Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬೆಂಗಳೂರು–ಮುಂಬೈ ಸ್ಲೀಪರ್ ವಂದೇ ಭಾರತ್‌ ರೈಲು: ಬೆಳಗಾವಿ ಮಾರ್ಗದ ಪರ ಪ್ರಧಾನಿ ನರೇಂದ್ರ ಮೋದಿಗೆ ಮನವಿ

ಬೆಳಗಾವಿ: ಬೆಂಗಳೂರು–ಮುಂಬೈ ನಡುವೆ ಪ್ರಸ್ತಾವಿತ ಸ್ಲೀಪರ್ ವಂದೇ ಭಾರತ್ ರೈಲನ್ನು ಧರ್ಮಾವರಂ–ಗುಂತಕಲ್–ವಾಡಿ–ಸೊಲ್ಲಾಪುರ–ದೌಂಡ್ ಮಾರ್ಗದ ಬದಲು ಬೆಂಗಳೂರು–ತುಮಕೂರು–ದಾವಣಗೆರೆ–ಹಾವೇರಿ–ಹುಬ್ಬಳ್ಳಿ–ಧಾರವಾಡ–ಬೆಳಗಾವಿ–ಸಾಂಗ್ಲಿ/ಮಿರಜ್–ಸತಾರಾ–ಪುಣೆ ಮಾರ್ಗವಾಗಿ ಸಂಚರಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳ ಸುಮಾರು 7 ಕೋಟಿ ಜನರ ವ್ಯಾಪಕ ಕ್ಯಾಚ್‌ಮೆಂಟ್ ಪ್ರದೇಶವನ್ನು ಪ್ರತಿನಿಧಿಸುವ ನಾಗರಿಕರು, ರೈಲು ಪ್ರಯಾಣಿಕರ ಸಂಘಟನೆಗಳು, ಉದ್ಯಮಿಗಳು, ವಾಣಿಜ್ಯ ಮಂಡಳಿಗಳು ಹಾಗೂ ಸಾಮಾಜಿಕ ಸಂಘಟನೆಗಳ ಪರವಾಗಿ ಈ ಮನವಿ ಸಲ್ಲಿಸಲಾಗಿದೆ.
ಬೆಂಗಳೂರು–ಮುಂಬೈ ನಡುವೆ ಈಗಾಗಲೇ ಎರಡು ಪರ್ಯಾಯ ರೈಲು ಮಾರ್ಗಗಳಿದ್ದು, ಎರಡೂ ಮಾರ್ಗಗಳ ದೂರ, ರೈಲು ಮೂಲಸೌಕರ್ಯ, ಪ್ರಯಾಣಿಕರ ಬೇಡಿಕೆ, ಸಂಚಾರ ದಟ್ಟಣೆ, ಲಭ್ಯವಿರುವ ರೈಲು ಪಥಗಳು ಮತ್ತು ವಾಣಿಜ್ಯ ಸಾಮರ್ಥ್ಯವನ್ನು ಪಾರದರ್ಶಕವಾಗಿ ಹೋಲಿಕೆ ಮಾಡಿ ಸೂಕ್ತ ಮಾರ್ಗ ಆಯ್ಕೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಹುಬ್ಬಳ್ಳಿ–ಧಾರವಾಡ–ಬೆಳಗಾವಿ–ಮಿರಜ್/ಸಾಂಗ್ಲಿ–ಸತಾರಾ–ಪುಣೆ ಮಾರ್ಗದಲ್ಲಿ ವಿದ್ಯುದೀಕರಣ ಹಾಗೂ ಜೋಡಿ ರೈಲು ಮಾರ್ಗ ಸೇರಿದಂತೆ ಹಲವು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಈ ಮಾರ್ಗದಲ್ಲಿ ಈಗಾಗಲೇ ಪುಣೆ–ಹುಬ್ಬಳ್ಳಿ ವಂದೇ ಭಾರತ್ ರೈಲು ಸಂಚರಿಸುತ್ತಿರುವುದರಿಂದ, ಪ್ರೀಮಿಯಂ ರೈಲು ಸೇವೆ ನಿರ್ವಹಿಸಲು ಮಾರ್ಗದ ಸಾಮರ್ಥ್ಯವನ್ನು ಪರಿಗಣಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಧರ್ಮಾವರಂ–ಗುಂತಕಲ್–ವಾಡಿ–ಸೊಲ್ಲಾಪುರ–ದೌಂಡ್ ಮಾರ್ಗವು ಬೆಂಗಳೂರು, ಹೈದರಾಬಾದ್, ಸೊಲ್ಲಾಪುರ, ಪುಣೆ ಹಾಗೂ ಮುಂಬೈ ಸೇರಿದಂತೆ ಹಲವು ಪ್ರಮುಖ ನಗರಗಳನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ ರೈಲು ಮಾರ್ಗವಾಗಿದೆ. ಈ ಮಾರ್ಗದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯ ರೈಲುಗಳು ಸಂಚರಿಸುತ್ತಿದ್ದು, ಕೆಲವು ಭಾಗಗಳಲ್ಲಿ ಸಾಮರ್ಥ್ಯದ ಮೇಲಿನ ಒತ್ತಡವಿದೆ ಎಂಬುದು ರೈಲು ಬಳಕೆದಾರರ ಸಂಘಟನೆಗಳ ವಾದವಾಗಿದೆ.
ಆದ್ದರಿಂದ ಎರಡೂ ಮಾರ್ಗಗಳ ಸೆಕ್ಷನ್‌ವಾರು ರೈಲು ಸಾಮರ್ಥ್ಯ, ಪ್ರಸ್ತುತ ಬಳಕೆ, ಗರಿಷ್ಠ ಅನುಮತಿಸಲಾದ ವೇಗ, ಸರಾಸರಿ ವೇಗ, ಸಂಚರಿಸುತ್ತಿರುವ ರೈಲುಗಳ ಸಂಖ್ಯೆ, ಲಭ್ಯವಿರುವ ರೈಲು ಪಥಗಳು, ಜಂಕ್ಷನ್‌ಗಳಲ್ಲಿನ ತಾಂತ್ರಿಕ ನಿರ್ಬಂಧಗಳು ಹಾಗೂ ನಿರೀಕ್ಷಿತ ಪ್ರಯಾಣದ ಅವಧಿ ಕುರಿತು ರೈಲ್ವೆ ಮಂಡಳಿ ಅಧಿಕೃತ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಒತ್ತು
ಹೊಸ ಪ್ರೀಮಿಯಂ ರೈಲು ಸೇವೆಗಳಿಗೆ ಗುಂತಕಲ್–ಸೊಲ್ಲಾಪುರ ಮಾರ್ಗಕ್ಕೆ ಪದೇಪದೇ ಆದ್ಯತೆ ನೀಡಲಾಗುತ್ತಿದ್ದು, ಹುಬ್ಬಳ್ಳಿ–ಧಾರವಾಡ–ಬೆಳಗಾವಿ–ಸಾಂಗ್ಲಿ–ಸತಾರಾ ಮಾರ್ಗಕ್ಕೆ ಸಮಾನ ಪ್ರಮಾಣದ ಸೇವೆಗಳು ದೊರೆಯುತ್ತಿಲ್ಲ ಎಂಬುದು ಪ್ರಾದೇಶಿಕ ಸಂಘಟನೆಗಳ ಪ್ರಮುಖ ಆರೋಪವಾಗಿದೆ.
