LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

10 ಸಾವಿರ ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ಮರುವಶಕ್ಕೆ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ನಗರದ ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಸರ್ವೆ ನಂ.1 ಮತ್ತು 2ರಲ್ಲಿ 10 ಸಾವಿರ ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶವನ್ನು ಇಲಾಖೆಗೆ ಮರಳಿ ಪಡೆಯಲು ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಈ ಸಂಬಂಧ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಯವರಿಗೆ ಟಿಪ್ಪಣಿ ಕಳುಹಿಸಿರುವ ಸಚಿವರು, ಅರಣ್ಯ ನಿಯಮಾವಳಿ 1878ರ ಸೆಕ್ಷನ್ 9ರಡಿಯಲ್ಲಿ ಅರಣ್ಯ ಎಂದು ಘೋಷಣೆಯಾಗಿ, ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ಅಂದರೆ 1896 ಜೂನ್ 11ರಲ್ಲೇ ಗೆಜೆಟ್ ಅಧಿಸೂಚನೆ ಆಗಿರುವ ಸಾವಿರಾರು ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ. ಸಂಸ್ಥೆ ಅಕ್ರಮವಾಗಿ ಸರಕಾರಿ ಇಲಾಖೆಗಳು, ವಿವಿಧ ಸಂಸ್ಥೆಗಳು ಮತ್ತು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಕೂಡಲೇ ಒಟ್ಡು 599 ಎಕರೆ ಅರಣ್ಯ ಭೂಮಿಯ ಪೈಕಿ ಎಚ್.ಎಂ.ಟಿ. ನೀಡಲಾಗಿದೆ ಎನ್ನಲಾದ 469ಎಕರೆ 32 ಗುಂಟೆಯಲ್ಲಿ ಖಾಲಿ ಇರುವ 281 ಎಕರೆ ಜಮೀನನ್ನು ಮೊದಲಿಗೆ ವಶಕ್ಕೆ ಪಡೆದು ನಂತರ ಉಳಿದ ಭೂಮಿಯ ವಶಕ್ಕೆ ಕಾನೂನು ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ. ಅರಣ್ಯ ಸಂರಕ್ಷಣಾ ಕಾಯಿದೆ ಸೆಕ್ಷನ್ 64ಎ ಅಡಿಯಲ್ಲಿ ಈ ಹಿಂದೆ ಪ್ರಕ್ರಿಯೆ ನಡೆದಿದ್ದು ಭೂಮಿ ತೆರವಿಗೆ ಆದೇಶ ಆಗಿದ್ದರೂ, ಈವರೆಗೆ ಕ್ರಮ ವಹಿಸದ ಅರಣ್ಯಾಧಿಕಾರಿಗಳ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸಚಿವರು, ಈ ಕುರಿತು ತನಿಖೆ ನಡೆಸಲು ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದ್ದಾರೆ. ಅರಣ್ಯ ನಿಯಂತ್ರಣ ಕಾಯಿದೆ 1900ರ ಸೆಕ್ಷನ್ 30ರ ಸಬ್ ಸೆಕ್ಷನ್ (1)ರ ಅಡಿಯಲ್ಲಿ ಯಾವುದೇ ಅರಣ್ಯ ಭೂಮಿಯನ್ನು ದಾನವಾಗಿ ನೀಡಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ. ಯಾವುದೇ ಅರಣ್ಯ ಭೂಮಿಯನ್ನು ಮಂಜೂರಾತಿ ಮಾಡುವ ಮುನ್ನ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಲು ಮೊದಲಿಗೆ ಡಿ ನೋಟಿಫೈ ಮಾಡಿ, ಗೆಜೆಟ್ ಅಧಿಸೂಚನೆ ಮಾಡಬೇಕಾಗಿರುತ್ತದೆ. ಆದರೆ ಸದರಿ ಜಮೀನನ್ನು ಅಂದಿನ ಬೆಂಗಳೂರು ನಗರ ಜಿಲ್ಲಾಧಿಕಾರಿ ಹನುಮಾನ್ ಅವರು 1963ರಲ್ಲಿ ಎಚ್.ಎಂ.ಟಿ.ಗೆ ದಾನಪತ್ರದ ಮೂಲಕ ವರ್ಗಾವಣೆ ಮಾಡಿರುತ್ತಾರೆ ಎನ್ನಲಾಗಿದೆ. ಈ ದಾನಪತ್ರದ ಕುರಿತಂತೆ ಯಾವುದೇ ಗೆಜೆಟ್ ಅಧಿಸೂಚನೆಯೂ ಆಗಿರುವುದಿಲ್ಲ. ಸದರಿ ಭೂಮಿ ಅರಣ್ಯೇತರ ಉದ್ದೇಶಕ್ಕೆ ಡಿನೋಟಿಫೈ ಕೂಡ ಆಗಿರುವುದಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಶರಾವತಿ ಸಂತ್ರಸ್ತರಿಗೆ ಅರಣ್ಯ ಭೂಮಿ ನೀಡಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಾಗೂ ಗೋದಾವರ್ಮನ್ ಮತ್ತು ಭಾರತ ಸರ್ಕಾರದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶಗಳು ಇದನ್ನು ಸ್ಪಷ್ಟಪಡಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಎಚ್.