ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಅಧಿಕಾರಿಗಳಿಲ್ಲದೆ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ತಹಶೀಲ್ದಾರ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರ ವಿರುದ್ಧದವೂ ಮಾಜಿ ಸಚಿವ ಹರತಾಳು ಹಾಲಪ್ಪ ಕ್ಷೇತ್ರದ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪ್ರಮುಖ ಹುದ್ದೆಗಳು ಖಾಲಿ ಬಿದ್ದಿದ್ದರೂ ಶಾಸಕರು ಸಾರ್ವಜನಿಕರ ಹಾದಿ ತಪ್ಪಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಪೊಲೀಸ್ ಇಲಾಖೆ ಹಾಗೂ ಪ್ರಮುಖ ಹುದ್ದೆಗಳ ವೈಫಲ್ಯ
ತಾಲ್ಲೂಕಿನಲ್ಲಿ ಒಟ್ಟು 12 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳ ಪೈಕಿ 8 ಹುದ್ದೆಗಳು ಖಾಲಿ ಇವೆ. ಇರುವುದರಲ್ಲಿ ಒಬ್ಬರು ಮಾತ್ರ ಡೆಪ್ಯುಟೇಶನ್ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ನಗರಸಭೆ ಆಯುಕ್ತರು, ತಾಲ್ಲೂಕು ಪಂಚಾಯಿತಿ ಇಒ ಹಾಗೂ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರ ಹುದ್ದೆಗಳು ಖಾಲಿ ಇವೆ. ಪೊಲೀಸ್ ಠಾಣೆಗೆ ಧೈರ್ಯವಾಗಿ ಬನ್ನಿ ಎಂದು ಹೇಳುವ ಶಾಸಕರು, ಅಲ್ಲಿ ದೂರು ಸ್ವೀಕರಿಸಲು ಅಧಿಕಾರಿಗಳೇ ಇಲ್ಲದಿರುವುದನ್ನು ಮರೆಮಾಚುತ್ತಿದ್ದಾರೆ ಎಂದು ಗುಡುಗಿದರು.
ಸರ್ಕಾರಿ ಆಸ್ಪತ್ರೆ ದುಸ್ಥಿತಿ ಮತ್ತು ಸುಳ್ಳು ಅನುದಾನದ ಪ್ರಚಾರ
ಸಾಗರ ಸರ್ಕಾರಿ ಆಸ್ಪತ್ರೆಗೆ 70 ಕೋಟಿ ರೂಪಾಯಿ ಅನುದಾನ ತಂದಿರುವುದಾಗಿ ಶಾಸಕರು ಕೇವಲ ಪ್ರಚಾರ ಪಡೆಯುತ್ತಿದ್ದಾರೆ. ಆದರೆ ವಾಸ್ತವವಾಗಿ ಆಸ್ಪತ್ರೆಯಲ್ಲಿ ನುರಿತ ವೈದ್ಯರು ಮತ್ತು ಅರವಳಿಕೆ ತಜ್ಞರೇ ಇಲ್ಲದೆ ರೋಗಿಗಳು ಹಾಗೂ ಶಸ್ತ್ರಚಿಕಿತ್ಸೆಗಳು ತೊಂದರೆಗೆ ಸಿಲುಕಿವೆ. ಮೂರುವರೆ ವರ್ಷಗಳಿಂದ ಅಧಿಕಾರದಲ್ಲಿದ್ದರೂ ವೈದ್ಯರನ್ನು ನೇಮಿಸಲು ವಿಫಲರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಳೆಗಾಲ ಮುಗಿಯುವ ಹೊತ್ತಿಗೆ ಮಳೆ ಮಾಪನ ಕೇಂದ್ರದ ನಾಟಕ
ಕೆಡಿಪಿ ಸಭೆಯಲ್ಲಿ ಬೆಳೆವಿಮೆ ಹೆಸರಿನಲ್ಲಿ ರೈತರ ಕಣ್ಣೊರೆಸುವ ತಂತ್ರ ನಡೆಯುತ್ತಿದೆ. ಮಳೆ ಮಾಪನ ಕೇಂದ್ರಗಳ ದುರಸ್ತಿ ಕಾರ್ಯವನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲೇ ಮುಗಿಸಬೇಕಿತ್ತು. ಆದರೆ ಮಳೆಗಾಲ ಮುಗಿಯುವ ಸೆಪ್ಟೆಂಬರ್ ತಿಂಗಳಲ್ಲಿ ಅನುದಾನ ನೀಡುವುದಾಗಿ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದರು.

ಕೆಡಿಪಿ ಸಭೆಯಲ್ಲಿ ಮಹಿಳಾ ತಹಶೀಲ್ದಾರ್‌ಗೆ ಕಾನೂನುಬಾಹಿರ ಬೆದರಿಕೆ
ಕೆಡಿಪಿ ಸಭೆಯ ವೇದಿಕೆಯನ್ನು ದುರುಪಯೋಗಪಡಿಸಿಕೊಂಡು ದಕ್ಷತೆಯಿಂದ ಕೆಲಸ ಮಾಡುತ್ತಿರುವ ಮಹಿಳಾ ತಹಶೀಲ್ದಾರ್ ಅವರಿಗೆ ಸಾರ್ವಜನಿಕವಾಗಿ ಅವಮಾನಿಸಿ ಬೆದರಿಕೆ ಹಾಕಲಾಗಿದೆ. ತಹಶೀಲ್ದಾರ್ ಹುದ್ದೆಯ ಅಧಿಕಾರಿಯನ್ನು ವರ್ಗಾವಣೆ ಮಾಡಲು ಅಥವಾ ಡೆಪ್ಯುಟೇಶನ್ ಮಾಡಲು ಸಹಾಯಕ ಆಯುಕ್ತರಿಗೆ ಅಧಿಕಾರವೇ ಇಲ್ಲದಿದ್ದರೂ ನಿಯಮಬಾಹಿರವಾಗಿ ಮಾತನಾಡಲಾಗಿದ್ದು, ಇದು ಅಧಿಕಾರ ದುರ್ಬಳಕೆಯಾಗಿದೆ ಕಿಡಿಕಾರಿದರು.
ನಿಯಮಬಾಹಿರ ಬಾವಿ ಮುಚ್ಚುವಿಕೆ ಮತ್ತು ಲೋಕಾಯುಕ್ತಕ್ಕೆ ದೂರು
ಹಂದಿ ಮತ್ತು ಕೋಳಿಗಳು ಬೀಳುತ್ತಿದ್ದವು ಎಂಬ ಕಟ್ಟುಕಥೆ ಕಟ್ಟಿ ನಿಯಮಬಾಹಿರವಾಗಿ ಹಳೆಯ ಬಾವಿಯನ್ನು ಮುಚ್ಚಿ, ನಂತರ ಹೊಸ ಬಾವಿ ತೆಗೆಯಲಾಗಿದೆ. ಯಾವ ನಿಯಮ ಮತ್ತು ಅನುದಾನದ ಅಡಿಯಲ್ಲಿ ಈ ಕಾಮಗಾರಿ ಮಾಡಲಾಗಿದೆ ಎಂಬುದರ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ತಾಲ್ಲೂಕಿನಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಶಾಸಕರು ಕೇವಲ ಸುಳ್ಳು ಹೇಳಿಕೆ ನೀಡುವುದನ್ನು ನಿಲ್ಲಿಸಿ ಆಡಳಿತ ಯಂತ್ರವನ್ನು ಸರಿಪಡಿಸಲಿ ಎಂದು ಹಾಲಪ್ಪ ಆಗ್ರಹಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು