ಸಾಗರ : ಕೆಲಸವಿಲ್ಲದ ಕೊರಗು ಹಾಗೂ ಕೈಸಾಲ ತೀರಿಸಲಾಗದ ಮಾನಸಿಕ ಒತ್ತಡದಿಂದ ಮನನೊಂದ ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಸಾಗರ ತಾಲೂಕಿನ ಹೊಸಕೊಪ್ಪ ಗ್ರಾಮದ ಚಾಂದ್‌ಪಾಷಾ (46) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಡ್ರೈವರ್ ಆಗಿದ್ದ ಇವರು, ಜೀವನ ನಿರ್ವಹಣೆಗಾಗಿ ಹಲವೆಡೆ ಕೈಸಾಲ ಮಾಡಿಕೊಂಡಿದ್ದರು. ಆದರೆ ಇತ್ತೀಚೆಗೆ ಸೂಕ್ತ ಕೆಲಸವಿಲ್ಲದೆ ಆದಾಯವಿಲ್ಲದ ಕಾರಣ, ಸಾಲ ತೀರಿಸಲು ಸಾಧ್ಯವಾಗದೆ ತೀವ್ರವಾಗಿ ಕೊರಗುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯ ವಿವರ:
ಸೆಪ್ಟೆಂಬರ್ 30ರ ಸಂಜೆ ಸುಮಾರು 6:30ರ ಸುಮಾರಿಗೆ ಮನೆಯಿಂದ ಹೊರಟ ಚಾಂದ್‌ಪಾಷಾ ಅವರು ರಾತ್ರಿ 10 ಗಂಟೆಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹಾಗೂ ಸಂಬಂಧಿಕರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಅಕ್ಟೋಬರ್ 1ರ ಮುಂಜಾನೆ 7:30ರ ವೇಳೆಗೆ ಚಂಪಕಸರ ಕೆರೆ ಬಳಿ ಹುಡುಕಾಡಿದಾಗ, ಚಾಂದ್‌ಪಾಷಾ ಅವರ ಮೃತದೇಹ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಬಳಿಕ ಶವವನ್ನು ಮೇಲಕ್ಕೆತ್ತಿ ಆನಂದಪುರ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಕೈ ಸಾಲ ತೀರಿಸಲಾಗದೆ ಮತ್ತು ಕೆಲಸವಿಲ್ಲದೆ ಖಿನ್ನತೆಗೆ ಒಳಗಾಗಿ ಚಂಪಕಸರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಮ್ಮ ಶಹೀದ್ ಪಾಷಾ ಅವರು ನೀಡಿದ ದೂರಿನ ಮೇರೆಗೆ, ಆನಂದಪುರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್.ಎಸ್ ಕಾಯ್ದೆಯಡಿ ಯುಡಿಆರ್ (UDR) ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..