ಎಂ.ಟಿ. ವಶದಲ್ಲಿರುವ ಮತ್ತು ಎಚ್.ಎಂ.ಟಿ. ವಿವಿಧ ಸಂಸ್ಥೆ, ಇಲಾಖೆ, ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿರುವ ಭೂಮಿ ಅರಣ್ಯವೇ ಆಗಿದೆ. ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯ Once a Forest is Always a Forest – Environment is more important than civil rights ಎಂದು ಅಭಿಪ್ರಾಯಪಟ್ಟಿದೆ... ಮಿಗಿಲಾಗಿ ಸದರಿ ಜಮೀನಿನ ಪೈಕಿ ಎಚ್.ಎಂ.ಟಿ. ಮಾರಾಟ ಮಾಡಿರುವ 201 ಎಕರೆಗೆ ಸಂಬಂಧಿಸಿದಂತೆ 64ಎ ಪ್ರಕ್ರಿಯೆಯೂ ಆಗಿದ್ದು, ಆ ಆದೇಶದ ವಿರುದ್ಧ ಎಚ್.ಎಂ.ಟಿ. ಈವರೆಗೆ ಮೇಲ್ಮನವಿಯನ್ನೂ ಸಲ್ಲಿಸಿರುವುದಿಲ್ಲ. ಈ ನಿಟ್ಟಿನಲ್ಲಿ ಎಚ್.ಎಂ.ಟಿ. ವಶದಲ್ಲಿರುವ ಭೂಮಿ, ಮಾರಾಟ ಮಾಡಿರುವ ಭೂಮಿ ಇಂದಿಗೂ ಅರಣ್ಯವೇ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟಿರುತ್ತಾರೆ. ಮಧ್ಯಂತರ ಅರ್ಜಿ (IA) ಹಿಂಪಡೆಯಲೂ ಸೂಚನೆ: ಸದರಿ ಭೂಮಿಯನ್ನು ಎಚ್.ಎಂ.ಟಿ. ಸಂಸ್ಥೆ ಸರ್ಕಾರಿ ಇಲಾಖೆ/ಸಂಸ್ಥೆಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿರುವುದು ಅಕ್ರಮವಾಗಿರುತ್ತದೆ. ಈ ಸಂಬಂಧ ಸಚಿವ ಸಂಪುಟದ ಗಮನಕ್ಕೂ ತಾರದೆ 2020ರಲ್ಲಿ ಡಿನೋಟಿಫೈ ಮಾಡಲು ಅನುಮತಿ ಕೋರಿ ಸುಪ್ರೀಂಕೋರ್ಟ್‌ಗೆ ಅರಣ್ಯ ಇಲಾಖೆ ಐ.ಎ. ಸಲ್ಲಿಸಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಐ.ಎ.ಯನ್ನು ಹಿಂಪಡೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಮತ್ತು ತನಿಖೆ ನಡೆಸುವಂತೆ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಈಶ್ವರ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಹಾಕುಂಭ ಮೇಳದಲ್ಲಿ ಮತ್ತೆ ಅಗ್ನಿ ಅವಘಡ - ತಪ್ಪಿದ ಭಾರೀ ಅನಾಹುತದೆಹಲಿ-ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ - ಅಧಿಕಾರಿಗಳಿಂದ ಪರಿಶೀಲನೆವೀರೇಂದ್ರ ಹೆಗ್ಗಡೆ ಸಹೋದರನ 7.59 ಎಕರೆ ಭೂ ಮಂಜೂರಾತಿ ರದ್ದುಗೊಳಿಸಿದ ಕೋರ್ಟ್ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ - ಮುಡಾ ಕೇಸ್‌ ಸಿಬಿಐಗೆ ವಹಿಸಲು ಹೈಕೋರ್ಟ್‌ ನಕಾರವೈದ್ಯನಿಗೆ ಸಾವು ತಂದ ಗೂಗಲ್‌ ಮ್ಯಾಪ್‌'ಕಾಂಗ್ರೆಸ್‌ನಿಂದ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಸಾಧ್ಯವಿಲ್ಲ' : ಪ್ರಧಾನಿ ಮೋದಿಇಂದು ಹಾಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್‌ವೈ ಭವಿಷ್ಯ ನಿರ್ಧಾರ..!!ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡ ಅಂಕುರ್ಜೀತ್ ಸಿಂಗ್ ಐಎಎಸ್ ಹಾದಿಯ ಯಶಸ್ಸಿನ ಕಥನಶೀತ, ಕೆಮ್ಮಿಗೆ ವೀಳ್ಯದೆಲೆ ಮನೆಮದ್ದು | ವೀಳ್ಯದೆಲೆಯ ಆರೋಗ್ಯ ಗುಣಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