ಕಲಬುರಗಿ: 4 ತಿಂಗಳ ಗರ್ಭಿಣಿಯೊಬ್ಬರು ಪತಿಯ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ತಾಲ್ಲೂಕಿನ ಔರಾದ್ (ಬಿ) ಗ್ರಾಮದಲ್ಲಿ ನಡೆದಿದೆ.
ಶೃತಿ (22) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿ. ಪ್ರೀತಿಸಿ ಮದುವೆಯಾದ ಪತಿ ನಿರಂತರ ಕಿರುಕುಳ ನೀಡುತ್ತಿದ್ದನಂತೆ. ಪತ್ನಿ ಗರ್ಭಿಣಿ ಎಂಬುದನ್ನೂ ಲೆಕ್ಕಿಸದೇ ಹಿಂಸಿಸುತ್ತಿದ್ದನಂತೆ ಪತಿ ಕಾಟಕ್ಕೆ ನೊಂದು ಶೃತಿ ತವರು ಮನೆಗೆ ಬಂದಿದ್ದಳು. ಈ ವೇಳೆ ತವರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎರಡು ವರ್ಷಗಳ ಹಿಂದೆ ಶೃತಿಯನ್ನು ಗೋಪಾಲ್ ಎಂಬಾತ ಪ್ರೀತಿಸಿ ಮದುವೆಯಾಗಿದ್ದ. ಆದರೆ, ಗೋಪಾಲ್ ಕುಡಿತ, ಜೂಜಾಟ ಹಾಗೂ ದುಶ್ಚಟಗಳಿಗೆ ದಾಸನಾಗಿದ್ದ. ಗೋಪಾಲ್, ಸಾಲ ತೀರಿಸಲು ಮನೆ ಮಾರಲು ಮುಂದಾಗಿದ್ದ. ಇದಕ್ಕೆ ಶೃತಿ ಸಹಿ ಹಾಕದಿದ್ದಾಗ ಆಕೆಗೆ ಮನಬಂದಂತೆ ಥಳಿಸಿ, ತಾಳಿ ಕಿತ್ತುಕೊಂಡು ದೌರ್ಜನ್ಯ ಎಸಗಿದ್ದ.
ಗರ್ಭಿಣಿಯಾಗಿದ್ದ ಶೃತಿ, ಗಂಡನ ಕುಡಿತದ ಚಟಕ್ಕೆ ಇರುವ ಒಂದು ಮನೆಯನ್ನೂ ಕಳೆದುಕೊಂಡರೆ ಮುಂದೆ ಗತಿಯೇನು? ಎಂಬ ಚಿಂತೆಯಲ್ಲಿದ್ದರು. ಗಂಡನ ಕಾಟ ತಾಳಲಾರದೆ 15 ದಿನಗಳ ಹಿಂದೆ ಶೃತಿ ತವರು ಮನೆ ಸೇರಿದ್ದರು. ಆದರೆ, ಅಲ್ಲಿಗೂ ಬಂದ ಗೋಪಾಲ್ ಮತ್ತೆ ಗಲಾಟೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದ ಮನನೊಂದ ಶೃತಿ ತವರು ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೃತಿ ಪೋಷಕರ ದೂರಿನ ಮೇರೆಗೆ ಪತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669