ಮಂಡ್ಯ : ಕಳೆದ ಮೂರು ವರ್ಷಗಳಿಂದ ಮದ್ದೂರು ಕ್ಷೇತ್ರದಲ್ಲಿ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇನ್ನುಳಿದ ಅವಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಶಕ್ತಿ ಮೀರಿ ಶ್ರಮಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ವಿಶ್ವಾಸ ವ್ಯಕ್ತಪಡಿಸಿದರು.
ಮದ್ದೂರು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಬುಧವಾರ 3 ಕೋಟಿ ರೂ ವೆಚ್ಚದಲ್ಲಿ ಸರ್ಕ್ಯೂಟ್ ಹೌಸ್ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನೂತನ ಪ್ರವಾಸಿ ಮಂದಿರವನ್ನು 10 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಮೊದಲ ಹಂತವಾಗಿ ಸರ್ಕಾರದಿಂದ 3 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇನ್ನುಳಿದ ಅಭಿವೃದ್ಧಿ ಕಾಮಗಾರಿಗೆ 7 ಕೋಟಿ ರೂ.ಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದರು.
ಮದ್ದೂರು ವಿವಿಧ ನಗರಗಳಿಗೆ ಹಾದು ಹೋಗುವ ಪ್ರಮುಖ ನಗರವಾಗಿದೆ. ಹೀಗಾಗಿ ಪ್ರವಾಸಿ ಮಂದಿರಕ್ಕೆ ರಾಜ್ಯಪಾಲರು, ಮುಖ್ಯಮಂತ್ರಿ, ಮಂತ್ರಿಗಳು ಹಲವು ಗಣ್ಯರು ವಿವಿಧ ನಗರಗಳಿಗೆ ಪ್ರಯಾಣಿಸುವಾಗ ಮದ್ದೂರಿನ ಮೂಲಕವೇ ಸಂಚರಿಸುತ್ತಾರೆ. ಕೆಲವೊಮ್ಮೆ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ತೆರಳುತ್ತಾರೆ ಹೀಗಾಗಿ ಗಣ್ಯರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಮದ್ದೂರು ನಗರವನ್ನು ಸ್ವಚ್ಛ, ಸುಂದರ ತಾಣವನ್ನಾಗಿ ರೂಪಿಸುವ ಉದ್ದೇಶದಿಂದ ಈಗಾಗಲೇ ತಾಪಂ ಕಚೇರಿಯ ನೂತನ ಕಟ್ಟಡ, ತಾಪಂ ವಾಣಿಜ್ಯ ಮಳಿಗೆಗಳು, ನೀರಾವರಿ ಇಲಾಖೆಯ ಕಚೇರಿ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಕೋಟ್ಯಂತರ ರೂ.ವೆಚ್ಚದಲ್ಲಿ ಭೂಮಿ ಪೂಜೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ನೂತನ ನ್ಯಾಯಾಲಯದ ಕಟ್ಟಡ, ನಗರಸಭೆ ಕಟ್ಟಡ, ತಾಲೂಕು ಕಚೇರಿ ಕಟ್ಟಡ ಸೇರಿದಂತೆ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಲಾಗಿದೆ ಎಂದರು.
ನೂತನ ತಾಲೂಕು ಕಚೇರಿ ನಿರ್ಮಾಣಕ್ಕೆ ಸೂಕ್ತ ಸ್ಥಳ ಗುರುತಿಸಲಾಗುತ್ತಿದೆ. ಜಾಗ ದೊರೆತ ತಕ್ಷಣ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ತಾಲೂಕು ಆಡಳಿತ ಭವನ ನಿರ್ಮಿಸಲಾಗುವುದು. ಹಳೆಯ ತಾಲೂಕು ಕಚೇರಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡಲಾಗುವುದು. ಎಲ್ಲಾ ಸರ್ಕಾರಿ ಕಚೇರಿಗಳಿಗೂ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು ಎಂದರು.
ಇನ್ನು ಮದ್ದೂರು ನಗರದಲ್ಲಿ ಪೋಲೀಸ್ ಉಪ ವಿಭಾಗದ ಕಛೇರಿ ತೆರೆಯುವ ಸಂಬಂಧ ಕಳೆದ ವರ್ಷವೇ ಅಂತಿಮ ಹಂತದಲ್ಲಿತ್ತು. ಆದರೆ, ಕೆಲವು ಕಾರಣಾಂತರಗಳಿಂದ ತಡೆಯಾಯಿತು. ಹೀಗಾಗಿ ದಸರಾ ಹಬ್ಬ ಮುಗಿದ ಬಳಿಕ ಗೃಹ ಸಚಿವರ ಜೊತೆ ಚರ್ಚಿಸಿ ಶೀಘ್ರವೇ ಡಿವೈಎಸ್ಪಿ ಕಛೇರಿ ತೆರೆಯಲು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟದ ಕುರಿತು ಮಾತನಾಡಿದ ಅವರು, ರೈತರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಅವರು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದು, ಪ್ರಧಾನಿಗಳ ಭೇಟಿಗೆ ನಿಯೋಗ ತೆರಳಿ ಶೀಘ್ರವಾಗಿ ರೈತರ ಬೇಡಿಕೆಗಳು ಈಡೇರಲಿವೆ.
ತಾಲೂಕಿನ ಕೊನೆ ಭಾಗದ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದೇ ವೇಳೆ ಕಸಾಪ ತಾಲೂಕು ಅಧ್ಯಕ್ಷ ಸುನಿಲ್ ಕುಮಾರ್, ಎಂ.ಎಚ್.ಚನ್ನೇಗೌಡ ವಿದ್ಯಾನಿಲಯದ ಕಾರ್ಯದರ್ಶಿ ಅಪೂರ್ವಚಂದ್ರು, ನಗರಸಭೆ ಮಾಜಿ ಸದಸ್ಯರಾದ ವನಿತಾ ಸಿದ್ದರಾಜು, ಸಚ್ಚಿನ್, ಮನ್ಸೂರ್ ಖಾನ್, ಕೆಡಿಪಿ ಸದಸ್ಯ ಅರುವನಹಳ್ಳಿ ಸಿದ್ದರಾಜು, ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ರಾಜೇಂದ್ರ, ಮುಖಂಡರಾದ ಅರುಣ್, ರವಿ, ಆರಿಫ್, ಶಿವಪುರ ಕೀರ್ತಿ, ಕುಶ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