ಬೆಂಗಳೂರು: ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣವೇ ಸ್ಪಂದಿಸಿ, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆಯೊಂದನ್ನು ಇರಿಸಿದೆ. ರಾಜ್ಯದಲ್ಲಿ 'ಪ್ರಜಾಸೇವಾ' ಎಂಬ ಹೊಸ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗಿದ್ದು, ಸೆಪ್ಟೆಂಬರ್ 5 ರಿಂದ ಈ ಸೇವೆಗೆ ಅಧಿಕೃತ ಚಾಲನೆ ಸಿಗಲಿದೆ. ಬರುವ ದಿನಗಳಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಕ್ಷಣಾರ್ಧದಲ್ಲಿ ಪರಿಹಾರ ಕಂಡುಕೊಳ್ಳಲು ಈ ಯೋಜನೆ ನೆರವಾಗಲಿದೆ.
ಈ ಹಿಂದೆ ಸಾರ್ವಜನಿಕರು ಸರ್ಕಾರದ ವಿವಿಧ ಸೇವೆಗಳನ್ನು ಪಡೆಯಲು ಅಥವಾ ಯೋಜನೆಯ ಪ್ರಯೋಜನಗಳು ದೊರೆಯದೇ ಇದ್ದಾಗ, ತಮ್ಮ ಕುಂದುಕೊರತೆಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದು ಪರಿಹಾರ ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇತ್ತು. ಆದರೆ ಇನ್ಮುಂದೆ ಅಂತಹ ಅಲೆದಾಟಕ್ಕೆ ತೆರೆ ಬೀಳಲಿದ್ದು, ಪ್ರಜಾಸೇವಾ ವ್ಯವಸ್ಥೆಯ ಮೂಲಕ ಸಾರ್ವಜನಿಕರು ಯಾವುದೇ ರೀತಿಯ ಕುಂದುಕೊರತೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತರಬಹುದಾಗಿದೆ.
ಕರ್ನಾಟಕ ಸರ್ಕಾರದ ಈ 'ಪ್ರಜಾಸೇವಾ' ಅಭಿಯಾನವು ಸಾರ್ವಜನಿಕರ ಅರ್ಜಿಗಳನ್ನು ನೇರವಾಗಿ ಸ್ವೀಕರಿಸಿ, ಸ್ಥಳದಲ್ಲೇ ಅಥವಾ ನಿಗದಿತ ಕಾಲಮಿತಿಯಲ್ಲಿ ಪರಿಹಾರ ಒದಗಿಸುವ ಏಕೀಕೃತ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಜನರ ಮನೆ ಬಾಗಿಲಿಗೇ ಆಡಳಿತ ವ್ಯವಸ್ಥೆಯನ್ನು ತಲುಪಿಸುವ ಉದ್ದೇಶದಿಂದ ನೂತನವಾಗಿ ಪ್ರಜಾಸೇವಾ ಇಲಾಖೆಯನ್ನು ರಚಿಸಲಾಗಿದೆ. ಈ ಮಹತ್ವಾಕಾಂಕ್ಷಿ ಅಭಿಯಾನಕ್ಕೆ ಸೆಪ್ಟೆಂಬರ್ 5 ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ ಚಾಲನೆ ನೀಡಲಾಗುತ್ತಿದೆ.
ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ರಾಜ್ಯಾದ್ಯಂತ ಪ್ರತಿ ಶನಿವಾರ ತಾಲ್ಲೂಕು ಮತ್ತು ಹೋಬಳಿ ಮಟ್ಟಗಳಲ್ಲಿ ಪರ್ಯಾಯವಾಗಿ ಪ್ರಜಾಸೇವಾ ಅಭಿಯಾನದ ಸಭೆಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಕುರಿತು ಏಕೀಕೃತ ಕ್ಯಾಲೆಂಡರ್ ಆಫ್ ಇವೆಂಟ್ಸ್ ಸಿದ್ಧಪಡಿಸಲಾಗಿದ್ದು, ಮುಂದಿನ 3-4 ತಿಂಗಳಲ್ಲಿ ಎಲ್ಲಾ ತಾಲ್ಲೂಕು ಹಾಗೂ ಹೋಬಳಿಗಳನ್ನು ತಲುಪುವ ಗುರಿ ಹೊಂದಲಾಗಿದೆ.
