ಬೆಂಗಳೂರು : ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರವಾಗಿ ತಮ್ಮನ್ನು ಫಿಕ್ಸ್ ಮಾಡಲು ಯತ್ನ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತೀವ್ರವಾಗಿ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರ ರಾಜಕೀಯ ವಾಗ್ದಾಳಿಗಳನ್ನು ತಳ್ಳಿಹಾಕುವುದರ ಜೊತೆಗೆ, ಏಕವಚನದಲ್ಲಿ ಮಾತನಾಡಿದರೆ ತಾವು ಎಂದಿಗೂ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರಸ್ವಾಮಿ ಅವರ ಹೇಳಿಕೆಗಳಿಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಿಯಾಂಕ್ ಖರ್ಗೆ, "ನಾನು ಮಾತನಾಡಲು ಶುರು ಮಾಡಿದರೆ ಇನ್ನೊಮ್ಮೆ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ" ಎಂದು ತೀವ್ರವಾಗಿ ಎಚ್ಚರಿಸಿದರು. ಅಲ್ಲದೆ, "ನಾನು ಆರ್ಎಸ್ಎಸ್ ಗೇ ಹೆದರಲಿಲ್ಲ, ಇನ್ನು ನಿಮಗೆ ಏಕೆ ಹೆದರಲಿ? ನಾವು ಎಲ್ಲರಿಗೂ ಮರ್ಯಾದೆ ಕೊಟ್ಟು ಮಾತನಾಡುತ್ತಿದ್ದೇವೆ, ಆದರೆ ನೀವೇ ನಿಮ್ಮ ಗೌರವವನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ" ಎಂದು ವಾಗ್ದಾಳಿ ನಡೆಸಿದರು.
"ತಾಕತ್ತಿದ್ದರೆ ನನ್ನನ್ನು ಅರೆಸ್ಟ್ ಮಾಡಲಿ" ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಸವಾಲಿಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ತಪ್ಪು ಮಾಡಿದ್ದರೆ ಖಂಡಿತಾ ಅರೆಸ್ಟ್ ಮಾಡುತ್ತೇವೆ, ಆದರೆ ಬರೀ ಗಾಳಿಯಲ್ಲಿ ಗುಂಡು ಹಾರಿಸುವುದನ್ನು ಬಿಟ್ಟು ನಿಮ್ಮ ಬಳಿ ಏನಾದರೂ ದೃಢವಾದ ದಾಖಲೆಗಳಿದ್ದರೆ ಒದಗಿಸಿ ಎಂದು ಸವಾಲು ಹಾಕಿದರು. ಇನ್ನು ಎಇಇ ಹಾಗೂ ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣಗಳ ಕುರಿತು ಮಾತನಾಡುತ್ತಾ, ಕೆಪಿಎಸ್ಸಿ ಪ್ರಕರಣದಲ್ಲಿ ಐಎಎಸ್ ಅಧಿಕಾರಿಗಳು ಹಾಗೂ ಬ್ರೋಕರ್ಗಳನ್ನು ಬಂಧಿಸಿದ್ದು ನಮ್ಮ ಸರ್ಕಾರ ಎಂದು ತಿಳಿಸಿದರು. ಕುಮಾರಸ್ವಾಮಿ ಅವರು ಕಮಿಷನರ್ ಕಚೇರಿಗೆ ಭೇಟಿ ನೀಡಿದ ವಿಚಾರದ ಕುರಿತು ಮಾತನಾಡಿ, ಅಲ್ಲಿಗೆ ಹೋಗಿ ನೇರವಾಗಿ ದೂರು ನೀಡಲಿ ಎಂದರು.