ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಕಟ್ಟಕಡೆಯ ಫಲಾನುಭವಿಗೂ ಕ್ರಮಬದ್ಧವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದಿಂದ, ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲಿ ತಲಾ 6 ಸದಸ್ಯರ ‘ಗ್ಯಾರಂಟಿ ಸಮಿತಿ’ಗಳನ್ನು ರಚಿಸಲು ಸರ್ಕಾರ ಆದೇಶ ಹೊರಡಿಸಿದೆ.
ಈಗಾಗಲೇ ರಾಜ್ಯ, ಜಿಲ್ಲಾ, ತಾಲೂಕು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ. ಇದೀಗ ಯೋಜನೆಗಳ ಅನುಷ್ಠಾನವನ್ನು ಇನ್ನಷ್ಟು ಚುರುಕುಗೊಳಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಸ್ಥಳೀಯ ಮಟ್ಟಕ್ಕೂ ಸಮಿತಿಗಳನ್ನು ವಿಸ್ತರಿಸಲಾಗಿದೆ.
ಸಮಿತಿಯ ರಚನೆ ವಿವರ:
ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಗ್ಯಾರಂಟಿ ಸಮಿತಿಗಳು ತಲಾ 6 ಸದಸ್ಯರನ್ನು ಒಳಗೊಂಡಿರಲಿದ್ದು, ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಪ್ರಾತಿನಿಧ್ಯ ನೀಡಲಾಗಿದೆ:
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST): 1 ಸ್ಥಾನ
ಅಲ್ಪಸಂಖ್ಯಾತರು: 1 ಸ್ಥಾನ (ಅಲಭ್ಯವಿದ್ದಲ್ಲಿ ಸಾಮಾನ್ಯ ವರ್ಗಕ್ಕೆ)
ಮಹಿಳಾ ಮೀಸಲು: 2 ಸ್ಥಾನಗಳು
ಇತರೆ ಹಿಂದುಳಿದ ವರ್ಗ (OBC): 1 ಸ್ಥಾನ
ಸಾಮಾನ್ಯ ವರ್ಗ: 1 ಸ್ಥಾನ
ಈ ಎಲ್ಲಾ ಸಮಿತಿಗಳು ‘ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ’ದ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಸರ್ಕಾರದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

