ಪ್ರಧಾನಿ ನರೇಂದ್ರ ಮೋದಿ ಹೊಸ ಬಯೋಪಿಕ್ : ಮೋದಿ ಪಾತ್ರದಲ್ಲಿ ಕಟ್ಟಪ್ಪ?
ಪ್ರಧಾನಿ ಮೋದಿ ಜೀವನದ ಕುರಿತು ಮತ್ತೊಂದು ಸಿನಿಮಾ ಸಿದ್ಧವಾಗುತ್ತಿದ್ದು, ಬಾಹುಬಲಿ ಖ್ಯಾತಿಯ ಕಟ್ಟಪ್ಪ ನರೇಂದ್ರ ಮೋದಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. 2019ರ ಲೋಕಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಅವರ ಜೀವನಾಧಾರಿತ ಪಿಎಂ ನರೇಂದ್ರ ಮೋದಿ ಸಿನಿಮಾ ತೆರೆಕಂಡಿತ್ತು. ಆದರೆ ನಿರೀಕ್ಷಿಸಿದ ಮಟ್ಟದಲ್ಲಿ ಸಿನಿಮಾ ಹಿಟ್ ಆಗಿರಲಿಲ್ಲ. ಈಗ ಮತ್ತೊಂದು ಸಿನಿಮಾ ಸಿದ್ಧವಾಗುತ್ತಿದ್ದು, ಪ್ರೇಕ್ಷಕರನ್ನು ಸೆಳೆಯಲೇಬೇಕಾದ ಕೆಲವು ಪ್ರಮುಖ ಘಟನೆಗಳ ಕಥೆಯನ್ನು ತೆರೆ ಮೇಲೆ ತರಲು ಚಿತ್ರತಂಡ ಸಿದ್ಧವಾಗುತ್ತಿದೆ. ಬಾಹುಬಲಿ ಖ್ಯಾತಿಯ ಕಟ್ಟಪ್ಪ ಅಂದರೆ ನಟ ಸತ್ಯರಾಜ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ನಟಿಸಲಿದ್ದು, ಸತ್ಯರಾಜ್‌ಗೆ ಈ ದೊಡ್ಡ ಆಫರ್ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸತ್ಯರಾಜ್ ಅವರ ಲುಕ್, ಗಡ್ಡ, ಎತ್ತರ ಬಹುತೇಕ ನರೇಂದ್ರ ಮೋದಿಯವರನ್ನೇ ಹೋಲುವಂತಿದೆ ಎಂದು ನಿರ್ದೇಶಕರು ಮೋದಿ ಪಾತ್ರಕ್ಕೆ ಅವರೇ ಸೂಕ್ತ ಎಂದು ನಿರ್ಧರಿಸಿದ್ದಾರಂತೆ. ಪ್ರಧಾನಿ ಮೋದಿ ಬಯೋಪಿಕ್ ನಲ್ಲಿ ಸತ್ಯರಾಜ್ ನಟಿಸಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅವರೇ ಸೂಕ್ತ ಆಯ್ಕೆ ಎಂದು ಅನೇಕರು ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಬಾರಿ ಮೋದಿಯವರ ಬಯೋಪಿಕ್ ತಮಿಳಿನಲ್ಲಿ ತಯಾರಾಗಲಿದೆ ಎನ್ನಲಾಗುತ್ತಿದೆ. ಅಲ್ಲದೇ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಅಥವಾ ಅಕ್ಟೋಬರ್ ಮಧ್ಯದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಸದ್ಯ ಸಿನಿಮಾಗೆ 'ವಿಶ್ವನೇತ' ಎಂದು ಟೈಟಲ್ ಅಂತಿಮ ಮಾಡಲಾಗಿದೆಯಂತೆ. ಆದರೆ, ಈ ಸಿನಿಮಾದ ನಿರ್ದೇಶಕರು ಯಾರು?, ನಿರ್ಮಾಪಕರು ಯಾರು? ಸತ್ಯರಾಜ್ ಹೊರತು ಪಡಿಸಿ ಉಳಿದ ನಟರು ಯಾರು? ಎನ್ನುವ ಮಾಹಿತಿಗಳು ಈವರೆಗೂ ಬಹಿರಂಗವಾಗಿಲ್ಲ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.