ಈ ಅಭಿಯಾನದ ಸಭೆಗಳ ರೂಪುರೇಷೆಯನ್ನು ಸ್ಪಷ್ಟವಾಗಿ ಹಂಚಿಕೆ ಮಾಡಲಾಗಿದೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ಸಭೆಗಳು ಜರುಗಲಿವೆ. ಉಳಿದಂತೆ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಭೆಗಳು ನಡೆಯಲಿವೆ. ಈ ಸಭೆಗಳಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆಗೆ ಸ್ಥಳೀಯ ಮಾಜಿ ಜನಪ್ರತಿನಿಧಿಗಳು ಹಾಗೂ ಮುಖಂಡರು ಭಾಗವಹಿಸಲಿದ್ದಾರೆ.
ಜನರಿಗೆ ಈ ಸಭೆಗಳ ಕುರಿತು ಮಾಹಿತಿ ತಲುಪಿಸಲು ವಿಶೇಷ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಭೆ ನಡೆಯುವ 15 ದಿನಗಳ ಮುಂಚಿತವಾಗಿಯೇ ಮನೆ-ಮನೆಗೆ ಕರಪತ್ರಗಳನ್ನು ವಿತರಿಸಲಾಗುತ್ತದೆ. ಈ ಕರಪತ್ರಗಳಲ್ಲಿ ಪೂರ್ವಮುದ್ರಿತ ಅರ್ಜಿ ನಮೂನೆ ಮತ್ತು ಅಗತ್ಯ ದಾಖಲೆಗಳ ಪರಿಶೀಲನಾ ಪಟ್ಟಿ ಇರಲಿದೆ. ಜೊತೆಗೆ, ಸಾರ್ವಜನಿಕರಿಗೆ ಸಭೆಯ ದಿನಾಂಕ, ಸಮಯ, ಸ್ಥಳ ಹಾಗೂ ಅಧ್ಯಕ್ಷತೆ ವಹಿಸುವವರ ವಿವರಗಳನ್ನು ತಿಳಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಕಾಲ್ ಸೆಂಟರ್ ಮೂಲಕ ಸ್ವಯಂಚಾಲಿತ ಕರೆಗಳನ್ನು (Outgoing Calls) ಮಾಡಲಾಗುತ್ತದೆ.
ಸಾರ್ವಜನಿಕರು ತಮ್ಮ ಅರ್ಜಿಗಳು ಹಾಗೂ ಅಹವಾಲುಗಳನ್ನು ಮುಂಚಿತವಾಗಿಯೇ 'ಗ್ರಾಮ ಒನ್' ಕೇಂದ್ರಗಳಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಜಾಸೇವಾ ಅಭಿಯಾನ ನಡೆಯುವ ಸ್ಥಳದಲ್ಲೇ ಗ್ರಾಮ ಒನ್ ಮಳಿಗೆಗಳನ್ನು ಸ್ಥಾಪಿಸಿ, ಕಂಪ್ಯೂಟರ್, ಲ್ಯಾಪ್‌ಟಾಪ್, ಪ್ರಿಂಟರ್ ಹಾಗೂ ಇಂಟರ್ನೆಟ್ ಸೌಲಭ್ಯದೊಂದಿಗೆ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡಲಾಗುತ್ತದೆ. ಸಭೆಯ ದಿನದಂದು ಹೊಸ ಅಹವಾಲುಗಳನ್ನು ಸ್ವೀಕರಿಸಲು ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತದೆ.