ಬೆಂಗಳೂರು: ಕುಮಾರಸ್ವಾಮಿ ಅವರಿಗೆ ಈಗಾಗಲೇ ಮೂರನೇ ಸಲ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ನಾಲ್ಕನೇ ಸಲ ಓಪನ್ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ನಾಲಿಗೆ ಜಾರಿರುವ ಬಗ್ಗೆ, ಜನರ ಹಿತಕ್ಕಾಗಿ ದುಡಿಯುತ್ತಿರುವ ನನಗೆ ಅವರ ಇಚ್ಛೆಯಂತೆ ನಾಲ್ಕನೇ ಬಾರಿಗೆ ಹೃದಯಾಘಾತ ಆಗಲಿ ಎಂದರು.
ಅವರು ನನ್ನ ಸಾವು ಬಯಸುತ್ತಿದ್ದಾರೆ. ಆದರೆ, ನಾನು ಜನರ ಹಿತದ ದೃಷ್ಟಿಯಿಂದ ಹೋರಾಟ ನಡೆಸುತ್ತಿದ್ದೇನೆ. ನನಗೆ ನಾಲ್ಕನೇ ಬಾರಿ ಹೃದಯಾಘಾತ ಆಗಿಬಿಡಲಿ, ಓಪನ್ ಹಾರ್ಟ್ ಸರ್ಜರಿ ಆಗಲಿ ಎನ್ನುವುದು ಗೃಹ ಸಚಿವರ ಬಯಕೆಯಾಗಿದೆ. ಆದರೆ ಆ ಮಟ್ಟಕ್ಕೆ ನನ್ನನ್ನು ತೆಗೆದುಕೊಂಡು ಹೋಗಲು ಅವರು ತೀರ್ಮಾನ ಮಾಡಿದ್ದರೂ ನನ್ನನ್ನು ಕಾಪಾಡಲು ಭಗವಂತನಿದ್ದಾನೆ ಎಂದರು.
ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು;
ಸಂಶಯ ಬಂದರೆ ಕುಮಾರಸ್ವಾಮಿ ಅವರನ್ನೂ ತನಿಖೆ ಮಾಡುತ್ತೇವೆ ಎಂಬ ಗೃಹ ಸಚಿವರ ಹೇಳಿಕೆಗೆ ತೀವ್ರವಾಗಿ ಕೆರಳಿದ ಹೆಚ್ಡಿಕೆ; ಅವರ ಉದ್ದಟತನ, ಆ ಅಧಿಕಾರದ ಮದ ಇದೆಯಲ್ಲ, ಆ ಮದವನ್ನು ಇಳಿಸುವುದು ಹೇಗೆ ಎಂದು ನಮಗೆ ಗೊತ್ತಿದೆ. ಅದನ್ನು ಇಳಿಸೋಣಂತೆ ಎಂದು ನೇರ ಸವಾಲು ಹಾಕಿದರು.
ಇದೇ ವೇಳೆ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಕ್ಕೆ ನೊಂದು ಮಾತನಾಡಿದ ಕೇಂದ್ರ ಸಚಿವರು; ನನಗೆ ನಾಲ್ಕನೇ ಬಾರಿ ಹೃದಯಾಘಾತ ಆಗಿಬಿಡಲಿ, ಓಪನ್ ಹಾರ್ಟ್ ಸರ್ಜರಿ ಆಗಲಿ ಎನ್ನುವುದು ಗೃಹ ಸಚಿವರ ಬಯಕೆಯಾಗಿದೆ; ಆದರೆ ಆ ಮಟ್ಟಕ್ಕೆ ನನ್ನನ್ನು ತೆಗೆದುಕೊಂಡು ಹೋಗಲು ಅವರು ತೀರ್ಮಾನ ಮಾಡಿದ್ದರೂ ನನ್ನನ್ನು ಕಾಪಾಡಲು ಭಗವಂತನಿದ್ದಾನೆ ಎಂದರು.
ಗೃಹ ಸಚಿವರೇ ನಿಮ್ಮ ಹಣೆಬರಹ ಗೊತ್ತಾಗಲ್ವಾ?:
ಕೆಪಿಎಸ್ಸಿ ಹಗರಣದ ತನಿಖೆಗೆ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸರ್ಕಾರದ ಕ್ರಮವನ್ನು ಖಂಡಿಸಿದ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನೇರವಾಗಿ ಪ್ರಶ್ನಿಸಿದರು.
ಯಾವ ಕೆಪಿಎಸ್ಸಿ ಬಗ್ಗೆ ಇವತ್ತು ಯಾವ ಉತ್ತರ ಕೊಟ್ಟಿದ್ದೀರಿ ಪ್ರಿಯಾಂಕ ಖರ್ಗೆಯವರೇ? ನಾಲ್ಕು ಅಧಿಕಾರಿಗಳ ನೇಮಕವನ್ನು ಹೈಕೋರ್ಟ್ ಆದೇಶಿಸಿದರೆ, ಸುಪ್ರೀಂ ಕೋರ್ಟ್ಗೆ ಯಾಕೆ ಹೋದ್ರಿ? ನಿಮ್ಮ ಗೃಹ ಇಲಾಖೆಯಲ್ಲಿ ನಿಮಗೆ ಬೇಕಾದವರನ್ನೇ ಹಾಕಬೇಕು ಅಂತ ತೀರ್ಮಾನ ಮಾಡಿದ್ದೀರಿ; ನಿಮಗೆ ಬೇಕಾದ ರೀತಿಯಲ್ಲಿ ತನಿಖೆ ಬರೆಸಿಕೊಳ್ಳುತ್ತಿರುವುದನ್ನು ನೋಡಿದರೆ, ಇಲ್ಲಿ ಗೊತ್ತಾಗಲ್ವಾ ನಿಮ್ಮ ಹಣೆಬರಹ? ಎಂದು ಅವರು ತೀವ್ರ ವಾಗ್ದಾಳಿ ನಡೆಸಿದರು.
