Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮಕ್ಕಳ ಕೈಗೆ ಸ್ಟೀರಿಂಗ್ ಕೊಟ್ಟು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ತಂದೆಗೆ ಹೈಕೋರ್ಟ್ ತಪರಾಕಿ

ಬೆಂಗಳೂರು: ಅಪ್ರಾಪ್ತ ವಯಸ್ಕ ಮಗನಿಗೆ ಕಾರು ಚಾಲನೆ ಮಾಡಲು ಅನುಮತಿಸಿ, ಆತನ ಅತಿವೇಗದ ಚಾಲನೆಯಿಂದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಭೀಕರ ಅಪಘಾತ ಪ್ರಕರಣದಲ್ಲಿ ತಂದೆಯ ವಿರುದ್ಧ ದಾಖಲಾಗಿದ್ದ ಕೊಲೆಯಲ್ಲದ ಅಪರಾಧಿಕ ನರಹತ್ಯೆ (Culpable homicide not amounting to murder) ಆರೋಪವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ. ಮಗುವಿನ ಕೈಗೆ ಕಾರಿನ ಸ್ಟೀರಿಂಗ್ ಕೊಟ್ಟು ಸಂಭವಿಸುವ ದುರಂತಗಳಿಗೆ ಪೋಷಕರು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಕಟುವಾಗಿ ಎಚ್ಚರಿಸಿದೆ.

ಪ್ರಕರಣದ ಎರಡನೇ ಆರೋಪಿಯಾಗಿರುವ ನದೀಮ್ ಉರ್ ರೆಹಮಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ.

ಪೋಷಕರ ಜವಾಬ್ದಾರಿಯ ಬಗ್ಗೆ ಹೈಕೋರ್ಟ್ ಖಡಕ್ ಮಾತು:

"ತಿಳಿದೂ ತಿಳಿದೂ ಮಗುವಿನ ಕೈಗೆ ವಾಹನದ ಸ್ಟೀರಿಂಗ್ ಕೊಡುವ ಪೋಷಕರು, ಆ ದುಸ್ಸಾಹಸವು ದುರಂತದಲ್ಲಿ ಅಂತ್ಯಗೊಂಡಾಗ ಮಗುವಿನ ವಯಸ್ಸಿನ ನೆಪವೊಡ್ಡಿ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪೋಷಕತ್ವ ಎಂದರೆ ಕೇವಲ ಪ್ರೀತಿ ಮತ್ತು ಅಧಿಕಾರವಲ್ಲ, ಅದೊಂದು ಗುರುತರ ಜವಾಬ್ದಾರಿಯೂ ಹೌದು. ಸಾರ್ವಜನಿಕ ರಸ್ತೆಗಳು ಎಲ್ಲರಿಗೂ ಸೇರಿದ ಸಮಾನ ತಾಣಗಳೇ ಹೊರತು, ಇಂತಹ ಕಾನೂನುಬಾಹಿರ ಹುಚ್ಚಾಟಗಳಿಗೆ ತರಬೇತಿ ಮೈದಾನಗಳಲ್ಲ," ಎಂದು ಹೈಕೋರ್ಟ್ ಕಟುವಾಗಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ ಏನು?:

2020ರ ಡಿಸೆಂಬರ್ 10ರಂದು ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ನದೀಮ್ ಉರ್ ರೆಹಮಾನ್ ಅವರ 14 ವರ್ಷದ ಅಪ್ರಾಪ್ತ ಮಗ ಫೋಕ್ಸ್‌ವ್ಯಾಗನ್ ವೆಂಟೋ ಕಾರನ್ನು ಚಲಾಯಿಸಿಕೊಂಡು ಹೋಗಿ ದ್ವಿಚಕ್ರ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದ್ದ. ಈ ಭೀಕರ ಅಪಘಾತದಲ್ಲಿ ಬೈಕ್‌ನಲ್ಲಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು.

