ಶಿವಮೊಗ್ಗ: ರಾಘವೇಂದ್ರ ಸ್ವಾಮಿಗಳು ಮಧ್ವಾಚಾರ್ಯರ ಅನುಯಾಯಿಯಾಗಿ ದ್ವೈತ ಸಿದ್ಧಾಂತದ ಮಹತ್ವವನ್ನು ವ್ಯವಸ್ಥಿತವಾಗಿ ಸಮಾಜಕ್ಕೆ ಪರಿಚಯಿಸಿದರು ಎಂದು ಸಾಗರದಲ್ಲಿ ಡಾ. ಗುರುರಾಜ್ ಕಲ್ಲಾಪುರ ಅಭಿಪ್ರಾಯಪಟ್ಟರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಧ್ವಸಂಘದ ವತಿಯಿಂದ ಆಯೋಜಿಸಲಾಗಿರುವ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಾಯಕ ರಾಘವೇಂದ್ರ ಬೀಜಾಡಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕಲಿಯುಗದ ಕಲ್ಪವೃಕ್ಷ, ಕಾಮಧೇನು ಎಂದೇ ಖ್ಯಾತರಾಗಿರುವ ರಾಯರು, ಸಶರೀರವಾಗಿ ಬೃಂದಾವನದಲ್ಲಿದ್ದುಕೊಂಡೇ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದಾರೆ. ತಮ್ಮ ಮಹಿಮೆಗಳ ಮೂಲಕವೇ ಭಕ್ತಿ ಹಾಗೂ ಭಗವಂತನ ಮಹತ್ವವನ್ನು ಜಗತ್ತಿಗೆ ಸಾರಿದ ರಾಯರ ಭಕ್ತವೃಂದ ವಿಶ್ವವ್ಯಾಪಿಯಾಗಿದೆ ಎಂದರು.
ಸ್ವಾಮೀಜಿಯವರು ರಚಿಸಿರುವ ಪ್ರಾತಃಸಂಕಲ್ಪಗದ್ಯ, ಭಾವದೀಪ, ನ್ಯಾಯದೀಪ, ಪರಿಮಳ ಸೇರಿದಂತೆ 48ಕ್ಕೂ ಹೆಚ್ಚು ಕೃತಿಗಳು ಹಾಗೂ ಗೀತೆಗಳು ಜನಮಾನಸದಲ್ಲಿವೆ. ಅವರ ಕೃತಿ ರತ್ನಗಳ ಅಭ್ಯಾಸ ಮತ್ತು ಅಧ್ಯಯನದ ಪರಂಪರೆ ನಿರಂತರವಾಗಿ ಮುಂದುವರಿಯಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗಾಯಕ ರಾಘವೇಂದ್ರ ಬೀಜಾಡಿ, ವಿಶ್ವದಾದ್ಯಂತ ಗುರುರಾಯರ ಆರಾಧನೆ ಸಂಭ್ರಮದಿಂದ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಗುರುಗಳ ಅನುಗ್ರಹ ಲಭಿಸಿರುವುದು ಸೌಭಾಗ್ಯ. 'ಹರಿಸರ್ವೋತ್ತಮ' ತತ್ವ ಸಾರುವ ಹರಿದಾಸರ ಕೀರ್ತನೆಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಧ್ವಸಂಘದ ಅಧ್ಯಕ್ಷ ವೆಂಕಟೇಶ್ ಕಟ್ಟಿ ಮಾತನಾಡಿ, ಆರಾಧನೆ ಅಂಗವಾಗಿ 3 ದಿನಗಳ ಕಾಲ ರಾಯರ ಅಷ್ಟೋತ್ತರ ಪಾರಾಯಣ, ಭಜನೆ ಹಾಗೂ ಧಾರ್ಮಿಕ ಉಪನ್ಯಾಸಗಳು ನಡೆಯಲಿವೆ. ಭಾನುವಾರ ನಡೆಯುವ ಆರಾಧನಾ ಸಮಾರಂಭದಲ್ಲಿ ಅರ್ಚಕ ರಾಮಚಂದ್ರ ಭಟ್ ದಂಪತಿಗೆ 'ರಾಯರ ಅನುಗ್ರಹ' ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಶ್ರೀಶಾಚಾರ್, ವೈ. ಮೋಹನ್, ದೀಪಕ್ ಕಲ್ಯಾಣಿ, ಶ್ರೀಧರ್ ಬೋಜಾ, ಆನಂದ ಕಲ್ಯಾಣಿ, ಶಾಂತಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.