ರಾಯಚೂರು: ಬಡ ರೋಗಿಗಳಿಗೆ ಉಚಿತವಾಗಿ ತಲುಪಬೇಕಿದ್ದ ಆರೋಗ್ಯ ಇಲಾಖೆಯ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳು ಕಸದ ತಿಪ್ಪೆಯಲ್ಲಿ ಪತ್ತೆಯಾಗಿರುವ ಘಟನೆ ನಗರದ ಬಸವೇಶ್ವರ ವೃತ್ತದ ಬಳಿ ವರದಿಯಾಗಿದೆ. ರಕ್ತದೊತ್ತಡ ಮತ್ತು ಮಧುಮೇಹದಂತಹ ದೀರ್ಘಕಾಲಿಕ ಕಾಯಿಲೆಗಳಿಗೆ ಬಳಸುವ ಈ ಪ್ರಮುಖ ಔಷಧಿಗಳ ಅವಧಿ 2026ರ ಸೆಪ್ಟೆಂಬರ್ಗೆ ಮುಗಿಯುವುದಿದ್ದರೂ, ಅವುಗಳನ್ನು ರೋಗಿಗಳಿಗೆ ವಿತರಿಸುವ ಬದಲು ಕಸದ ರಾಶಿಗೆ ಎಸೆಯಲಾಗಿದೆ.
ಆರೋಗ್ಯ ಇಲಾಖೆಯ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದಾಗಿ ಬಡ ರೋಗಿಗಳಿಗೆ ಸಿಗಬೇಕಾದ ಸೌಲಭ್ಯವು ನೇರವಾಗಿ ತಿಪ್ಪೆಪಾಲಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಎದುರಾಗುವ ಈ ಸಂದರ್ಭದಲ್ಲಿ, ಲಭ್ಯವಿರುವ ಔಷಧಿಗಳ ಸರಿಯಾದ ನಿರ್ವಹಣೆ ಮಾಡದೆ ಪೋಲು ಮಾಡಿರುವುದು ಇಲಾಖೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.