ಬೆಂಗಳೂರು: ರಾಜ್ಯ ಸರ್ಕಾರ ಶಿವಮೊಗ್ಗ ಜಿಲ್ಲೆಯ ಸಾಗರ ಮತ್ತು ಹೊಸನಗರ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿದ್ದು, ಇದರೊಂದಿಗೆ ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರಿದಂತಾಗಿದೆ. ಈ ಹಿಂದೆ ಜಿಲ್ಲೆಯ ಐದು ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿತ್ತು.
ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸದ ಸಂದರ್ಭದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಮತ್ತು ಜನರು ಇತ್ತೀಚೆಗೆ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ, ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ಎದುರಾಗಿರುವ ಸಂಕಷ್ಟಗಳನ್ನು ವಿವರಿಸಿದ್ದರು. ಸಾಗರ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸುವಂತೆ ಮನವಿ ಸಲ್ಲಿಸಿದ್ದರು.
ಜನರ ಮನವಿಗೆ ಸ್ಪಂದಿಸಿದ್ದ ಸಚಿವ ಮಧು ಬಂಗಾರಪ್ಪ ಅವರು, ಈ ವಿಚಾರವನ್ನು ಸಚಿವ ಸಂಪುಟದ ಗಮನಕ್ಕೆ ತಂದು, ಬರಪೀಡಿತ ಎಂದು ಘೋಷಿಸಲು ಮುಖ್ಯಮಂತ್ರಿಗಳ ಗಮನ ಸೆಳೆದು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದರು.
ಇದೀಗ ರಾಜ್ಯ ಸರ್ಕಾರ ಸಾಗರ ಮತ್ತು ಹೊಸನಗರ ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರ್ಪಡೆಗೊಳಿಸಿರುವುದರಿಂದ ಸಚಿವರು ಜನರಿಗೆ ನೀಡಿದ್ದ ಭರವಸೆ ಈಡೇರಿದಂತಾಗಿದೆ. ಈ ನಿರ್ಧಾರದಿಂದ ಬರಗಾಲದ ಸಂಕಷ್ಟ ಎದುರಿಸುತ್ತಿರುವ ರೈತರು ಹಾಗೂ ಜನಸಾಮಾನ್ಯರಿಗೆ ಸರ್ಕಾರದ ಬರ ಪರಿಹಾರ ಕ್ರಮಗಳಡಿ ನೆರವು ಪಡೆಯಲು ಅವಕಾಶ ದೊರೆಯಲಿದೆ.
ಜನರ ಸಮಸ್ಯೆಗಳನ್ನು ಆಲಿಸುವುದರ ಜತೆಗೆ ಅವುಗಳಿಗೆ ಪರಿಹಾರ ದೊರಕಿಸಿಕೊಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದು ಜನಪ್ರತಿನಿಧಿಯ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮಧು ಬಂಗಾರಪ್ಪ ಅವರು ಸಾಗರ ಭಾಗದ ಜನರ ಮನವಿಗೆ ಸ್ಪಂದಿಸಿ, ಬರಪೀಡಿತ ಪಟ್ಟಿಗೆ ತಾಲ್ಲೂಕು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ವಹಿಸಿದ ಕಾಳಜಿ ಗಮನಾರ್ಹವಾಗಿದೆ.
ಸಾಗರ ಮತ್ತು ಹೊಸನಗರ ತಾಲ್ಲೂಕುಗಳ ಸೇರ್ಪಡೆಯೊಂದಿಗೆ ಇಡೀ ಶಿವಮೊಗ್ಗ ಜಿಲ್ಲೆ ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿರುವುದು ಜಿಲ್ಲೆಯ ಬರಪೀಡಿತ ಪ್ರದೇಶಗಳ ರೈತರಿಗೆ ನೆರವು ದೊರೆಯುವ ನಿರೀಕ್ಷೆ ಮೂಡಿಸಿದೆ.