ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಜ್ಯೋತಿ’ ಯೋಜನೆಯಡಿ ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮನೆ-ಮನೆ ಸಮೀಕ್ಷೆಯಿಂದ ವಂಚಿತರಾದ ಗ್ರಾಹಕರಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಸಮೀಕ್ಷಾ ಸಿಬ್ಬಂದಿ ಭೇಟಿ ನೀಡಿದ ವೇಳೆ ಮನೆಗೆ ಬೀಗ ಹಾಕಿದ್ದ ಕಾರಣಕ್ಕೆ ಅಥವಾ ಮನೆ ಖಾಲಿಯಿದ್ದ ಪರಿಣಾಮ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರು, ಅಕ್ಟೋಬರ್.31ರೊಳಗೆ ಸಮೀಪದ ಬೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಕೊನೆಯ ಅವಕಾಶ ಕಲ್ಪಿಸಲಾಗಿದೆ.
ಶೇ. 97.45ರಷ್ಟು ಸಮೀಕ್ಷೆ ಪೂರ್ಣ
ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಹಾಗೂ ಅಮೃತ ಜ್ಯೋತಿ ಫಲಾನುಭವಿಗಳು ಸೇರಿದಂತೆ ಒಟ್ಟು 74,29,773 ಗೃಹ ಜ್ಯೋತಿ ಗ್ರಾಹಕರಿದ್ದಾರೆ. ಈ ಪೈಕಿ ಅಕ್ಟೋಬರ್ 14ರ ವರೆಗೆ 72,40,489 ಗ್ರಾಹಕರ (ಶೇ. 97.45) ಮನೆ ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
16.37 ಲಕ್ಷ ಗ್ರಾಹಕರಿಗೆ ಅಂತಿಮ ಅವಕಾಶ
ಸಮೀಕ್ಷಾ ಕಾರ್ಯದ ವೇಳೆ ಸುಮಾರು 16.37 ಲಕ್ಷ ಗ್ರಾಹಕರು ಸ್ಥಳದಲ್ಲಿ ಲಭ್ಯವಾಗಿಲ್ಲ. ಇದರಲ್ಲಿ 16.09 ಲಕ್ಷ ಮನೆಗಳು ಬೀಗ ಹಾಕಲ್ಪಟ್ಟಿದ್ದರೆ, 28,519 ಮನೆಗಳು ಖಾಲಿಯಿರುವುದು ಪತ್ತೆಯಾಗಿದೆ. ಈ ವರ್ಗದ ಅರ್ಹ ಫಲಾನುಭವಿಗಳು ಯೋಜನೆಯ ಲಾಭದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸಮೀಕ್ಷೆ ಅವಧಿಯನ್ನು ವಿಸ್ತರಿಸುವಂತೆ ಬೆಸ್ಕಾಂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಬೆಸ್ಕಾಂ ವಿನಂತಿಯನ್ನು ಪರಿಗಣಿಸಿದ ರಾಜ್ಯ ಸರ್ಕಾರ, ಸಮೀಕ್ಷೆಯ ಅವಧಿಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿದೆ.
ದಾಖಲೆ ಪರಿಶೀಲನೆಗೆ ಇದುವೇ ಕೊನೆ ದಿನ
ಮನೆ-ಮನೆ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಗ್ರಾಹಕರು ಅಕ್ಟೋಬರ್ 31ರ ಒಳಗೆ ತಮ್ಮ ವ್ಯಾಪ್ತಿಯ ಬೆಸ್ಕಾಂ ಉಪ ವಿಭಾಗ ಕಚೇರಿಗೆ ನೇರವಾಗಿ ಭೇಟಿ ನೀಡಿ ನಿಗದಿತ ದಾಖಲೆಗಳನ್ನು ಒದಗಿಸಿ ಪರಿಶೀಲನೆ ಪೂರ್ಣಗೊಳಿಸಬೇಕು. ಇದು ದಾಖಲೆಗಳ ಪರಿಶೀಲನೆಗೆ ನೀಡಲಾಗುತ್ತಿರುವ ಅಂತಿಮ ಹಾಗೂ ಒಂದು ಬಾರಿಯ ಅವಕಾಶವಾಗಿದ್ದು, ತಪ್ಪಿದಲ್ಲಿ ಯೋಜನೆಯ ಪ್ರಯೋಜನ ಪಡೆಯಲು ತೊಂದರೆಯಾಗಬಹುದು ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.