ವಿಜಯವಾಡ: ಮಾದಕ ವಸ್ತು ಜಾಲದಲ್ಲಿ ಸಿಲುಕಿ ಜೈಲು ಪಾಲಾಗಿದ್ದ ಪ್ರಿಯಕರನನ್ನು ಜಾಮೀನಿನ ಮೇಲೆ ಹೊರತರಲು ಹಣ ಹೊಂದಿಸಲು ಹೋಗಿ, ಸ್ವತಃ ಪ್ರಿಯತಮೆಯೇ ಡ್ರಗ್ಸ್ ಸಾಗಾಟ ಮಾಡುತ್ತಾ ಪೊಲೀಸರ ಅತಿಥಿಯಾದ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಬಂಧಿತ ಮಹಿಳೆಯನ್ನು ನಾಗ ಸೌಮ್ಯ ಎಂದು ಗುರುತಿಸಲಾಗಿದ್ದು, ಆಕೆಗೆ ಮಾದಕ ವಸ್ತು ಪೂರೈಸಿ ಸಾಗಾಟಕ್ಕೆ ಕುಮ್ಮಕ್ಕು ನೀಡಿದ್ದ ಬಶೀರ್ ಎಂಬ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು 110 ಗ್ರಾಂ ತೂಕದ ಎಂಡಿಎಂಎ (MDMA) ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ಹಿನ್ನೆಲೆ: ಮೂರು ತಿಂಗಳ ಹಿಂದೆ ಚಿತ್ತೂರಿನಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣವೊಂದರಲ್ಲಿ ನಾಗ ಸೌಮ್ಯಳ ಪ್ರಿಯಕರನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಆತನನ್ನು ಬಿಡಿಸಲು ಹಣದ ತುರ್ತು ಅಗತ್ಯವಿದ್ದ ಸೌಮ್ಯ, ಸುಲಭವಾಗಿ ಹಣ ಗಳಿಸುವ ಮಾರ್ಗ ಹುಡುಕುತ್ತಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಡ್ರಗ್ ಪೆಡ್ಲರ್ ಬಶೀರ್, ಬೆಂಗಳೂರಿನಿಂದ ವಿಜಯವಾಡಕ್ಕೆ ಮಾದಕ ವಸ್ತುಗಳನ್ನು ತಲುಪಿಸಿದರೆ 50,000 ರೂಪಾಯಿ ನೀಡುವುದಾಗಿ ಆಕೆಗೆ ಆಮಿಷ ಒಡ್ಡಿದ್ದ. ಹಣದಾಸೆಗೆ ಬಿದ್ದ ಆಕೆ ಬೆಂಗಳೂರಿನಿಂದ ವಿಜಯವಾಡಕ್ಕೆ ಎಂಡಿಎಂಎ ಸಾಗಿಸಲು ಒಪ್ಪಿಕೊಂಡಿದ್ದಳು.
ರೈಲು ನಿಲ್ದಾಣದಲ್ಲಿ ಮಾಲು ಸಮೇತ ಸೆರೆ: ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ವಿಜಯವಾಡ ರೈಲ್ವೆ ನಿಲ್ದಾಣದಲ್ಲಿ ಕಣ್ಗಾವಲು ಇರಿಸಿದ್ದರು. ರೈಲಿನಿಂದ ಇಳಿದು ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ನಾಗ ಸೌಮ್ಯಳನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಆಕೆಯ ಬಳಿ 110 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ತಕ್ಷಣವೇ ಆಕೆಯನ್ನು ಬಂಧಿಸಿದ ಪೊಲೀಸರು, ವಿಚಾರಣೆ ವೇಳೆ ಆಕೆ ಬಾಯ್ಬಿಟ್ಟ ಮಾಹಿತಿಯ ಮೇರೆಗೆ ಸಂಚಿನ ರೂವಾರಿ ಬಶೀರ್ನನ್ನು ಸಹ ವಶಕ್ಕೆ ಪಡೆದಿದ್ದಾರೆ.
ಕಾಲೇಜು ವಿದ್ಯಾರ್ಥಿಗಳೇ ಗುರಿ: ಬಶೀರ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆಘಾತಕಾರಿ ಸತ್ಯಗಳು ಬಯಲಾಗಿವೆ. ಈತ ಕಾಲೇಜು ಯುವಕ-ಯುವತಿಯರನ್ನೇ ಗುರಿಯಾಗಿಸಿಕೊಂಡು ವಿದ್ಯಾರ್ಥಿಗಳ ಮೂಲಕವೇ ಕಾಲೇಜು ಆವರಣಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಿಸುತ್ತಿದ್ದ ಜಾಲ ನಡೆಸುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರು ಇಬ್ಬರ ವಿರುದ್ಧ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಜಾಲದ ಹಿಂದೆ ಇನ್ನಾರಿದ್ದಾರೆ ಎಂಬ ಕುರಿತು ತನಿಖೆ ಮುಂದುವರಿಸಿದ್ದಾರೆ.