ಸೊಲ್ಲಾಪುರಕ್ಕೆ ಈಗಾಗಲೇ ಮುಂಬೈ ಸಂಪರ್ಕಿಸುವ ದೈನಂದಿನ ಪ್ರೀಮಿಯಂ ವಂದೇ ಭಾರತ್ ಸೇವೆ ಇರುವ ಸಂದರ್ಭದಲ್ಲಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಸಾಂಗ್ಲಿ, ಕೊಲ್ಹಾಪುರ ಮತ್ತು ಸತಾರಾ ಪ್ರದೇಶಗಳಿಗೂ ಮುಂಬೈ ಸಂಪರ್ಕಿಸುವ ವಂದೇ ಭಾರತ್ ಸ್ಲೀಪರ್ ಸೇವೆ ಅಗತ್ಯವಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಆದರೆ ಈ ಮನವಿ ಸೊಲ್ಲಾಪುರ, ಆಂಧ್ರಪ್ರದೇಶ, ತೆಲಂಗಾಣ ಅಥವಾ ಧರ್ಮಾವರಂ–ಗುಂತಕಲ್ ಮಾರ್ಗದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ದೇಶದ ಪ್ರತಿಯೊಂದು ಪ್ರದೇಶಕ್ಕೂ ಉತ್ತಮ ರೈಲು ಸಂಪರ್ಕ ದೊರೆಯಬೇಕು. ಒಂದು ಪ್ರದೇಶಕ್ಕೆ ಪ್ರೀಮಿಯಂ ಸಂಪರ್ಕ ನೀಡುವ ಸಂದರ್ಭದಲ್ಲಿ ಮತ್ತೊಂದು ತಾಂತ್ರಿಕವಾಗಿ ಸಮರ್ಥ ಪ್ರದೇಶಕ್ಕೆ ಅವಕಾಶ ನಿರಂತರವಾಗಿ ನಿರಾಕರಿಸಬಾರದು ಎಂಬುದು ಮನವಿದಾರರ ಬೇಡಿಕೆಯಾಗಿದೆ.
ಸಂವಿಧಾನದ ವಿಧಿಗಳ ಉಲ್ಲೇಖ
ಪ್ರಾದೇಶಿಕ ಸಮತೋಲನದ ಬೇಡಿಕೆಗೆ ಸಂವಿಧಾನದ ವಿಧಿ 38(2) ಅನ್ನು ಉಲ್ಲೇಖಿಸಿರುವ ಮನವಿಯಲ್ಲಿ, ವಿವಿಧ ಪ್ರದೇಶಗಳಲ್ಲಿ ವಾಸಿಸುವ ಜನರ ನಡುವೆ ಸೌಲಭ್ಯಗಳು ಮತ್ತು ಅವಕಾಶಗಳಲ್ಲಿನ ಅಸಮಾನತೆಯನ್ನು ಕಡಿಮೆ ಮಾಡುವುದು ಸರ್ಕಾರದ ನೀತಿಯ ಪ್ರಮುಖ ಉದ್ದೇಶವಾಗಬೇಕು ಎಂದು ಹೇಳಲಾಗಿದೆ.
ಅದೇ ರೀತಿ ವಿಧಿ 14ರ ಸಮಾನತೆ ಮತ್ತು ಸರ್ಕಾರದ ನಿರ್ಧಾರಗಳಲ್ಲಿ ಅಸಂಗತತೆ ಇಲ್ಲದಿರುವ ತತ್ವ, ವಿಧಿ 301ರ ಅಂತರರಾಜ್ಯ ವ್ಯಾಪಾರ, ವಾಣಿಜ್ಯ ಮತ್ತು ಸಂಚಾರದ ಸ್ವಾತಂತ್ರ್ಯ, ಹಾಗೂ ವಿಧಿ 303ರ ಅಂತರರಾಜ್ಯ ಆದ್ಯತೆ ಮತ್ತು ತಾರತಮ್ಯಕ್ಕೆ ಸಂಬಂಧಿಸಿದ ಸಂವಿಧಾನಾತ್ಮಕ ಚೌಕಟ್ಟುಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ವಿಧಿ 38(2) ನಿರ್ದೇಶಕ ತತ್ವವಾಗಿದ್ದು, ಸ್ವತಂತ್ರವಾಗಿ ಜಾರಿಗೊಳಿಸಬಹುದಾದ ಮೂಲಭೂತ ಹಕ್ಕಲ್ಲ ಎಂಬುದನ್ನು ಮನವಿಯಲ್ಲಿ ಒಪ್ಪಿಕೊಳ್ಳಲಾಗಿದೆ. ಆದರೆ ಪ್ರಾದೇಶಿಕ ಅಭಿವೃದ್ಧಿ ಮತ್ತು ಸಾರ್ವಜನಿಕ ಮೂಲಸೌಕರ್ಯ ಹಂಚಿಕೆಯಲ್ಲಿ ಇದು ಪ್ರಮುಖ ಸಂವಿಧಾನಾತ್ಮಕ ಮಾರ್ಗದರ್ಶಕ ತತ್ವವಾಗಿದೆ ಎಂದು ಪ್ರತಿಪಾದಿಸಲಾಗಿದೆ.
