Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಮಲೆನಾಡು ರೈತರ ನೆರವಿಗಾಗಿ ಶೀಘ್ರ ಸಂಶೋಧನಾ ಕೇಂದ್ರ: ಚಿಕ್ಕಮಗಳೂರಿನಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಣೆ

ಚಿಕ್ಕಮಗಳೂರು: ಮಲೆನಾಡು ಭಾಗದ ಅಡಿಕೆ ಬೆಳೆಗಾರರನ್ನು ಕಂಗಾಲು ಮಾಡಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕೆ ಸಮರ್ಪಕ ಸಂಶೋಧನೆ ನಡೆಸಲು ಶೀಘ್ರ ಕಾರ್ಯಕ್ರಮ ರೂಪಿಸಲಾಗುವುದು. ಸರ್ಕಾರದ ನೆರವು ದೊರೆತರೆ ಸುಸಜ್ಜಿತ ಸಂಶೋಧನಾ ಕೇಂದ್ರವನ್ನು ಆರಂಭಿಸಲಾಗುವುದು ಎಂದು 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಭರವಸೆ ನೀಡಿದರು.

ನಗರದಲ್ಲಿ ಭಾನುವಾರ ಆಯೋಜಿಸಲಾಗಿದ್ದ "ದಿವ್ಯ ಸಂಜೆ" ಸಂವಾದ ಕಾರ್ಯಕ್ರಮದಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, "ಸಂಶೋಧನೆಗಾಗಿ ಸಮಗ್ರ ಯೋಜನೆ ರೂಪಿಸಲು ನಮ್ಮ ಸಂಸ್ಥೆ ಸಿದ್ಧವಿದೆ. ಸರ್ಕಾರದಿಂದ ಅಗತ್ಯ ನೆರವು ದೊರಕಿಸಿಕೊಡುವ ಜವಾಬ್ದಾರಿಯನ್ನು ಜನಪ್ರತಿನಿಧಿಗಳು ವಹಿಸಿಕೊಳ್ಳಬೇಕು. ಸರ್ಕಾರ, ಸಮಾಜ ಮತ್ತು ಸಂಸ್ಥೆ ಜೊತೆಗೂಡಿ 'ತ್ರಿವೇಣಿ ಸಂಗಮ'ದಂತೆ ಕಾರ್ಯನಿರ್ವಹಿಸಿದರೆ ಮಲೆನಾಡಿನ ರೈತರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ," ಎಂದರು.

ಕೃಷಿ ಸಂಶೋಧನೆ ಹಾಗೂ ತಂತ್ರಜ್ಞಾನ ಬಳಕೆ:

"ನಮ್ಮ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿ ಜಪಾನ್ ದೇಶದ ತಜ್ಞರ ನೆರವಿನೊಂದಿಗೆ ಹಲವು ಮಹತ್ವದ ಸಂಶೋಧನೆಗಳನ್ನು ಕೈಗೆತ್ತಿಕೊಂಡಿದೆ. ಸಾವಯವ ಕೃಷಿ ಮತ್ತು ಬೆಳೆ ಸ್ನೇಹಿ ಬ್ಯಾಕ್ಟೀರಿಯಾಗಳ ಬಳಕೆಯ ಕುರಿತು ಗಂಭೀರ ಪ್ರಯೋಗಗಳು ನಡೆಯುತ್ತಿವೆ. ಯುದ್ಧದ ಬಳಿಕ ರಾಸಾಯನಿಕಗಳಿಂದ ಹಾಳಾದ ಭೂಮಿಯನ್ನು ಸೂಕ್ಷ್ಮಜೀವಿಗಳ ಮೂಲಕ ಫಲವತ್ತಾಗಿಸಿ ಕೃಷಿ ಉತ್ತೇಜಿಸಿದ ಇಸ್ರೇಲ್ ಮಾದರಿಯ ಬಗ್ಗೆಯೂ ನಮಗೆ ಸಂಪೂರ್ಣ ಅರಿವಿದೆ," ಎಂದು ಅವರು ವಿವರಿಸಿದರು.

news_1788149499_0_518.webp

ಪವಾಡವೆಂಬುದು ಕ್ವಾಂಟಂ ಫೀಲ್ಡ್:

