ಮಂಡ್ಯ :- ಮದ್ದೂರು ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ 14 ಸುಮೋಟೋ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಉಪ ಲೋಕಾಯುಕ್ತ ಬಿ.ವೀರಪ್ಪ ಹೇಳಿದರು.
ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡು ದಿನಗಳ ಕಾಲ ಮದ್ದೂರು ತಾಲೂಕಿಗೆ ಭೇಟಿ ನೀಡಿದ್ದೆ, ಈ ವೇಳೆ ಹಲವು ಇಲಾಖೆಗಳ ಅಧಿಕಾರಿಗಳು ಭ್ರಷ್ಟಾಚಾರ, ಅಸಡ್ಡೆ, ಕರ್ತವ್ಯ ಲೋಪ, ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಸುಮೋಟೋ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ ಎಂದರು.
ಮದ್ದೂರು ತಾಲೂಕಿಗೆ ಭೇಟಿ ನೀಡಿ ತುಂಬಾ ನೋವಿನಿಂದ ಹೋಗುತ್ತಿದ್ದೇನೆ. ಆದರೆ, ಭ್ರಷ್ಟಾಚಾರ, ಕರ್ತವ್ಯ ಲೋಪ ಎಸಗುತ್ತಿರುವ ಅಂತಹ ಅಧಿಕಾರಿಗಳಿಗೂ ನೋವು ಕೊಡದೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಶುಕ್ರವಾರ ಬೆಳ್ಳಂಬೆಳಗ್ಗೆಯೇ ನಮ್ಮ ಅಧಿಕಾರಿಗಳ ತಂಡದ ಜೊತೆಗೆ ಯುಜಿಡಿ ಶುದ್ದಿಕರಣ ಘಟಕ, ಕಸ ವಿಲೇವಾರಿ ಘಟಕ, ಚಿಕ್ಕ ಅರಸಿನಕೆರೆ ಗ್ರಾಪಂ, ಸೂಳೆಕೆರೆ ಕಳಪೆ ಕಾಮಗಾರಿ, ಮದ್ದೂರು ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಛೇರಿ, ಮುಜರಾಯಿ ಶಾಖೆ, ಸಬ್ ರಿಜಿಸ್ಟ್ರಾರ್ ಕಛೇರಿ, ನಗರಸಭೆ, ಮನ್ ಮುಲ್ ಹಾಲಿನ ಪುಡಿ ಹಗರಣ, ಎಪಿಎಂಸಿ, ಬಸ್ ನಿಲ್ದಾಣ, ನಿಡಘಟ್ಟ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ವೇಳೆ ಭ್ರಷ್ಟಾಚಾರ ಕಂಡು ಬಂದ ಹಿನ್ನೆಲೆಯಲ್ಲಿ ಇಷ್ಟು ಕಛೇರಿಗಳ ವಿರುದ್ಧ ಸುಮೋಟೋ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ದಾಳಿ ಮಾಡಿದ ವೇಳೆ ಎಡಿಎಲ್ಆರ್, ರೆಕಾರ್ಡ್ ರೂಂ, ಸಬ್ ರಿಜಿಸ್ಟ್ರಾರ್ ಹಾಗೂ ನಗರಸಭೆ ಕಛೇರಿಗಳಲ್ಲಿ ಪೋನ್ ಪೇ ಹಾಗೂ ಗೂಗಲ್ ಪೇ ಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ವೇತನಕ್ಕಿಂತ ಎರಡು ಮೂರು ಪಟ್ಟು ಲಕ್ಷಾಂತರ ರೂಪಾಯಿ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ ಎಂದರು.
ತಾಲೂಕು ಕಛೇರಿಯ ಕೆಲವು ಸಿಬ್ಬಂದಿಗಳು ದಾಳಿ ವಿಷಯ ತಿಳಿದು ಬೇಕಂತಲೆ ತಲೆ ಮರೆಸಿಕೊಂಡಿದ್ದಾರೆ.