ಗೃಹ ಸಚಿವರಿಗೆ 'ಲಗಾಮು' ಹಾಕಿ:
ಮುಖ್ಯಮಂತ್ರಿಗಳು ತಮ್ಮ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಗೃಹ ಸಚಿವರು ಪ್ರತಿದಿನ ಬೆಳಿಗ್ಗೆ ಎದ್ದು ಮಾತನಾಡುತ್ತಿದ್ದಾರೆ ಎಂದ ಕುಮಾರಸ್ವಾಮಿಯವರು, ಆ ಗೃಹ ಸಚಿವರಿಗೆ, ಆ ಮಂತ್ರಿಗೆ ಮೊದಲು ಲಗಾಮು ಹಾಕಿ. ಲಗಾಮು ಇಟ್ಟುಕೊಂಡು ಸರಿಯಾದ ದಾರಿಯಲ್ಲಿ ಕೆಲಸ ಮಾಡಿ ಎಂದು ಆಕ್ರೋಶದಿಂದ ಹೇಳಿದರು. ನೀವು ಕೆರಳಿಸಿ ಮಾತನಾಡುವುದರಿಂದಲೇ, ನಾವು ನಿಮಗೆ ಅದೇ ಭಾಷೆಯಲ್ಲಿ ಪ್ರತ್ಯುತ್ತರ ಕೊಡಬೇಕಾಗಿದೆ ಎಂದು ಅವರು ಖಡಕ್ ಎಚ್ಚರಿಕೆ ನೀಡಿದರು.
ಇನ್ಯಾವ ಕಥೆ ಕಟ್ಟಲು ಮೌನಕ್ಕೆ ಶರಣಾಗಿದ್ದೀರಿ?:
ರಾಜ್ಯದ ಮುಖ್ಯಮಂತ್ರಿಗಳಿಗೆ ಆಡಳಿತದ ಜವಾಬ್ದಾರಿ ಹಾಗೂ ಅರಿವಿದೆಯೇ ಎಂದು ಪ್ರಶ್ನಿಸಿದ ಅವರು, ಕ್ಯಾಬಿನೆಟ್ ರಹಸ್ಯ ಲೀಕ್ ಮಾಡಿದವರು ಯಾರು ಎಂದರೆ ಕಾಲವೇ ಉತ್ತರ ಕೊಡುತ್ತೆ ಎಂದು ಪ್ರತಿದಿನ ಭಜನೆ ಮಾಡುತ್ತಿದ್ದಾರೆ; ಇನ್ಯಾವ ಸ್ಟೋರಿಯನ್ನು ಸೆಟಪ್ ಮಾಡಿಕೊಳ್ಳಲು ಹೀಗೆ ಮೌನಕ್ಕೆ ಶರಣಾಗಿದ್ದಾರೆ? ಎಂದು ಸಿಎಂ ಸಿದ್ದರಾಮಯ್ಯನವರ ಮೌನದ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ಅಧಿಕಾರ ಇಟ್ಟುಕೊಂಡು ಇನ್ನು ಯಾರ್ಯಾರ ಕುಟುಂಬಗಳನ್ನು ಹಾಳು ಮಾಡಬೇಕೋ ಮಾಡಿ, ನಾವು ತನಿಖೆ ಎದುರಿಸಲು ಇಲ್ಲೇ ಕೂರುತ್ತೇವೆ ಎಂದು ಅವರು ಸರ್ಕಾರಕ್ಕೆ ನೇರ ಸವಾಲೆಸೆದರು.
ಕ್ಯಾಬಿನೆಟ್ ರಹಸ್ಯ ಸೋರಿಕೆ, ಕಾರ್ಯಕರ್ತರ ಬಂಧನ ಹಾಗೂ ಕೆಪಿಎಸ್ಸಿ ಅಕ್ರಮದ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಕೋಪದಿಂದ ವಾಗ್ದಾಳಿ ನಡೆಸಿದರು.
ತಮ್ಮ ವಿರುದ್ಧ 164 ಅಡಿಯಲ್ಲಿ ಸುಳ್ಳು ಹೇಳಿಕೆಗಳನ್ನು ಬರೆಸಿಕೊಳ್ಳುವ ಷಡ್ಯಂತ್ರ ನಡೆಯುತ್ತಿದೆ ಎಂಬ ಸುದ್ದಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ನಾನು 164 ಅಥವಾ 420 ಪ್ರಕರಣಗಳಿಗೂ ಹೆದರುವುದಿಲ್ಲ. ಅಸಲಿ 420ಗಳು ವಿಧಾನಸೌಧದಲ್ಲಿ ಮೌನಕ್ಕೆ ಶರಣಾಗಿ ಕೂತಿದ್ದಾರೆ ಎಂದು ಏಕವಚನದಲ್ಲೇ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.