ಸ್ವತಂತ್ರ ತಾಂತ್ರಿಕ ಪರಿಶೀಲನೆಗೆ ಆಗ್ರಹ
ರೈಲ್ವೆ ಮಂಡಳಿಯು ಎರಡೂ ಮಾರ್ಗಗಳ ಕುರಿತು ಟ್ರ್ಯಾಕ್ ಲಭ್ಯತೆ, ಡಬ್ಲಿಂಗ್, ವಿದ್ಯುದೀಕರಣ, ಪ್ರಸ್ತುತ ಸಾಮರ್ಥ್ಯ ಬಳಕೆ, ಸಂಚಾರ ದಟ್ಟಣೆ, ಲಭ್ಯವಿರುವ ರೈಲು ಮುಂತಾದ
 ಪರಿಶೀಲನೆಯ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಮಾರ್ಗ ಆಯ್ಕೆಗೆ ಸಂಬಂಧಿಸಿದ ಗೊಂದಲ ಹಾಗೂ ಭಿನ್ನಾಭಿಪ್ರಾಯಗಳಿಗೆ ಅಧಿಕೃತ ಅಂಕಿ-ಅಂಶಗಳ ಆಧಾರದ ಮೇಲೆ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿದಾರರು ತಿಳಿಸಿದ್ದಾರೆ.
ಜನಪ್ರತಿನಿಧಿಗಳು, ವಾಣಿಜ್ಯ ಸಂಸ್ಥೆಗಳ ಬೆಂಬಲ
ಈ ಬೇಡಿಕೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ಕರ್ನಾಟಕದ ಸಚಿವ ಎಂ.ಬಿ. ಪಾಟೀಲ, ಬೆಂಗಳೂರು ಸಂಸದ ತೇಜಸ್ವಿ ಸೂರ್ಯ, ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ, ಮಹಾರಾಷ್ಟ್ರ ಸಚಿವ ಚಂದ್ರಕಾಂತ ಪಾಟೀಲ, ಸಾಂಗ್ಲಿ ಸಂಸದ ವಿಶಾಲ ಪಾಟೀಲ, ಶಾಸಕ ಸುಧೀರ್ ಗಾಡ್ಗೀಳ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್, ಕರ್ನಾಟಕ ಚೇಂಬರ್ ಆಫ್ ಕಾಮರ್ಸ್, ವೆಸ್ಟರ್ನ್ ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್, ಬೆಳಗಾವಿ ಚೇಂಬರ್ ಆಫ್ ಕಾಮರ್ಸ್, ಸಾಂಗ್ಲಿ ಚೇಂಬರ್ ಆಫ್ ಕಾಮರ್ಸ್ ಸೇರಿದಂತೆ ವಿವಿಧ ವಾಣಿಜ್ಯ ಸಂಸ್ಥೆಗಳು ಹಾಗೂ ರೈಲು ಪ್ರಯಾಣಿಕರ ಸಂಘಟನೆಗಳ ಬೆಂಬಲವೂ ಇದೆ ಎಂದು ತಿಳಿಸಲಾಗಿದೆ.
