ನವದೆಹಲಿ: ಸರ್ಕಾರದ ಮುಖ್ಯಸ್ಥರಾಗಿ ನಿರಂತರ 25 ವರ್ಷಗಳ ಸುದೀರ್ಘ ಹಾಗೂ ಯಶಸ್ವಿ ನಾಯಕತ್ವವನ್ನು ಪೂರೈಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವ ಐತಿಹಾಸಿಕ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಮಂಗಳವಾರ ಅಂಗೀಕರಿಸಿದೆ.
ಪ್ರಧಾನಿ ಮೋದಿಯವರ ಈ ಸುದೀರ್ಘ ಅಧಿಕಾರಾವಧಿಯು ಕೇವಲ ಆಡಳಿತಾತ್ಮಕ ಮೈಲಿಗಲ್ಲಷ್ಟೇ ಅಲ್ಲದೆ, 'ರಾಷ್ಟ್ರ ಮೊದಲು' ಮತ್ತು 'ಪ್ರಜೆಗಳೇ ಮೊದಲು' ಎಂಬ ತತ್ವದ ಮೇಲೆ ಸಾಗಿದ ಅಪರೂಪದ ಜನಸೇವೆಯ ಪಯಣ ಎಂದು ಸಂಪುಟ ಬಣ್ಣಿಸಿದೆ.
ಗುಜರಾತ್ ಮುಖ್ಯಮಂತ್ರಿಯಿಂದ ರಾಷ್ಟ್ರ ನಾಯಕತ್ವದವರೆಗೆ
ಅಕ್ಟೋಬರ್ 2001ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ನರೇಂದ್ರ ಮೋದಿಯವರು, ನಂತರ 2014ರಿಂದ ಸತತವಾಗಿ ದೇಶದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗುಜರಾತ್‌ನಲ್ಲಿ ಜಾರಿಗೆ ತಂದ ಜ್ಯೋತಿಗ್ರಾಮ್, ಆಡಳಿತ ಸುಧಾರಣೆಗಳಂತಹ ದೂರದೃಷ್ಟಿಯ ಯೋಜನೆಗಳು ನಂತರ ರಾಷ್ಟ್ರಮಟ್ಟದಲ್ಲಿ 'ಪ್ರಗತಿ' (PRAGATI) ಸಭೆಗಳ ರೂಪದಲ್ಲಿ ವಿಸ್ತರಣೆಗೊಂಡು ನನೆಗುದಿಗೆ ಬಿದ್ದಿದ್ದ ಹತ್ತಾರು ಮೂಲಸೌಕರ್ಯ ಯೋಜನೆಗಳಿಗೆ ಮರುಜೀವ ನೀಡಿದ ಅಂಶಗಳನ್ನು ಸಂಪುಟ ನಿರ್ಣಯದಲ್ಲಿ ವಿಶೇಷವಾಗಿ ಸ್ಮರಿಸಲಾಗಿದೆ.
ಬಡವರ ಕಲ್ಯಾಣ ಮತ್ತು ಆರ್ಥಿಕ ಸಬಲೀಕರಣ
ಕಳೆದ ಎರಡೂವರೆ ದಶಕಗಳ ಆಡಳಿತದಲ್ಲಿ ಜನಸಾಮಾನ್ಯರ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದು ನಿರ್ಣಯ ಉಲ್ಲೇಖಿಸಿದೆ. ಸುಮಾರು 60 ಕೋಟಿ ಜನ್ ಧನ್ ಖಾತೆಗಳು, 4 ಕೋಟಿಗೂ ಅಧಿಕ ಪಕ್ಕಾ ಮನೆಗಳ ನಿರ್ಮಾಣ ಹಾಗೂ 25 ಕೋಟಿ ಜನರನ್ನು ಬಡತನ ರೇಖೆಯಿಂದ ಮೇಲೆತ್ತಿರುವುದು ಆಡಳಿತದ ಪ್ರಮುಖ ಸಾಧನೆಗಳಾಗಿವೆ. ಅಲ್ಲದೆ, ಪಿಎಂ-ಕಿಸಾನ್ ಅಡಿಯಲ್ಲಿ 4 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ನೇರ ನಗದು ವರ್ಗಾವಣೆ ಹಾಗೂ ದುರ್ಬಲ ಬುಡಕಟ್ಟು ಸಮುದಾಯಗಳಿಗಾಗಿ ಜಾರಿಗೆ ತಂದ ಪಿಎಂ-ಜನ್‌ಮನ್ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪಿರುವುದಕ್ಕೆ ನಿದರ್ಶನಗಳಾಗಿವೆ.
