ಬೆಂಗಳೂರು : ಕೆಪಿಎಸ್.ಸಿ. ನೇಮಕಾತಿ ಹಗರಣದಲ್ಲಿ ಬಂಧಿತನಾಗಿರುವ ಬಸವರಾಜ ಕನ್ನಾಳೆ ಭಾಲ್ಕಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತನಾಗಿದ್ದು, ತಮ್ಮ ವಿರುದ್ಧವೇ ಸ್ಪರ್ಧೆಗೆ ತಯಾರಿ ನಡೆಸಿದ್ದ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ತಿಂಗಳ ಹಿಂದೆ ನನ್ನ ಕಚೇರಿಗೆ ಬಂದಿದ್ದ ಕನ್ನಾಳೆ, ಬಿಜೆಪಿ ರಾಜ್ಯ ನಾಯಕರ ಶಿಫಾರಸಿನಿಂದ ಘನತೆವೆತ್ತ ರಾಜ್ಯಪಾಲರು ತನ್ನನ್ನು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನನ್ನಾಗಿ ನಾಮಕರಣ ಮಾಡಿದ್ದಾರೆ. ಆಶೀರ್ವಾದ ಮಾಡಿ ಎಂದು ಹೇಳಿ ಸಿಹಿ ತಿನಿಸಲು ಬಂದ, ನಾನು ಸಿಹಿ ತಿನ್ನುವುದಿಲ್ಲ, ನೀನೆ ತಿನ್ನಪ್ಪ ಎಂದು ಹೇಳಿ ಸಿಹಿ ತಿನ್ನಿಸಿದ್ದೆ ಎಂದು ವೈರಲ್ ಫೋಟೋ ಬಗ್ಗೆ ಸ್ಪಷ್ಟೀಕರಣ ನೀಡಿದರು.
ಯಾವ ಬಿಜೆಪಿ ನಾಯಕರು ಇವರಿಗೆ ಶಿಫಾರಸು ಮಾಡಿದ್ದಾರೆ. ರಾಜ್ಯಪಾಲರು ಯಾವ ಮಾನದಂಡದಲ್ಲಿ ಕನ್ನಾಳೆಯನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿ ಮಾಡಿದರು ಎಂಬ ಬಗ್ಗೆಯೂ ಬಿಜೆಪಿ, ಜೆಡಿಎಸ್ ನಾಯಕರು ಮಾತನಾಡಲಿ ಎಂದರು.
ಭಾಲ್ಕಿಯಿಂದ ನನ್ನ ವಿರುದ್ಧವೇ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸುವುದಾಗಿ ನನಗೆ ಕನ್ನಾಳೆ ಹೇಳಿದ್ದು, ನಾನು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಇದೆ. ಪ್ರಯತ್ನ ಮಾಡು ಎಂದು ಹೇಳಿದ್ದೆ ಎಂದು ತಿಳಿಸಿದರು.
ನನ್ನ ಮತ ಕ್ಷೇತ್ರದ ಒಬ್ಬ ಯುವಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿದ್ದೇನೆ. ಆಶೀರ್ವಾದ ಮಾಡಿ ಎಂದ ಬಂದಾಗ ಶುಭಕೋರುವುದು ಸಹಜ. ನಿತ್ಯ ನೂರಾರು ಜನ ಬರುತ್ತಾರೆ. ಫೋಟೋ ತೆಗೆಸಿಕೊಳ್ಳುತ್ತಾರೆ. ಇಂತಹ ಚಿತ್ರವನ್ನೇ ಹಿಡಿದುಕೊಂಡು ರಾಜಕೀಯ ಮಾಡುವುದು ಸರಿಯಲ್ಲ ಎಂದರು.
ಈ ರೀತಿ ವಂಚನೆ ಮಾಡೋರು ಎಲ್ಲ ಪಕ್ಷದ ನಾಯಕರ ಜೊತೇನೂ ಫೋಟೋ ತೆಗೆಸಿಕೊಳ್ಳುತ್ತಾರೆ. ಕನ್ನಾಳೆ, ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಜೊತೆ ವಿದೇಶದಲ್ಲಿ ಫೋಟೋ ತೆಗೆಸಿಕೊಂಡಿದ್ದಾನೆ. ಆತ ನಡೆಸುತ್ತಿದ್ದ ಟ್ರಾವಲ್ಸ್ ಬಸ್ ಅನ್ನು ಜೆಡಿಎಸ್ ಶಾಸಕರೂ ಉದ್ಘಾಟನೆ ಮಾಡಿದ್ದಾರೆ. ಬಿಜೆಪಿಯ ಚಿಹ್ನೆ ಇರುವ ಶಲ್ಯ ಹೊದ್ದು, ಬಿಜೆಪಿ ನಾಯಕರ ಜೊತೆ ಕನ್ನಾಳೆ ಕುಳಿತಿರುವ, ಬಿಜೆಪಿಯ ಹಲವು ನಾಯಕರು ಕನ್ನಾಳಗೆ ಸಿಹಿ ತಿನ್ನಿಸುತ್ತಿರುವ ಚಿತ್ರಗಳೂ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ. ನನ್ನ ಫೋಟೋ ಒಂದು ಹಿಡಿದುಕೊಂಡು ಬಿಜೆಪಿ ಮತ್ತು ಜೆಡಿಎಸ್ ನವರು ರಾಜಕೀಯ ಮಾಡುವುದು ಸರ್ವಥಾ ಸರಿಯಲ್ಲ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಕೂಟದವರು ತಾವು ಮಾಡಿರುವ ಪಾಪವನ್ನು ಕಾಂಗ್ರೆಸ್ ಹೆಗಲಿಗೆ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಕೋತಿ ಮೊಸರನ್ನ ತಿಂದು ಮೇಕೆಯ ಬಾಯಿಗೆ ಒರೆಸಿತು ಎನ್ನುವ ಗಾದೆಯಂತೆ ವರ್ತಿಸುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಕಿಡಿ ಕಾರಿದರು.
ನಮ್ಮ ಸರ್ಕಾರ ಕೆ.ಪಿ.ಎಸ್.ಸಿ.ಯ ಎಲ್ಲ ಹಗರಣದ ಬಗ್ಗೆ ತನಿಖೆ ನಡೆಸುತ್ತಿದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುತ್ತದೆ. ಇಡೀ ಪ್ರಕರಣದ ಬಗ್ಗೆ ಹಾಗೂ ಪ್ರಕರಣದಲ್ಲಿ ಶಾಮೀಲಾಗಿರುವವರ ಬಗ್ಗೆ ಸಮಗ್ರ ಹಾಗೂ ಪಾರದರ್ಶಕವಾಗಿ ತನಿಖೆ ಆಗಲಿದೆ. ಈ ಹಗರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮಗಳ ಬಗ್ಗೆ ತನಿಖೆ ಮಾಡಿಸುತ್ತಿದೆ. ಹಾಲು ಯಾವುದು, ನೀರು ಯಾವುದು ಎಂಬುದು ಬಹಿರಂಗವಾಗೇ ಆಗುತ್ತದೆ. ಯಾರ ಚರಿತ್ರೆ ಏನು ಎಂಬುದು ಜನರಿಗೂ ತಿಳಿಯತ್ತೆ ಎಂದು ಹೇಳಿದರು.