LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಸ್ತವ್ಯಸ್ತ ಆರ್ಥಿಕತೆ ಮತ್ತು ಮಕ್ಕಳ ಬದುಕು

 

ಕೇವಲ ಆರು ವರ್ಷದ ಬಾಲಕಿಯಾಗಿದ್ದಾಗ ಆಕೆಯ ಪಾಲಕರು ಆಕೆಯನ್ನು ಅನಾಥಾಲಯದ ಹೊರಗೆ ಬಿಟ್ಟು ಹೋಗಿಬಿಟ್ಟರು. ಇಂದಿಗೂ ಕೂಡ ಆಕೆಯ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಆ ದಿನ ಆಕೆಯ ತಾಯಿ ಆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡು ಸ್ವಲ್ಪವೇ ಸಮಯದಲ್ಲಿ ಮರಳಿ ಬರುತ್ತೇನೆ ಎಂದು ಹೇಳಿ ಹೊರಟು ಹೋದಳು

ಮೆಡ್ಲಿನ್ ನ ಅನಾಥಾಲಯದ ಹೊರಗೆ ಒಂದು ಪುಟ್ಟ ಟೆಡ್ಡಿ ಬೇರನ್ನು ಕೈಯಲ್ಲಿ ಹಿಡಿದುಕೊಂಡು ಕೇವಲ ಎರಡು ಜೊತೆ ಬಟ್ಟೆಗಳನ್ನು ಹೊಂದಿರುವ ಬ್ಯಾಗನ್ನು ಬೆನ್ನಿಗೆ ಹಾಕಿಕೊಂಡ ಆ ಪುಟ್ಟ ಬಾಲಕಿ ತನ್ನ ಪಾಲಕರ ನಿರೀಕ್ಷೆಯಲ್ಲಿ ನಿಂತೇ ಇದ್ದಳು.

ದಾರಿಯಲ್ಲಿ ಬರುವ ಹೋಗುವ ಎಲ್ಲ ಜನರು ಆಕೆಯನ್ನು ನೋಡಿ ಸುಮ್ಮನೆ ಹೊರಟು ಹೋಗುತ್ತಿದ್ದರು... ಬಹುಶಹ ಆ ಅನಾಥಾಶ್ರಮದ ಮುಂದೆ ಹೀಗೆ ಮಕ್ಕಳನ್ನು ಬಿಟ್ಟು ಹೋಗುವುದನ್ನು ಸದಾ ನೋಡುತ್ತಿದ್ದ ಜನರಿಗೆ ಇದೇನು ಹೊಸದಲ್ಲ ಎಂಬ ಭಾವ. ಅಂತಿಮವಾಗಿ ಅನಾಥಾಶ್ರಮದ ಸಿಬ್ಬಂದಿ ಆ ಮಗುವನ್ನು ಕರೆದುಕೊಂಡು ಬಂದು ತಮ್ಮ ಆಶ್ರಮದಲ್ಲಿ ಇಟ್ಟುಕೊಂಡರು.

ದಿನಗಳು ವಾರವಾಗಿ, ವಾರಗಳು ತಿಂಗಳಾಗಿ ತಿಂಗಳುಗಳು ವರ್ಷಗಳಾಗಿ ಹಲವು ವರ್ಷಗಳು ಕಳೆದೇ ಹೋಯಿತು .... ಆದರೂ ಆಕೆ ಅವರ ನಿರೀಕ್ಷೆಯಲ್ಲಿಯೇ ಇದ್ದಳು.

ಅನಾಥಾಶ್ರಮದ ದೊಡ್ಡ ಕೋಣೆಯಲ್ಲಿ ಆಕೆ ನಿಟ್ಟುಸಿರುಗರೆಯುತ್ತಿದ್ದಳು. ಯಾರೊಬ್ಬರೂ ಆಕೆಯನ್ನು ದತ್ತು ತೆಗೆದುಕೊಳ್ಳಲಿಲ್ಲ. ಅಲ್ಲಿಗೆ ಬರುತ್ತಿದ್ದ ಸಾಕಷ್ಟು ಜನ ಮಕ್ಕಳನ್ನು ದತ್ತು ತೆಗೆದುಕೊಂಡು ನಸುನಗುತ್ತಾ ಬಹಳಷ್ಟು ಕುಟುಂಬಗಳು ಆಶ್ರಮದಿಂದ ಹೊರಹೋಗುವುದನ್ನು ಆಕೆ ನೋಡುತ್ತಿದ್ದಳು ಹೀಗೆ ನನ್ನನ್ನು ಕೂಡ ಯಾರಾದರೂ ಬಂದು ದತ್ತು ತೆಗೆದುಕೊಳ್ಳಬಹುದು ಎಂಬ ದೂರದ ಆಸೆ ಆಕೆಯಲ್ಲಿ ಚಿಗುರುತ್ತಿತ್ತು... ಆದರೆ ಅದು ನಿರಾಸೆಯಲ್ಲಿ ಬದಲಾಗುತ್ತಿತ್ತು. ಮತ್ತೆ ಕೆಲಬಾರಿ ಆಕೆ ತನ್ನ ಪಾಲಕರು ಬಂದು ತನ್ನನ್ನು ಕರೆದೊಯ್ಯವರು ಎಂಬ ಅದ್ಭುತ ಕಲ್ಪನೆಯಲ್ಲಿ ರಾತ್ರಿ ನೆತ್ತಿಯ ಮೇಲಿನ ಸೂರನ್ನು ದಿಟ್ಟಿಸಿ ನೋಡುತ್ತಾ ಸಮಯ ಕಳೆಯುತ್ತಿದ್ದಳು.ಅಲ್ಲಿಯೂ ಆಕೆಗೆ ನಿರಾಸೆ ಕಾದಿರುತ್ತಿತ್ತು.... ಆಕೆಯ ಪಾಲಕರು ಎಂದೂ ಮರಳಿ ಬರಲಿಲ್ಲ.