ಪ್ರಧಾನಿಗೆ ಅಂತಿಮ ಮನವಿ
ಬೆಂಗಳೂರು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ವಿಜಯಪುರ, ಸಾಂಗ್ಲಿ, ಕೊಲ್ಹಾಪುರ, ಸತಾರಾ ಮತ್ತು ಪುಣೆ ಸೇರಿದಂತೆ ವಿಶಾಲ ಪ್ರದೇಶದ ಜನರ ಹಿತದೃಷ್ಟಿಯಿಂದ ಬೆಂಗಳೂರು–ಮುಂಬೈ ಸ್ಲೀಪರ್ ವಂದೇ ಭಾರತ್ ರೈಲನ್ನು ತುಮಕೂರು–ಹುಬ್ಬಳ್ಳಿ–ಧಾರವಾಡ–ಬೆಳಗಾವಿ–ಸಾಂಗ್ಲಿ/ಮಿರಜ್–ಸತಾರಾ–ಪುಣೆ ಮಾರ್ಗವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗಿದೆ.
“ನಾವು ಯಾವುದೇ ಪ್ರದೇಶಕ್ಕೆ ವಿಶೇಷ ಆದ್ಯತೆ ಕೇಳುತ್ತಿಲ್ಲ; ಸಮಾನ ಪರಿಗಣನೆ ಕೇಳುತ್ತಿದ್ದೇವೆ. ಒಂದು ಪ್ರದೇಶದ ಅಭಿವೃದ್ಧಿಯ ಬೆಲೆಯಲ್ಲಿ ಮತ್ತೊಂದು ಪ್ರದೇಶಕ್ಕೆ ಅವಕಾಶ ಶಾಶ್ವತವಾಗಿ ತಪ್ಪಬಾರದು. ದೇಶದ ಎಲ್ಲ ಭಾಗಗಳ ಸಮತೋಲಿತ ಅಭಿವೃದ್ಧಿಯೇ ನಮ್ಮ ಉದ್ದೇಶ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಡಾ. ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ: ಲಿಂಗಾಯತ ಸಮಾಜದ ವತಿಯಿಂದ ಭವ್ಯ ಸನ್ಮಾನಥ್ರೋ ಬಾಲ್ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ಬೆಳಗಾವಿ ಜಿಎ ಪ್ರೌಢಶಾಲೆಯ ಬಾಲೆಯರುಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ಪ್ರಕಟ ಜಿಲ್ಲೆಯ ಉತ್ತಮ ಶಿಕ್ಷಕರಿಗೆ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಬೈಕ್ ಕಳ್ಳನನ್ನು ಬಂಧಿಸಿದ ಪೊಲೀಸರುಭೀಕರ ರಸ್ತೆ ಅಪಘಾತ: ಇಬ್ಬರು ಯುವಕರ ದುರ್ಮರಣಪ್ರಜಾಪಿತ ಬ್ರಹ್ಮಾಕುಮಾರಿ ಶಹಾಪುರ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಸುರಂಗದಲ್ಲಿ 9 ದಿನ ಹರೇ ಕೃಷ್ಣ ಪಠಿಸುತ್ತಿದ್ದವ ಜನ್ಮಾಷ್ಟಮಿಯಂದು ಹೊರಬಂದಎರಡೇ ತಿಂಗಳಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಇಬ್ಬಾಗ: ಅಸ್ತಿತ್ವಕ್ಕೆ ಬಂತು ಹೊಸ ಬಣ!ಅಯೋಧ್ಯೆ ದೇಗುಲದ ಅಭಿವೃದ್ಧಿಗೆ ಭಕ್ತಾದಿಗಳ ಬೆಂಬಲ ಕೋರಿದ ರಾಮಮಂದಿರದ ನೂತನ ಸಿಇಒ