ಸಾಯಿಬಾಬಾ ಅವರ ಪವಾಡಗಳ ಕುರಿತ ಜಿಜ್ಞಾಸೆಗೆ ವೀರಶೈವ ಲಿಂಗಾಯತ ಮುಖಂಡ ಶಿವಾನಂದ ಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, "ಸಾಧಕರಿಗೆ ಪವಾಡವೆಂಬುದು ತೀರಾ ಸಹಜವಾದುದು. ಆದರೆ ಅದನ್ನು ಪ್ರದರ್ಶನ ಮಾಡಬಾರದು. ಜಗತ್ತಿನಲ್ಲಿರುವುದೆಲ್ಲವೂ ಮ್ಯಾಟರ್ (ದ್ರವ್ಯ) ಮತ್ತು ಎನರ್ಜಿ (ಶಕ್ತಿ)ಯಿಂದ ಕೂಡಿದ 'ಕ್ವಾಂಟಂ ಫೀಲ್ಡ್'. ಅದರ ಸ್ವರೂಪವನ್ನು ಬದಲಿಸುವ ಸಾಮರ್ಥ್ಯ ಕೆಲವರಿಗೆ ಇರುತ್ತದೆ, ಅದನ್ನೇ ಲೋಕ ಪವಾಡ ಎನ್ನುತ್ತದೆ," ಎಂದು ವಿಶ್ಲೇಷಿಸಿದರು.

ಸತ್ಯ ಸಾಯಿಬಾಬಾ ಅವರ ಸಂಕಲ್ಪ ಮುನ್ನಡೆ:

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ, "ರಾಮಕೃಷ್ಣ ಪರಮಹಂಸರಿಗೆ ಸ್ವಾಮಿ ವಿವೇಕಾನಂದರು ಸಿಕ್ಕಂತೆ, ಭಗವಾನ್ ಶ್ರೀ ಸತ್ಯ ಸಾಯಿಬಾಬಾ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸಿಕ್ಕಿದ್ದಾರೆ. ಅವರ ಮೂಲಕವೇ ಇಂದು ವಿಶ್ವದಾದ್ಯಂತ ನಿಸ್ವಾರ್ಥ ಸೇವೆ ಮುನ್ನಡೆಯುತ್ತಿದೆ. ಇಬ್ಬರ ಬಾಹ್ಯ ಕಾರ್ಯವಿಧಾನ ಬೇರೆಯಾಗಿ ಕಂಡರೂ, ಅಂತರಂಗದಲ್ಲಿ ಇಬ್ಬರದ್ದೂ ಒಂದೇ ಚೈತನ್ಯ," ಎಂದು ಹೇಳಿದರು.

ಕಣ್ಣೀರ ಧ್ವನಿಯಲ್ಲಿ ಬದುಕಿನ ಯಶೋಗಾಥೆ ಹಂಚಿಕೊಂಡ ವಿದ್ಯಾರ್ಥಿನಿ:

ಜಯಪುರದ ಸತ್ಯ ಸಾಯಿ ಶ್ರೀನಿಕೇತನಂ ಕ್ಯಾಂಪಸ್‌ನ ವಿದ್ಯಾರ್ಥಿನಿ ಎಚ್‌.ಎಂ. ಪ್ರೀತಿ ಮಾತನಾಡಿ, "ಕುಡಿತದ ಚಟವಿದ್ದ ತಂದೆ 4ನೇ ತರಗತಿಯಲ್ಲಿದ್ದಾಗಲೇ ತೀರಿಕೊಂಡರು. ತಾಯಿಗೆ ಮಾನಸಿಕ ಅಸ್ವಸ್ಥತೆ ಇತ್ತು. ದಿಕ್ಕಿಲ್ಲದ ನನ್ನನ್ನು ಯಾರಾದರೂ ಮಾರಿಬಿಡಲು ಯೋಚಿಸುತ್ತಿದ್ದ ಸಂದರ್ಭದಲ್ಲಿ ಸದ್ಗುರುಗಳ ಆಶ್ರಯ ದೊರೆಯಿತು. ಅಲ್ಲಿ ಉಚಿತ ಶಿಕ್ಷಣ ಪಡೆದು 10ನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಾಧನೆ ಮಾಡಿದ್ದೇನೆ," ಎಂದು ಭಾವುಕರಾಗಿ ನುಡಿದರು. ವಿದ್ಯಾರ್ಥಿ ಹರ್ಷರಾಜ್ ಹಾಗೂ ವಾರ್ಡನ್ ಎಸ್. ಛಾಯಾ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಸಂವಾದವನ್ನು 'ನ್ಯೂಸ್ 18' ಕನ್ನಡ ಸುದ್ದಿವಾಹಿನಿಯ ಸಂಪಾದಕ ಹರಿಪ್ರಸಾದ್ ನಿರ್ವಹಿಸಿದರು. ರಾಘವೇಂದ್ರ ಜನ್ನು ಕಾರ್ಯಕ್ರಮ ನಿರೂಪಿಸಿದರು.