ಆರಂಭದಲ್ಲಿ ಪೊಲೀಸರು ಅಜಾಗರೂಕ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವು ಉಂಟುಮಾಡಿದ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ತನಿಖೆಯ ವೇಳೆ ತಂದೆಯೇ ಮಗನಿಗೆ ಕಾರು ಚಲಾಯಿಸಲು ನಿರಂತರವಾಗಿ ಅವಕಾಶ ನೀಡುತ್ತಿದ್ದುದು ಮತ್ತು ಅಪಘಾತದ ದಿನವೂ ಸ್ವತಃ ತಾನೇ ಕಾರಿನ ಕೀಲಿಕೈ (ಕೀ) ನೀಡಿರುವುದು ತನಿಖೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ, ಐಪಿಸಿ ಸೆಕ್ಷನ್ 304 ಭಾಗ-2 (ಕೊಲೆಯಲ್ಲದ ಅಪರಾಧಿಕ ನರಹತ್ಯೆ) ಅಡಿಯಲ್ಲಿ ತಂದೆಯನ್ನೂ ಎರಡನೇ ಆರೋಪಿಯನ್ನಾಗಿ ಸೇರಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಸೆಷನ್ಸ್ ನ್ಯಾಯಾಲಯವು ಆರೋಪಮುಕ್ತಗೊಳಿಸುವ (Discharge) ಅರ್ಜಿಯನ್ನು ತಿರಸ್ಕರಿಸಿದ ನಂತರ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ಎದುರಿಸಲೇಬೇಕು ಎಂದ ನ್ಯಾಯಪೀಠ:

ಪ್ರಕರಣದಲ್ಲಿ ಕೇವಲ ಮೂವರು ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಸೆಕ್ಷನ್ 304 ಭಾಗ-2 ಅನ್ವಯಿಸುವುದಿಲ್ಲ, ಆದರೆ ತಂದೆಯು ಅಪಾಯದ ಅರಿವಿದ್ದರೂ ಮಗನಿಗೆ ವಾಹನ ನೀಡಿದ್ದಾರೆಯೇ ಎಂಬುದು ನ್ಯಾಯಾಂಗ ವಿಚಾರಣೆಯಲ್ಲಿ (Trial) ಸಾಕ್ಷ್ಯಾಧಾರಗಳ ಮೂಲಕ ಸಾಬೀತಾಗಬೇಕಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು. ತಂದೆಯು ‘ಮಗ ತನ್ನ ಗಮನಕ್ಕೆ ಬಾರದಂತೆ ಕಾರು ತೆಗೆದುಕೊಂಡು ಹೋಗಿದ್ದ’ ಎಂದು ವಾದಿಸುತ್ತಿದ್ದರೆ, ಪ್ರಾಸಿಕ್ಯೂಷನ್ ‘ತಂದೆಯೇ ಕೀ ಕೊಟ್ಟಿದ್ದರು’ ಎಂದು ಹೇಳುತ್ತಿದೆ. ಇಂತಹ ಭಿನ್ನ ಹೇಳಿಕೆಗಳನ್ನು ವಿಚಾರಣೆಯ ಮುನ್ನವೇ ನಿರ್ಧರಿಸಲು ಸಾಧ್ಯವಿಲ್ಲ; ಆದ್ದರಿಂದ ಆರೋಪವು ಸಾಕ್ಷ್ಯಗಳ ಪರೀಕ್ಷೆಯನ್ನು ಎದುರಿಸಬೇಕೇ ಹೊರತು ಆರಂಭದಲ್ಲೇ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿತು.

ಅಪ್ರಾಪ್ತರ ವಾಹನ ಚಾಲನೆ ಬಗ್ಗೆ ಕಳವಳ:

