ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಖುಜ್ದಾರ್ ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ರಿಕ್ಟರ್ ಮಾಪಕದಲ್ಲಿ 5.9 ರಷ್ಟು ತೀವ್ರತೆಯ ಭೀಕರ ಭೂಕಂಪ ಸಂಭವಿಸಿದ್ದು, ಕನಿಷ್ಠ ಒಬ್ಬರು ಮೃತಪಟ್ಟಿದ್ದಾರೆ ಮತ್ತು ಹಲವು ಸಾಂಪ್ರದಾಯಿಕ ಮಣ್ಣಿನ ಮನೆಗಳು ತೀವ್ರವಾಗಿ ಹಾನಿಗೊಳಗಾಗಿವೆ. ಶನಿವಾರ ಬೆಳಿಗ್ಗೆ 10:07 ರ ಸುಮಾರಿಗೆ ಭೂಕಂಪನದ ಆಘಾತಗಳು ಅನುಭವಕ್ಕೆ ಬಂದಿದ್ದು, ಭಯಭೀತರಾದ ಸಾರ್ವಜನಿಕರು ತಮ್ಮ ಮನೆಗಳಿಂದ ಹೊರಬಂದು ಬಯಲು ಪ್ರದೇಶಗಳಲ್ಲಿ ಆಶ್ರಯ ಪಡೆದರು. ಇಸ್ಲಾಮಾಬಾದ್ನ ರಾಷ್ಟ್ರೀಯ ಭೂಕಂಪನ ಉಸ್ತುವಾರಿ ಕೇಂದ್ರದ ಪ್ರಕಾರ, ಭೂಕಂಪನದ ಕೇಂದ್ರಬಿಂದುವು ಖುಜ್ದಾರ್ನ ವಾಯುವ್ಯಕ್ಕೆ 48 ಕಿಲೋಮೀಟರ್ ದೂರದಲ್ಲಿ ಹಾಗೂ ಭೂಮಿಯ ಅಡಿಯಲ್ಲಿ 25 ಕಿಲೋಮೀಟರ್ ಆಳದಲ್ಲಿದೆ.
ನಾಲ್ ಪ್ರದೇಶದ ಅನಾರಿ ಎಂಬಲ್ಲಿ ಭೂಕಂಪನದ ರಭಸಕ್ಕೆ ಹತ್ತಿರದ ಬೆಟ್ಟದಿಂದ ಬೃಹತ್ ಬಂಡೆಯೊಂದು ಕುಸಿದು ಬಿದ್ದು ವಾಧ್ ನಿವಾಸಿ ಅಬ್ದುಲ್ ರಹೀಮ್ ಎಂಬುವವರು ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕಿಸ್ತಾನವು ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್ಗಳು ಸಂಧಿಸುವ ಭೌಗೋಳಿಕ ಗಡಿರೇಖೆಯಲ್ಲಿದ್ದು, ಜಗತ್ತಿನ ಅತ್ಯಂತ ಭೂಕಂಪನ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದೆ. ಇದಕ್ಕೂ ಮೊದಲು ಜೂನ್ 27 ರಂದು ದೇಶದಲ್ಲಿ 5.4 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು ಹಾಗೂ ಏಪ್ರಿಲ್ನಲ್ಲಿ ಹಿಂದೂ ಕುಶ್ ಪ್ರದೇಶದಲ್ಲಿ ಸಂಭವಿಸಿದ 5.5 ತೀವ್ರತೆಯ ಭೂಕಂಪದಿಂದಾಗಿ ಇಸ್ಲಾಮಾಬಾದ್, ಪೇಷಾವರ ಸೇರಿದಂತೆ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿತ್ತು.