ರಕ್ಷಣಾ ಬೇಹುಗಾರಿಕೆ: ಕೆನಡಾ ಮೂಲದ ಉದ್ಯಮಿಯನ್ನು ಬಂಧಿಸಿದ ಸಿಬಿಐ
ನವದೆಹಲಿ: ರಕ್ಷಣಾ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆನಡಾ ಮೂಲದ ಉದ್ಯಮಿಯೊಬ್ಬರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಇದೇ ಪ್ರಕರಣ ಸಂಬಂಧ ಕಳೆದ ಮೇ ತಿಂಗಳಲ್ಲಿ ಪತ್ರಕರ್ತ ಮತ್ತು ಮಾಜಿ ನೌಕಾಪಡೆ ಕಮಾಂಡರ್ ಅವರನ್ನು ಬಂಧಿಸಲಾಗಿತ್ತು. 2019 ರಲ್ಲಿ ಕೆನಡಾದಲ್ಲಿ ಖಾಯಂ ಪೌರತ್ವ ಪಡೆದಿದ್ದ ಉದ್ಯಮಿ ರಾಹುಲ್ ಗಗ್ಗಲ್ ಅವರನ್ನು ಸೋಮವಾರ ದೆಹಲಿಗೆ ಆಗಮಿಸುತ್ತಿದ್ದಂತೆ ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ವಿಶೇಷ ನ್ಯಾಯಾಲಯವು ರಾಹುಲ್ ಗಗ್ಗಲ್ ಅವರನ್ನು ಹೆಚ್ಚಿನ ವಿಚಾರಣೆಗಾಗಿ ನಾಲ್ಕು ದಿನಗಳ ಕಾಲ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಕಸ್ಟಡಿಗೆ ನೀಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸಿ ವಿದೇಶಿ ಗುಪ್ತಚರ ಸಂಸ್ಥೆಗಳಿಗೆ ರವಾನಿಸಿದ ಆರೋಪದಲ್ಲಿ ಪತ್ರಕರ್ತ ವಿವೇಕ್ ರಘುವಂಶಿ ಮತ್ತು ಮಾಜಿ ನೌಕಾಪಡೆಯ ಕಮಾಂಡರ್ ಆಶಿಶ್ ಪಾಠಕ್ ಅವರನ್ನು ಕಳೆದ ಮೇಲೆ 16 ರಂದು ಸಿಬಿಐ ಬಂಧಿಸಿತ್ತು. ಕಳೆದ ತಿಂಗಳು ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಸಿಬಿಐ ರಘುವಂಶಿ ಮತ್ತು ಪಾಠಕ್ ಅವರನ್ನು ಅಧಿಕೃತ ರಹಸ್ಯ ಕಾಯಿದೆಯ ಉಲ್ಲಂಘನೆ ಮತ್ತು ಸಂಬಂಧಿತ ಅಪರಾಧಗಳಲ್ಲಿ ಆರೋಪಿಗಳೆಂದು ಹೆಸರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.