ಆರ್.ಆರ್.ಟಿ ಶಾಖೆಯ ಕೆಲವು ಸಿಬ್ಬಂದಿ ಲಂಚದ ಆಮಿಷಕ್ಕೆ ಒಳಗಾಗಿ ಹಲವು ತಿಂಗಳುಗಳಿಂದ ಅರ್ಜಿಗಳನ್ನು ಆನ್ ಲೈನ್ ಮಾಡದೆ ಕಾಲಹರಣ ಮಾಡಲಾಗುತ್ತಿದೆ. ರೆಕಾರ್ಡ್ ರೂಂ ನ ಸುನೀಲ್ ಕುಮಾರ್ ಪ್ರತಿಯೊಂದು ದಾಖಲೆಗಳಿಗೂ ಲಂಚ ಕೊಟ್ಟರೆ ಮಾತ್ರ ದಾಖಲೆ ನೀಡುತ್ತಾನೆ. ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಅಧಿಕಾರಿಯ ಮೊಬೈಲಿನಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆದಿದೆ. ಗುತ್ತಿಗೆ ನೌಕರ ಹಲವು ತಿಂಗಳುಗಳಿಂದ ತಮ್ಮ ವೇತನವನ್ನು ಬ್ಯಾಂಕ್ ನಿಂದ ಡ್ರಾ ಮಾಡಿಲ್ಲ. ಎಡಿಎಲ್ಆರ್ ಕಛೇರಿಯಲ್ಲಿ ಅಮರ್ ನಾಥ್ ದಾಖಲೆಗಳನ್ನು ತಮ್ಮ ಬ್ಯಾಗ್ ನಲ್ಲಿ ಮನೆಗೆ ತೆಗೆದುಕೊಂಡು ಹೋಗ್ತಿದ್ದಾರೆ. ನಗರಸಭೆಯ ಕೆಲವು ಸಿಬ್ಬಂದಿಗಳ ಪೋನ್ ನಲ್ಲಿ ಲಕ್ಷಾಂತರ ರೂಪಾಯಿ ವಹಿವಾಟು ನಡೆದಿದೆ ಇದೆಲ್ಲ ನೋಡುತ್ತಿದ್ದರೆ ಎಲ್ಲೋ ಒಂದು ಕಡೆ ಭ್ರಷ್ಟಾಚಾರದ ತವರೂರಾಗಿದೆ.
ಇನ್ನು ದಾಳಿ ಮಾಡಿದ ವೇಳೆ ಸೂಕ್ತ ದಾಖಲೆ ಮತ್ತು ಮಾಹಿತಿಗಳನ್ನು ನೀಡುವಲ್ಲಿ ಅಧಿಕಾರಿಗಳು ಸಲ್ಲಿಸಲಿಲ್ಲ. ಹೀಗಾಗಿ ಅಂತವರ ವಿರುದ್ಧ ಸುಮೋಟೋ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅವರು ಒಂದು ತಿಂಗಳಲ್ಲಿ ಕಛೇರಿಗೆ ಬಂದು ಸೂಕ್ತ ದಾಖಲೆ ಮತ್ತು ಮಾಹಿತಿಗಳನ್ನು ನೀಡಿದರೇ ಪ್ರಕರಣವನ್ನು ರದ್ದು ಮಾಡಲಾಗುವುದು ಇಲ್ಲದಿದ್ದರೆ ಅವರ ಇಲಾಖಾ ಮೇಲಾಧಿಕಾರಿಗಳಿಗೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಮದ್ದೂರು ತಾಲೂಕಿನಲ್ಲಿ ತಾಲೂಕು ಕಛೇರಿ ಸೇರಿದಂತೆ ಭೇಟಿ ನೀಡಿದ ಎಲ್ಲಾ ಇಲಾಖೆ, ಕಾಮಗಾರಿ ಸ್ಥಳಗಳಲ್ಲಿ ಹೆಜ್ಜೆ ಹೆಜ್ಜೆಗೂ ಲಂಚ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಜನ ಸಾಕಷ್ಟು ರೋಸಿ ಹೋಗಿದ್ದಾರೆ. ಜನ ಸೇವೆಯೇ ಜನಾರ್ಧನನ ಸೇವೆ ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕು. ನಾನೇನು ಇಲ್ಲಿ ಶೋ ಆಫ್ ಮಾಡಲು ಬಂದಿಲ್ಲ. ಬೇರೆ ಕಡೆ ಲೋಕಾಯುಕ್ತ ಸಂಸ್ಥೆ ಎಂದರೇ ಭಯದಲ್ಲಿ ಇರ್ತಾರೆ ಆದರೆ ಮಂಡ್ಯ ಜಿಲ್ಲೆಯಲ್ಲಿ ಆ ಭಯ ಇಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತಕ್ಕೆ ಗೊತ್ತಿದೆ. ಎಂದು ಕಟುವಾಗಿ ಎಚ್ಚರಿಕೆ ನೀಡಿದರು.
ವರದಿ : ಗಿರೀಶ್ ರಾಜ್, ಮಂಡ್ಯ