ಆದರೆ ಅನಾಥಾಲಯದ ಅಡುಗೆ ಮನೆಯಲ್ಲಿ ಆಕೆಗೆ ಚೇತೋಹಾರಿಯಾದ ವಾತಾವರಣ ಇತ್ತು. ಅಲ್ಲಿ ಆಕೆಗೆ ಸ್ವತಂತ್ರತೆಯ ಅನುಭವವಾಗುತ್ತಿತ್ತು. ಬೇರೆ ಬೇರೆ ತರಹದ ವಸ್ತುಗಳನ್ನು ಕೂಡಿಸಿ ಅದರಲ್ಲೂ ಸಕ್ಕರೆ ಮತ್ತು ಕೋಕೋಗಳನ್ನು ಸೇರಿಸಿ ಸಿಹಿ ತಿಂಡಿಗಳನ್ನು ಮಾಡುವುದರಲ್ಲಿ ಆಕೆ ನಿಷ್ಣಾತಳಾದಳು. ತನ್ನ 13ರ ವಯಸ್ಸಿಗೆ ಆಕೆ ತನ್ನ ಕೈಯಾರೆ ಮಾಡಿದ ಚಾಕೊಲೇಟ್ ಬಾರ್ ಗಳನ್ನು ಪೇಪರ್ ನ ಹಾಳೆಯಲ್ಲಿ ಸುತ್ತಿ ತಯಾರು ಮಾಡಿ ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ಮಾರಲು ಆರಂಭಿಸಿದಳು. ರುಚಿಕರವಾಗಿದ್ದ ಆಕೆಯ ಚಾಕಲೇಟ್ ಬಾರ್ ಗಳನ್ನು ಜನರು ಮುಗಿಬಿದ್ದು ಖರೀದಿಸುತ್ತಿದ್ದರು. ಜನರು ಆಕೆಯನ್ನು 'ಕ್ಯಾಂಡಿ ಕಿಡ್' ಎಂದು ಕರೆಯಲಾರಂಭಿಸಿದರು. ವಿವಿಧ ರಸ್ತೆಗಳು ಸೇರುವ ಜಾಗದಲ್ಲಿ ಟ್ರಾಫಿಕ್ ಸಿಗ್ನಲ್ ನ ಬಳಿ, ಸ್ಥಳೀಯ ಸಂತೆ ಜಾತ್ರೆಗಳಲ್ಲಿ ಹೀಗೆ ಎಲ್ಲಾ ಕಡೆ ಆಕೆ ತನ್ನ ಉತ್ಪನ್ನಗಳನ್ನು ಮಾರಲಾರಂಭಿಸಿದಳು.

ಒಂದು ದಿನ ಆಕೆಯ ಚಾಕಲೇಟ್ ಅನ್ನು ಖರೀದಿಸಿದ ಓರ್ವ ವ್ಯಾಪಾರಿ ಅದನ್ನು ಅಲ್ಲಿಯೇ ತಿಂದು ಅದರ ರುಚಿ ಗೆ ಮಾರು ಹೋಗಿ ಈ ಚಾಕಲೇಟುಗಳನ್ನು ಯಾರು ಮಾಡುತ್ತಾರೆ ಎಂದು ಕೇಳಿದನು. ಅದಕ್ಕೆ ಉತ್ತರವಾಗಿ ಆಕೆ ಬಲು ಹೆಮ್ಮೆಯಿಂದ ನಾನೇ ಎಂದು ಹೇಳಿದಳು. ಕೂಡಲೇ ಆತ ಶಾಲೆಯೊಂದರ ಕಾರ್ಯಕ್ರಮಕ್ಕಾಗಿ ತನಗೆ ಬೇಕಾದ 500 ಚಾಕ್ಲೇಟ್ ಬಾರ ಗಳಿಗೆ ಬೇಡಿಕೆ ಇಟ್ಟನು. ಅದು ಆಕೆಗೆ ದೊರೆತ ಮೊಟ್ಟಮೊದಲ ಅತಿ ದೊಡ್ಡ ಮಟ್ಟದ ವ್ಯವಹಾರವಾಗಿತ್ತು.