ಶ್ರೀಗಂಧದ ಎಂ.ಡಿ. ಕೃಷ್ಣೇಗೌಡರಿಗೆ 'ಕರ್ನಾಟಕ ಪರಿವರ್ತಕ ಪ್ರಶಸ್ತಿ'

ಜಿಲ್ಲೆಯ ಖ್ಯಾತ ಕಾಫಿ ಬೆಳೆಗಾರ ಹಾಗೂ ಸಮಾಜ ಸೇವಕ ಶ್ರೀಗಂಧದ ಎಂ.ಡಿ. ಕೃಷ್ಣೇಗೌಡ ಅವರಿಗೆ ಈ ಸಂದರ್ಭದಲ್ಲಿ 'ಕರ್ನಾಟಕ ಪರಿವರ್ತಕ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಹಾಗೂ ತಮ್ಮ ಆದಾಯದ ಶೇ. 50 ರಿಂದ 60 ರಷ್ಟು ಭಾಗವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿರುವ ಕೃಷ್ಣೇಗೌಡರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರಶಸ್ತಿ ಪ್ರದಾನ ಮಾಡಿದರು.

ಜಿಲ್ಲೆಯಲ್ಲಿ 'ಒನ್ ವರ್ಲ್ಡ್‌ ಒನ್ ಫ್ಯಾಮಿಲಿ' ಸೇವಾ ಪಯಣ

ಕೊಪ್ಪ ತಾಲೂಕಿನ ಜಯಪುರದಲ್ಲಿ ಬಾಲಕರಿಗಾಗಿ ಶ್ರೀ ಸತ್ಯ ಸಾಯಿ ದಿವ್ಯ ನಿಕೇತನಂ ಹಾಗೂ ಬಾಲಕಿಯರಿಗಾಗಿ ಶ್ರೀ ಸತ್ಯ ಸಾಯಿ ಶ್ರೀ ನಿಕೇತನಂ ವಸತಿ ಶಾಲೆಗಳು 2007 ರಿಂದ ಕಾರ್ಯನಿರ್ವಹಿಸುತ್ತಿದ್ದು, 2014 ರಿಂದ ಗುರುಕುಲ ಮಾದರಿಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಿವೆ. ಪ್ರಸ್ತುತ 71 ವಿದ್ಯಾರ್ಥಿಗಳು ಮತ್ತು 249 ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮಾಡುತ್ತಿದ್ದು, ಈವರೆಗೆ 6,000ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ. ಈ ಪೈಕಿ ಶೇ. 87 ಗ್ರಾಮೀಣ ಹಿನ್ನೆಲೆಯವರಾಗಿದ್ದರೆ, ಶೇ. 57 ಬಿಪಿಎಲ್ ಕುಟುಂಬಗಳ ಹಾಗೂ ಶೇ. 70 ರಷ್ಟು ತಮ್ಮ ಕುಟುಂಬದ ಮೊದಲ ತಲೆಮಾರಿನ ವಿದ್ಯಾವಂತರಾಗಿದ್ದಾರೆ.

