ಹಾಸನ : ಹಾಸನದಲ್ಲಿ ದೇವಸ್ಥಾನ ಜಾತ್ರಾ ಮಹೋತ್ಸವದ ವಿಚಾರಕ್ಕೆ ಮಾರಮಾರಿ ನಡೆದಿದ್ದು, ಅರಸೀಕೆರೆ ತಾಲೂಕಿನ ಸೈದರಹಳ್ಳಿಯಲ್ಲಿ ಈ ಒಂದು ಗಲಾಟೆ ನಡೆದಿದೆ. ಸಚಿವರ ಬೆಂಬಲಿಗರು ಮತ್ತು ಜೆಡಿಎಸ್ ಮುಖಂಡನ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು ದೊಣ್ಣೆ ಕಲ್ಲುಗಳಿಂದ ಎರಡು ಗುಂಪುಗಳು ಹೊಡೆದಾಡಿಕೊಂಡಿವೆ.
ಗಲಾಟೆಯ ವೇಳೆ ಆರು ಮಂದಿಗೆ ಗಾಯವಾಗಿದ್ದು ಒಂದು ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಗ್ರಾಮದಲ್ಲಿ ದೇವಸ್ಥಾನ ಜಾತ್ರಾ ಮಹೋತ್ಸವದ ಕುರಿತು ಚರ್ಚೆ ನಡೆಯುತ್ತಿತ್ತು. ಸಚಿವ ಶಿವಲಿಂಗೇಗೌಡ ಆಪ್ತ ನಂಜುಂಡಸ್ವಾಮಿ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತವಾಯಿತು. ಜೆಡಿಎಸ್ ಮುಖಂಡ ಎನ್ ಆರ್ ಸಂತೋಷ್ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ವಾಗ್ವಾದ ನಡೆದು ಎರಡು ಗುಂಪುಗಳ ನಡುವೆ ಹೊಡೆದಾಟ ನಡೆಯಿತು.
ಜಗಳ ತಾರಕಕ್ಕೆ ಏರಿ, ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆದಾಟ ನಡೆದಿದೆ. ಮನೆಯ ಮೇಲೆ ದಾಳಿ ನಡೆಸಿ ಕಿಟಕಿಗಳನ್ನು ಒಂದು ಗುಂಪು ಒಡೆದು ಹಾಕಿದೆ. ಘಟನೆಯಲ್ಲಿ ಆರು ಜನರಿಗೆ ಗಾಯವಾಗಿದ್ದು ಗಾಯಾಳುಗಳಿಗೆ ಅರಸೀಕೆರೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಣಾವರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಒಂದು ಘಟನೆ ನಡೆದಿದೆ.