ಆತ್ಮನಿರ್ಭರ ಭಾರತ ಮತ್ತು ರಕ್ಷಣಾ ಶಕ್ತಿ
ತಂತ್ರಜ್ಞಾನ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿಸಲು ಕೈಗೊಂಡ ಕ್ರಮಗಳಿಂದಾಗಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಗಣನೀಯವಾಗಿ ಹೆಚ್ಚಿದೆ. ರಕ್ಷಣಾ ಕ್ಷೇತ್ರದಲ್ಲಿ ದೇಶೀಯ ಉತ್ಪಾದನೆಗೆ ಒತ್ತು ನೀಡಿರುವುದರ ಜತೆಗೆ, 2016ರ ಸರ್ಜಿಕಲ್ ಸ್ಟ್ರೈಕ್, 2019ರ ಬಾಲಾಕೋಟ್ ಏರ್‌ಸ್ಟ್ರೈಕ್, ಆರ್ಟಿಕಲ್ 370 ರದ್ದತಿ, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಹುದ್ದೆಯ ಸೃಷ್ಟಿ ಹಾಗೂ 'ಒನ್ ರ್ಯಾಂಕ್ ಒನ್ ಪೆನ್ಷನ್' ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದು ರಾಷ್ಟ್ರೀಯ ಭದ್ರತೆಯಲ್ಲಿ ಹೊಸ ಇತಿಹಾಸ ಬರೆಯಲಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಜಾಗತಿಕ ವೇದಿಕೆಯಲ್ಲಿ ಭಾರತದ ಕೀರ್ತಿ
ಕೋವಿಡ್ ಸಾಂಕ್ರಾಮಿಕದ ಸವಾಲು, ಪಶ್ಚಿಮ ಏಷ್ಯಾದ ಸಂಘರ್ಷದಂತಹ ಬಿಕ್ಕಟ್ಟಿನ ಸಮಯದಲ್ಲೂ ದೇಶದ ಹಿತಾಸಕ್ತಿಯನ್ನು ಕಾಯ್ದುಕೊಂಡ ಪ್ರಧಾನಿ, 'ವ್ಯಾಕ್ಸಿನ್ ಮೈತ್ರಿ' ಮೂಲಕ ಜಾಗತಿಕ ಮಟ್ಟದಲ್ಲೂ ಮಾನವೀಯತೆ ಮೆರೆದಿದ್ದಾರೆ. ಜಿ20 ಶೃಂಗಸಭೆಯ ಯಶಸ್ಸು, ಗ್ಲೋಬಲ್ ಸೌತ್ ಪರ ಧ್ವನಿ ಎತ್ತಿರುವುದು ಹಾಗೂ ಆಫ್ರಿಕನ್ ಒಕ್ಕೂಟವನ್ನು ಜಿ20ಗೆ ಸೇರ್ಪಡೆಗೊಳಿಸಿದ್ದು ಭಾರತದ ರಾಜತಾಂತ್ರಿಕ ವಿಜಯಗಳಾಗಿವೆ. ಮೋದಿಯವರ ನಾಯಕತ್ವವನ್ನು ಗುರುತಿಸಿ ಇದುವರೆಗೆ ವಿಶ್ವದ 36ಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮ ಅತ್ಯುನ್ನತ ನಾಗರಿಕ ಗೌರವಗಳನ್ನು ನೀಡಿ ಪುರಸ್ಕರಿಸಿವೆ.
ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿಯುತ್ತಾ, 2047ರ ವೇಳೆಗೆ ಭಾರತವನ್ನು ಸಂಪೂರ್ಣ ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ವನ್ನಾಗಿಸುವ ಸಂಕಲ್ಪದೊಂದಿಗೆ ಸಂಪುಟ ಸಭೆಯು ಪ್ರಧಾನಿ ಮೋದಿಯವರಿಗೆ ಶುಭ ಹಾರೈಸಿ ನಿರ್ಣಯವನ್ನು ಮುಕ್ತಾಯಗೊಳಿಸಿದೆ.