ಗಣ್ಯರ ಉಪಸ್ಥಿತಿ:

ಕಾರ್ಯಕ್ರಮದಲ್ಲಿ ಶಾಸಕರಾದ ಎಚ್‌.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ, ಮಾಜಿ ಶಾಸಕರಾದ ಸಿ.ಟಿ. ರವಿ, ಡಿ.ಎನ್. ಜೀವರಾಜ್, ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ್, ಪ್ರಮುಖ ಕಾಫಿ ಬೆಳೆಗಾರರಾದ ಡಿ.ಎಂ. ಶಂಕರ್, ದೀಪಕ್ ದೊಡ್ಡಯ್ಯ, ಸುದರ್ಶನ, ಹಲಸೆ ಶಿವಣ್ಣ, ರಾಜಗೋಪಾಲ, ನವೀನ್ ಮಿಸ್ಕಿತ್, ಡಾ. ವಿಜಯಕುಮಾರ್, ಡಾ. ಜೆ.ಪಿ. ಕೃಷ್ಣೇಗೌಡ, ರವಿಶಂಕರ್, ಕಿಶೋರ್ ಕುಮಾರ್ ಹೆಗಡೆ, ಮಲ್ಲಿಕಾರ್ಜುನ ರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವರದಿ: ನಾಗೇಶ್ವರ ಮಾಗಡಿ ಎಂ.ಎನ್, ಚಿಕ್ಕಮಗಳೂರು

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಗ್ರಾಮೀಣ ಜನತೆಯ ಸಮಸ್ಯೆ ಪರಿಹಾರಕ್ಕೆ ಮಹತ್ವದ ಸೂಚನೆ ಕೊಟ್ಟ ಸಚಿವ ಈಶ್ವರ್ ಖಂಡ್ರೆ!BREAKING : 'KPSC' ಹಗರಣ : IAS ಅಧಿಕಾರಿ ಜ್ಞಾನೇಂದ್ರ ಕುಮಾರ್, ಬಸವರಾಜ್ ಕನ್ನಾಳೆ ಸೆ.10 ರವರೆಗೆ CID ಕಸ್ಟಡಿಗೆ!BIG NEWS : ಬೆಂಗಳೂರಲ್ಲಿ 'ಆಪರೇಷನ್ ಮುಕ್ತ 2.O': ಅಕ್ರಮವಾಗಿ ನೆಲೆಸಿದ್ದ 31 ಬಾಂಗ್ಲಾದೇಶಿ ಪ್ರಜೆಗಳ ಗಡಿಪಾರುBIG NEWS : ಪೋಸ್ಟಿಂಗ್ ಡೀಲ್ ಬಗ್ಗೆ ಕಾನ್ಫರೆನ್ಸ್ ಕಾಲ್ ಆಡಿಯೋ ವೈರಲ್ ಕೇಸ್ : ಉತ್ತರಕನ್ನಡದ ಮೂವರು PSI ಸಸ್ಪೆಂಡ್!ಮಂಗಳೂರಲ್ಲಿ ಭೀಕರ ಮರ್ಡರ್ : ಕೇವಲ ಮೊಬೈಲ್ ಗೋಸ್ಕರ ಚಾಕುವಿನಿಂದ ಇರಿದು ಅಣ್ಣನನ್ನೇ ಕೊಂದ ತಮ್ಮ!BIG NEWS : 'KPSC' ಹಗರಣಕ್ಕೂ ನನಗೂ ಏನು ಸಂಬಂಧ : HD ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ!BREAKING : 'KPSC' ಹಗರಣ : ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದೆ ಜ್ಞಾನೇಂದ್ರ ಕುಮಾರ್ : 'CID' ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು!BREAKING : ಇಂಜಿನಿಯರ್ ಗಳ ನೇಮಕಾತಿಯಲ್ಲಿ ಭಾಗಿಯಾಗಿದ್ದರೆ ರಾಜಕೀಯ ನಿವೃತ್ತಿ : ಸಚಿವ ಪ್ರಿಯಾಂಕ್ ಖರ್ಗೆ ಸವಾಲು!ಹಾಸನದಲ್ಲಿ ಜಾತ್ರಾ ಮಹೋತ್ಸವದ ವಿಚಾರವಾಗಿ 2 ಗುಂಪುಗಳ ನಡುವೆ ಮಾರಾಮಾರಿ : 6 ಜನರಿಗೆ ಗಾಯ!BREAKING : 'KPSC' ಹಗರಣಕ್ಕೆ ಬಿಗ್ ಟ್ವಿಸ್ಟ್ : ಶಾಸಕ ಅಶ್ವಥ್ ನಾರಾಯಣ ಆಪ್ತ, ಬಿಜೆಪಿ ಮುಖಂಡನೇ ಕಿಂಗ್ ಪಿನ್?!