೇಶ್ ಪರಿಚಯವಾಗಿದ್ದನು. ತಮಗೆ ಕಾಡುತ್ತಿರುವ ಅನಾರೋಗ್ಯ, ಮಗನ ಕುಡಿತದ ಚಟ ಹಾಗೂ ಮಗಳ ಮದುವೆ ಕುರಿತು ಶಾಂತಮ್ಮ ಆತನ ಬಳಿ ಭವಿಷ್ಯ ಕೇಳಿದ್ದರು. ಆರಂಭದಲ್ಲಿ ಜ್ಯೋತಿಷಿ ಹೇಳಿದಂತೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದರಿಂದ ಆತನ ಮೇಲೆ ವೃದ್ಧೆಗೆ ವಿಶ್ವಾಸ ಮೂಡಿತ್ತು. ನಂತರ ಒಂದು ದಿನ ಜ್ಯೋತಿಷಿ ಸಿಗದ ಕಾರಣ ಶಾಂತಮ್ಮ ತನ್ನ ಫೋನ್ ನಂಬರನ್ನು ಆಟೋ ಚಾಲಕನ ಮೂಲಕ ವೆಂಕಟೇಶನಿಗೆ ತಲುಪಿಸಿದ್ದರು.
ನಂತರ ಶಾಂತಮ್ಮ ಅವರನ್ನು ಬ್ಯಾಟರಾಯನಪುರದ ಮನೆಯ ಬಳಿ ಕರೆಸಿಕೊಂಡಿದ್ದ ವಂಚಕ ವೆಂಕಟೇಶ್, ಚೌಡೇಶ್ವರಿ ಪೂಜೆ ಮಾಡಿಸಬೇಕು ಎಂದು ನಂಬಿಸಿದ್ದಾನೆ. ಮನೆಯಲ್ಲಿದ್ದ ಒಡವೆಗಳಿಗೆ ಪೂಜೆ ಮಾಡಿದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಹೇಳಿ, ವೃದ್ಧೆಯಿಂದ 300 ಗ್ರಾಂ ಚಿನ್ನಾಭರಣವನ್ನು ಪಡೆದು ಪರಾರಿಯಾಗಿದ್ದನು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಬ್ಯಾಟರಾಯನಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.