ಬೆಂಗಳೂರು: ನಗರ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಸಿಎಆರ್ / ಡಿಎಅರ್ ) ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಂದು ಅತ್ಯಂತ ಯಶಸ್ವಿಯಾಗಿ ಲಿಖಿತ ಪರೀಕ್ಷೆ ನಡೆಸಿತು.
ಮಿಕ್ಕುಳಿದ ವೃಂದದ ಅರ್ಜಿ ಸಲ್ಲಿಸಿದ್ದ 1,42,220 ಮಂದಿ ಪೈಕಿ 1,14,079 ( ಶೇ 80) ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಕಲ್ಯಾಣ ಕರ್ನಾಟಕದ ಒಟ್ಟು 32,191 ಅಭ್ಯರ್ಥಿಗಳ ಪೈಕಿ 28,849 (ಶೇ 90) ಮಂದಿ ಹಾಜರಾಗಿದ್ದರು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಬೆಳಗಿನ ಅವಧಿಯ 309 ಹಾಗೂ ಮಧ್ಯಾಹ್ನ 60 ಕೇಂದ್ರಗಳಲ್ಲಿ ಯಾವುದೇ ಗೊಂದಲ ಇಲ್ಲದೆ ಪರೀಕ್ಷೆ ನಡೆಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು ಎಂದು ಅವರು ವಿವರಿಸಿದ್ದಾರೆ.
ಬೆಂಗಳೂರಿನ ಕೆಇಎ ಕಚೇರಿಯಲ್ಲಿ ಸ್ಥಾಪಿಸಿದ್ದ ಕಮಾಂಡ್ ಸೆಂಟರ್ ನಿಂದಲೇ ಎಲ್ಲ ಪರೀಕ್ಷಾ ಕೇಂದ್ರಗಳ ಮೇಲೆ ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡುವ ವ್ಯವಸ್ಥೆ ಮಾಡಲಾಗಿತ್ತು ಎಂದು ಅವರು ವಿವರಿಸಿದ್ದಾರೆ.
ಪರೀಕ್ಷೆ ಮುಗಿದ ನಂತರ ಕೆಇಎ ತಲುಪಿದ ಒಎಂಆರ್ ಉತ್ತರ ಪತ್ರಿಕೆಗಳನ್ನು ತಕ್ಷಣವೇ ಸ್ಕ್ಯಾನ್ ಮಾಡಿ ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವ ಕೆಲಸ ಕೂಡ ಮಾಡಲಾಗುತ್ತಿದೆ. ಇದೊಂದು ಪಾರದರ್ಶಕ ಕ್ರಮವಾಗಿದ್ದು, ಯಾರು ಬೇಕಾದರೂ ಒಎಂಆರ್ ಪ್ರತಿಗಳನ್ನು ನೋಡಬಹುದು ಎಂದು ಅವರು ಹೇಳಿದ್ದಾರೆ.