ಸೇಡಂ: ಸೇಡಂ ಮತ್ತು ಚಿಂಚೋಳಿ ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿದ್ದು, ಮುಂಗಾರು ಬೆಳೆ ಸಂಪೂರ್ಣ ನಾಶವಾಗಿದೆ. ಹಿಂಗಾರು ಬಿತ್ತನೆಗೂ ಮಳೆ ಇಲ್ಲದೆ ರೈತರು ಬೋರ್ವೆಲ್ಗಳನ್ನೇ ಅವಲಂಬಿಸಿದ್ದಾರೆ. ಆದರೆ ಜೆಸ್ಕಾಂನ ನಿರಂತರ ವಿದ್ಯುತ್ ಕಡಿತದಿಂದಾಗಿ ರೈತರು ಬೆಳೆ ಉಳಿಸಿಕೊಳ್ಳಲಾಗದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಪತ್ರ ಬರೆದಿರುವ ಅವರು, ಸೇಡಂ ತಾಲೂಕಿನ ಮುಧೋಳ, ಕೋಲಕುಂದಾ, ಆಡಕಿ, ಕೋಡ್ಲಾ, ಮಳಖೇಡ ಮತ್ತು ಚಿಂಚೋಳಿ ತಾಲೂಕಿನ ಸುಲೇಪೇಟ, ನೀಡಗುಂದಾ ಹಾಗೂ ಕಾಳಗಿ ತಾಲೂಕಿನ ಟೆಂಗಳಿ ಭಾಗದ ರೈತರು ಕಳೆದ 2-3 ತಿಂಗಳಿನಿಂದ ವಿದ್ಯುತ್ಗಾಗಿ ಪರದಾಡುತ್ತಿದ್ದಾರೆ. ದಿನಕ್ಕೆ 2-3 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದ್ದು, ರೈತರು ರಾತ್ರಿಯಿಡೀ ಹೊಲದಲ್ಲೇ ಕಾಯುವಂತಾಗಿದೆ. ಹಲವು ಬಾರಿ ಮನವಿ ಮಾಡಿದರೂ ಜೆಸ್ಕಾಂ ಅಧಿಕಾರಿಗಳು ಕ್ಯಾರೇ ಎಂದಿಲ್ಲ ಎಂದು ಆರೋಪಿಸಿದ್ದಾರೆ.
3-4 ದಿನ ಗಡುವು, ಇಲ್ಲದಿದ್ದರೆ ಅಹೋರಾತ್ರಿ ಧರಣಿ:
"ಕ್ಷೇತ್ರದ ಎಲ್ಲಾ ಹಳ್ಳಿಗಳ ಕೃಷಿ ಪಂಪ್ಸೆಟ್ಗಳಿಗೆ ಕನಿಷ್ಠ 8 ಗಂಟೆ ನಿರಂತರ ವಿದ್ಯುತ್ ಪೂರೈಸಬೇಕು. ಮುಂದಿನ 3-4 ದಿನಗಳಲ್ಲಿ ಸುಧಾರಣೆ ಆಗದಿದ್ದರೆ ಅನಿವಾರ್ಯವಾಗಿ ಜೆಸ್ಕಾಂ ಕಚೇರಿಗೆ ಬೀಗ ಜಡಿದು, ಕಚೇರಿ ಎದುರೇ ರೈತರೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು" ಎಂದು ತೇಲ್ಕೂರ್ ಎಚ್ಚರಿಕೆ ನೀಡಿದ್ದಾರೆ.
ರೈತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ವಿದ್ಯುತ್ ಪೂರೈಕೆಯಲ್ಲಿ ಸುಧಾರಣೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.