ಬೆಂಗಳೂರು : ಮತಕಳವು ಮಾಡಿ ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಷಡ್ಯಂತ್ರ, ಅಕ್ರಮವಾಗಿ ನಮೂನೆ 7 ಸಲ್ಲಿಕೆಯಿಂದ ಬಯಲಾಗಿದೆ. ರಾಹುಲ್ ಗಾಂಧೀ ಅವರು ಮಾಡಿದ್ದ ಆರೋಪಕ್ಕೆ ಪುಷ್ಟಿ ಸಿಕ್ಕಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮತ್ತು ಸಚಿವ ಸಹೋದ್ಯೋಗಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ಕೇಂದ್ರದ ಆಡಳಿತಾರೂಢ ಬಿಜೆಪಿ ಕೇಂದ್ರ ಚುನಾವಣೆ ಆಯೋಗವನ್ನು ದುರ್ಬಳಕೆ ಮಾಡಿಕೊಂಡು, ದೇಶದ ಲಕ್ಷಾಂತರ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಿಗಿಟ್ಟಿದ್ದಾರೆ ಎಂದು ಆರೋಪಿಸಿದರು.
ಭಾಲ್ಕಿಯಲ್ಲಿ 2 ಲಕ್ಷ ಮತ ಇಳಿಕೆ:
ತಮ್ಮ ಮತಕ್ಷೇತ್ರ ಬೀದರ್ ಜಿಲ್ಲೆಯಲ್ಲಿ ಈ ಮೊದಲು 14 ಲಕ್ಷ 61ಸಾವಿರ 959 ಮತದಾರರಿದ್ದರು, ಆದರೆ ಎಸ್.ಐ.ಆರ್. ನಂತರ ಕರಡು ಮತದಾರರ ಸಂಖ್ಯೆ 12 ಲಕ್ಷ 20 ಸಾವಿರ 916ಕ್ಕೆ ಇಳಿಕೆಯಾಗಿದೆ ಎಂದರು.
ಎಸ್.ಐ.ಆರ್. ಪ್ರಕ್ರಿಯೆಯಲ್ಲಿ 2 ಲಕ್ಷಕ್ಕೂ ಅಧಿಕ ಮತದಾರರನ್ನು ತೆಗೆಯಲಾಗಿದೆ, ಈ ಪೈಕಿ 1 ಲಕ್ಷಕ್ಕೂ ಹೆಚ್ಚಿನ ಮತದಾರರನ್ನು ಶಾಶ್ವತ ಸ್ಥಳಾಂತರ ಎಂದು ತೋರಿಸಿದ್ದಾರೆ. ಅರ್ಹ ಮತದಾರರನ್ನು ಮತದಾನದ ಹಕ್ಕಿನಿಂದ ದೂರ ಇಡುವ ಷಡ್ಯಂತ್ರದ ಮುಂದಿನ ಭಾಗವಾಗಿ, ತಮ್ಮ ವಿಧಾನಸಭಾ ಕ್ಷೇತ್ರ ಭಾಲ್ಕಿಯಲ್ಲಿ ಒಂದೇ ದಿನ 3244 ಮತದಾರರನ್ನು ಪಟ್ಟಿಯಿಂದ ಕೈಬಿಡಲು ನಮೂನೆ 7 ಸಲ್ಲಿಸಲಾಗಿದೆ ಎಂದು ತಿಳಿಸಿದರು.
3244 ಮತದಾರರನ್ನು ಕೈಬಿಡಲು ಕೋರಿ ನಮೂನೆ 7ನ್ನು 36 ಜನರು ಸಲ್ಲಿಸಿದ್ದಾರೆ. ಈ 36 ಜನರಲ್ಲಿ ಬಹುತೇಕರು ಬಿಜೆಪಿ ಕಾರ್ಯಕರ್ತರಿದ್ದಾರೆ. ಉದಾಹರಣೆಗೆ ಜಗನ್ನಾಥ್ ಎನ್ನುವ ಒಬ್ಬನೇ ವ್ಯಕ್ತಿ, ಒಂದೇ ದಿನ 241 ಪೂರ್ವ ಮುದ್ರಿತ ನಮೂನೆ 7 ಸಲ್ಲಿಸಿದ್ದಾನೆ, ಇದು ಪೂರ್ವನಿಯೋಜಿತ ಷಡ್ಯಂತ್ರವಲ್ಲದೆ ಮತ್ತೇನು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಗೆ ಮತ ನೀಡುವವರನ್ನು ಗುರುತಿಸಿ, ಬಡವರು, ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಸೇರಿದಂತೆ ಕೆಲವೊಂದು ಸಮುದಾಯಗಳಿಗೆ ಉದ್ದೇಶಪೂರ್ವಕವಾಗಿ ನಮೂನೆ 7ನ್ನು ಮೊದಲೇ ತರಿಸಿಕೊಂಡು ಅವರ ಸಂವಿಧಾನದತ್ತ ಹಕ್ಕು ಕಸಿಯುವ ಹುನ್ನಾರ ನಡೆಸಿದ್ದಾರೆ ಎಂದು ಈಶ್ವರ ಖಂಡ್ರೆ ಆರೋಪಿಸಿದರು.
ತಮಗೆ ಈ ಬಗ್ಗೆ ಮಾಹಿತಿ ಬಂದ ಬಳಿಕ ಮಾಹಿತಿ ಪಡೆಯಲು ಮುಂದಾದಾಗ ಕೆಲವರು ತಾವು ಸಲ್ಲಿಸಿದ್ದ ನಮೂನೆ 7 ಹಿಂಪಡೆದಿದ್ದಾರೆ. ಮತ್ತೆ ಕೆಲವು ಅರ್ಜಿಗಳು ಹಾಗೇ ಇವೆ. ತಮ್ಮ ಹೆಸರನ್ನು ತೆಗೆದುಹಾಕಲು ಪ್ರಯತ್ನಿಸುತ್ತಿರುವ ವಿಷಯ ಅರ್ಹ ಮತದಾರರಿಗೆ ತಿಳಿದ ಬಳಿಕ ಅವರು ಒಳಸಂಚಿನ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಎಫ್.ಐ.ಆರ್. ದಾಖಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮತ ಕನ್ನ:
ಈಗ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದು, ಈಗ ಆಖೈರಾಗುವ ಮತದಾರರ ಪಟ್ಟಿಯನ್ನೇ ಅವಲಂಬಿಸಬೇಕಾಗುತ್ತದೆ. ಆಗ ಅರ್ಹ ಮತದಾರರು ತಮ್ಮ ಮೂಲಭೂತಹಕ್ಕಿನಿಂದ ವಂಚಿತರಾಗುತ್ತಾರೆ ಎಂದರು.
ಒಂದು ಕುಟುಂಬದಲ್ಲಿ 6ಕ್ಕಿಂತ ಹೆಚ್ಚು ಮಕ್ಕಳಿದ್ದರೆ ತಾರ್ಕಿಕ ವೈರುಧ್ಯ (ಲಾಜಿಕಲ್ ಡಿಸ್ಕ್ರಪೆನ್ಸಿ) ಎಂದು ಹೇಳುತ್ತಾರೆ. ಇದರಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಧಕ್ಕೆಯಾಗುತ್ತದೆ. ಈ ಕುಕೃತ್ಯದಲ್ಲಿ ಯಾರು ಯಾರು ಶಾಮೀಲಾಗಿದ್ದಾರೋ ಅವರೆಲ್ಲರಿಗೂ ಕಾನೂನು ರೀತ್ಯ ಶಿಕ್ಷೆ ಆಗಬೇಕು ಎಂದು ಈಶ್ವರ ಖಂಡ್ರೆ ಒತ್ತಾಯಿಸಿದರು.