'ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ್ದೀರಿ'
ಸಿದ್ದರಾಮಯ್ಯ ಅವರ ರಾಜಕೀಯ ತೇಜೋವಧೆಗೆ ನಡೆದ ಸ್ಟಿಂಗ್ ಸಂಚಿನಲ್ಲಿ ಪ್ರಿಯಾಂಕ್ ಖರ್ಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಹೆಚ್ಡಿಕೆ, "ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿರುವ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್. ನಿಮ್ಮ ಪಕ್ಷದ ಹಿರಿಯ ನಾಯಕನನ್ನೇ ಗುರಿಯಾಗಿಸಿಕೊಂಡ ನಟೋರಿಯಸ್ ವ್ಯಕ್ತಿಯನ್ನು ಬಂಧಿಸುವ ಯೋಗ್ಯತೆ ನಿಮಗಿಲ್ಲ. ಆತ ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿವೃತ್ತ ಐಪಿಎಸ್ ಅಧಿಕಾರಿಗೆ ಕೊಲೆ ಬೆದರಿಕೆ ಹಾಕುತ್ತಾನೆ, ಪೊಲೀಸ್ ಅಧಿಕಾರಿಗಳನ್ನೇ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡುತ್ತಾನೆ. ಅಂತಹವನನ್ನು ಸೆದೆಬಡಿಯುವುದು ಬಿಟ್ಟು ಪುಂಗಿ ಊದುತ್ತಿದ್ದೀರಿ," ಎಂದು ಪೊಲೀಸರ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ಮೀಸಲು ಕ್ಷೇತ್ರ ಬಿಟ್ಟು ಜನರಲ್ನಿಂದ ಸ್ಪರ್ಧಿಸಿ'
ಖರ್ಗೆ ಕುಟುಂಬದ ರಾಜಕೀಯ ಹಿನ್ನೆಲೆಯನ್ನು ಕೆದಕಿರುವ ಕೇಂದ್ರ ಸಚಿವರು, "ಸಿದ್ದಾರ್ಥ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಲೂಟಿ ಮಾಡಿದ 'ಬಲಿತ ದಲಿತ'ರೇ, ನಿಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತರಿಗೆ ಬಿಟ್ಟುಕೊಟ್ಟು, ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ. ನಿಮಗೆ ಮತ್ತು ನಿಮ್ಮ ತಂದೆಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ ಅನುಭವಿಸುತ್ತೀರಿ? ಅಸಲಿ ದಲಿತರಿಗೆ ಅಧಿಕಾರ ಕೊಡಿ," ಎಂದು ಸವಾಲೆಸೆದಿದ್ದಾರೆ.
'ಅಂಗಲಾಚುವ ಜಾಯಮಾನ ನನ್ನದಲ್ಲ'
ತಮ್ಮ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿರುವುದಕ್ಕೆ ಎಚ್ಚರಿಕೆ ನೀಡಿರುವ ಕುಮಾರಸ್ವಾಮಿ, "ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಚೆನ್ನಾಗಿ ಗೊತ್ತು. ರಣರಂಗದಿಂದ ಓಡುವುದು ನನ್ನ ಜಾಯಮಾನವಲ್ಲ. ನಾನು ಕೆಪಿಎಸ್ಸಿ ಹಾಗೂ ಸ್ಟಿಂಗ್ ವಿಚಾರಗಳನ್ನು ಪ್ರಸ್ತಾಪಿಸುತ್ತಿದ್ದಂತೆ ನೀವು ಎಲ್ಲೆಲ್ಲಿ ರನ್ನಿಂಗ್ ರೇಸ್ ಮಾಡಿದ್ದೀರಿ ಎಂಬುದು ನನಗೆ ತಿಳಿದಿದೆ. ಈ ಕುಮಾರಸ್ವಾಮಿ ಯಾರ ಮುಂದೆಯೂ ಅಂಗಲಾಚುವವನಲ್ಲ. ನಾನು ಪೊಲೀಸ್ ಕಮಿಷನರ್ ಬಳಿ ಏನು ಮಾತನಾಡಿದ್ದೇನೆ ಎಂಬುದನ್ನು ತಿಳಿದುಕೊಳ್ಳಿ," ಎಂದು ಗುಡುಗಿದ್ದಾರೆ.
ಅಲ್ಲದೆ, ಈ ಇಡೀ ಷಡ್ಯಂತ್ರದ ಕೇಂದ್ರಬಿಂದುವಾಗಿರುವ 'ಸ್ಟಿಂಗ್ ಸಾಮ್ರಾಟ'ನ ಸಿಂಡಿಕೇಟ್ನಲ್ಲಿ ಪ್ರಿಯಾಂಕ್ ಖರ್ಗೆ ಅವರೂ ಒಬ್ಬರಾಗಿದ್ದಾರೆ ಎಂಬುದು ತಮಗೆ ಸಂಪೂರ್ಣ ಖಚಿತವಾಗಿದೆ ಎಂದು ಕುಮಾರಸ್ವಾಮಿ ಹೇಳಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.