ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಪ್ರದೇಶವಾದ ಇಂದಿರಾನಗರದಲ್ಲಿ ಮದ್ಯದ ಮತ್ತಿನಲ್ಲಿದ್ದ ಯುವಕ–ಯುವತಿಯೊಬ್ಬರು ನಡುರಸ್ತೆಯಲ್ಲೇ ಬೀದಿರಂಪಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಕ್ಯಾಬ್ ಒಳಗೆ ಆರಂಭವಾದ ಇವರ ಜಗಳ ತಾರಕಕ್ಕೇರಿ, ಯುವತಿಯ ಮೇಲೆ ಯುವಕ ಹಲ್ಲೆ ನಡೆಸುವ ಹಂತಕ್ಕೆ ತಲುಪಿದೆ.
ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ಈ ಇಬ್ಬರೂ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಕಾರು ಹತ್ತಿದ ಕೆಲವೇ ಕ್ಷಣಗಳಲ್ಲಿ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ಆರಂಭವಾಗಿದೆ. ವಾಗ್ವಾದ ಮಿತಿಮೀರಿದಾಗ ಕುಪಿತಗೊಂಡ ಯುವಕ, ಯುವತಿಯನ್ನು ಬಲವಂತವಾಗಿ ಕಾರಿನೊಳಗೆ ತಳ್ಳಿ ಕಾಲಿನಿಂದ ಮನಬಂದಂತೆ ಒದ್ದು ದೌರ್ಜನ್ಯ ಎಸಗಿದ್ದಾನೆ.
ನಡುರಸ್ತೆಯಲ್ಲಿ ಇಬ್ಬರ ಹೊಡೆದಾಟ ಹಾಗೂ ರಂಪಾಟವನ್ನು ಕಂಡು ಬೆಚ್ಚಿಬಿದ್ದ ಕ್ಯಾಬ್ ಚಾಲಕ, ತಕ್ಷಣವೇ ಸಮಯಪ್ರಜ್ಞೆ ಮೆರೆದು ತುರ್ತು ಸಹಾಯವಾಣಿ '112'ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾನೆ.
ಆದರೆ, ಪೊಲೀಸರ ಹೊಯ್ಸಳ ವಾಹನ ಸ್ಥಳಕ್ಕೆ ತಲುಪುವಷ್ಟರಲ್ಲೇ ಪರಿಸ್ಥಿತಿಯ ಗಂಭೀರತೆ ಅರಿತ ಯುವತಿ ಅಲ್ಲಿಂದ ಆಟೋ ಹತ್ತಿ ಪರಾರಿಯಾಗಿದ್ದಾಳೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಘಟನೆ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.