ಅಪ್ರಾಪ್ತರು ವಾಹನ ಚಲಾಯಿಸುವುದರಿಂದ ಸಾರ್ವಜನಿಕ ರಸ್ತೆಗಳಲ್ಲಿ ಸೃಷ್ಟಿಯಾಗುತ್ತಿರುವ ಅಪಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ನ್ಯಾಯಪೀಠ, 2025–26ನೇ ಸಾಲಿನಲ್ಲಿ ದೇಶಾದ್ಯಂತ ನಡೆದ 11,890 ಅಪ್ರಾಪ್ತರ ಅಪಘಾತಗಳಲ್ಲಿ ಕರ್ನಾಟಕದಲ್ಲೇ ಬರೋಬ್ಬರಿ 751 ಪ್ರಕರಣಗಳು ದಾಖಲಾಗಿರುವುದನ್ನು ಉಲ್ಲೇಖಿಸಿತು. ಮೋಟಾರು ವಾಹನದ ಸ್ಟೀರಿಂಗ್ ಮಕ್ಕಳ ಕೈಯಲ್ಲಿ ಆಟದ ವಸ್ತುವಾಗಬಾರದು ಎಂದು ಎಚ್ಚರಿಸಿದ ಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು.

ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ವಕೀಲ ಪಲ್ಲವ ಆರ್. ವಾದ ಮಂಡಿಸಿದರೆ, ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎನ್. ಜಗದೀಶ ವಾದ ಮಂಡಿಸಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಧ ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಯುವತಿ! ಧ್ವನಿ ಆಧಾರಿತ ಬ್ರೈಲ್ ಪ್ರಿಂಟರ್ ಆವಿಷ್ಕಾರಕ್ಕೆ ಜಾಗತಿಕ ಮನ್ನಣೆಭಾರತವನ್ನು ವಿಭಜಿಸುವ ಪ್ರಯತ್ನಗಳನ್ನು ಎದುರಿಸಿ, ಶತ್ರುಗಳನ್ನು ಸೋಲಿಸಬೇಕು! ವಿಜಯದಶಮಿ ದಿನ ಪ್ರಧಾನಿ ಮೋದಿ ಸಂದೇಶಗ್ರಾಹಕರಿಗೆ ಗುಡ್ ನ್ಯೂಸ್: 3 ಹೊಸ ಪ್ರಿಪೇಯ್ಡ್ ಪ್ಲಾನ್ ಪರಿಚಯಿಸಿದ ಏರ್ಟೆಲ್ಟೈಗರ್ ಶ್ರಾಫ್‌ಗೂ ಮುನ್ನ ಮತ್ತೊಬ್ಬ ಬಾಲಿವುಡ್ ನಟನಿಗೆ ಟಾರ್ಗೆಟ್! ಶೂಟರ್‌ಗಳಿಂದ ಸ್ಪೋಟಕ ಮಾಹಿತಿBREAKING : ವಿಜಯದಶಮಿ ದಿನ ರಾವಣನ ಪ್ರತಿಕೃತಿ ದಹಿಸಿದ ಪ್ರಧಾನಿ ಮೋದಿ ; ವೀಡಿಯೋ ವೈರಲ್ |WATCH VIDEOಅಮೆರಿಕದ ಪ್ರಮುಖ ವಾಣಿಜ್ಯ, ವ್ಯವಹಾರ ಪಾಲುದಾರ ರಾಷ್ಟ್ರ ಭಾರತ: ಮಾರ್ಕೊ ರೂಬಿಯೊನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ; ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ !6 ದಿನದೊಳಗೆ ದೆಹಲಿಯ ಐತಿಹಾಸಿಕ ರೇಸ್ ಕೋರ್ಸ್ ಮಸೀದಿ ತೆರವಿಗೆ ನೋಟಿಸ್BREAKING : ಖ್ಯಾತ ಸಂಗೀತ ನಿರ್ದೇಶಕ ದೇವಾ ನಿಧನದ ಬೆನ್ನಲ್ಲೇ ಅವರ ಸೋದರಳಿಯ, ನಟ ಕಾರ್ತಿಕ್ ಸಬೇಶ್ ನಿಧನದುರ್ಗಾ ಪೂಜೆಯಲ್ಲಿ ಯುವತಿಯೊಂದಿಗೆ ಪೊಲೀಸ್ ಅಧಿಕಾರಿಯ ಅನುಚಿತ ವರ್ತನೆ! ವಿಡಿಯೋ ವೈರಲ್ |WATCH VIDEO