ತನ್ನ 16ನೇ ವಯಸ್ಸಿನಲ್ಲಿ ಆಕೆ ಲಘು ಉದ್ಯೋಗ ಮಾಡಲು ರಿಜಿಸ್ಟರ್ ಆಫೀಸ್ ನಲ್ಲಿ ಅಧಿಕೃತ ಪರವಾನಗಿಯನ್ನು ಪಡೆದಳು. ತನ್ನ ಕೆಲಸಕ್ಕೆ ಬೇಕಾದ ಯಂತ್ರೋಪಕರಣಗಳ ಖರೀದಿ ಮತ್ತಿತರ ಸಾಮಾನುಗಳಲ್ಲಿ ಆಕೆ ತನ್ನ ಹಣವನ್ನು ಹೂಡಿಕೆ ಮಾಡಿದಳು. ಯಾವ ರೀತಿ ವ್ಯವಹಾರವನ್ನು ಮಾಡಬೇಕು? ವ್ಯಾಪಾರದ ಗುಟ್ಟುಗಳೇನು? ಎಂಬುದನ್ನು ಯೂಟ್ಯೂಬ್ ಮುಖಾಂತರ ಕಲಿತಳು. ತನ್ನದೇ ಆದ ಸಿಹಿ ತಿಂಡಿಗಳ ಅಂಗಡಿಯನ್ನು ಆರಂಭಿಸಿ ಅವುಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡಲು ಪ್ರಾರಂಭಿಸಿದಳು. ಈಗಾಗಲೇ ಸಿಹಿ ತಿಂಡಿಗಳ ಮಾರಾಟದಲ್ಲಿ ಹೆಸರುವಾಸಿಯಾಗಿದ್ದ ಆಕೆಯ ಅಂಗಡಿಯಲ್ಲಿ ತಯಾರಾಗುವ ಸಿಹಿ ತಿಂಡಿಗಳು ಪ್ರವಾಹದೋಪಾದಿಯಲ್ಲಿ ಮಾರಾಟವಾಗಲಾರಂಭಿಸಿದವು. ಆಕೆಯ ಬಳಿ ಸಾಕಷ್ಟು ಹಣ ಸಂಗ್ರಹವಾಗತೊಡಗಿತು ಅಂತೆಯೇ ವ್ಯಾಪಾರವೂ ಕೂಡ. ಒಂದು ಸುಂದರವಾದ ಮುಂಜಾವಿನಲ್ಲಿ ಆಕೆ ತನ್ನ ತಂದೆ ತಾಯಿಗಳು ತನ್ನನ್ನು ಯಾವ ಅನಾಥಾಶ್ರಮದ ಮುಂದೆ ಕೈಬಿಟ್ಟು ಹೊರಟು ಹೋಗಿದ್ದರು. ಅದೇ ಅನಾಥಾಶ್ರಮದ ಬಳಿಯಲ್ಲಿ ತಾನು ಖರೀದಿಸಿದ ಹೊಸ ಮನೆಯೊಂದರ ಕೀಲಿಯನ್ನು ಹಿಡಿದು ಹೆಮ್ಮೆಯಿಂದ ಬೀಗುತ್ತಾ ಹೊರಟಿದ್ದೆ.

ಮುಂದೆ ಆಕೆಗೆ ತನ್ನ ಪಾಲಕರು ದೊರೆತರೂ ಅವರಿಬ್ಬರೂ ಪರಸ್ಪರ ಬೇರೆಯಾಗಿ ತಂತಮ್ಮ ಜೀವನದ ಹೋರಾಟಗಳಲ್ಲಿ ವ್ಯಸ್ತರಾಗಿದ್ದರು. ಅವರ ಜೀವನದ ಕುರಿತು ಆಕೆ ನಿರ್ಣಯಾತ್ಮಕವಾಗಿ ಮಾತನಾಡಲಿಲ್ಲ.... ಹಾಗೆ ಪುಟ್ಟ ಬಾಲಕಿಯಾದ ಆಕೆಯನ್ನು ಕೈ ಬಿಟ್ಟು ಹೊರಟು ಹೋದ ಕುರಿತು ಏನನ್ನೂ ಪ್ರಶ್ನಿಸಲಿಲ್ಲ.

ಆಕೆಯ ಕೈಯಲ್ಲಿದ್ದ ಕೀಲಿಯನ್ನು ಅವರಿಬ್ಬರ ಕೈಗೊಪ್ಪಿಸಿದ ಆಕೆ "ನನ್ನನ್ನು ಅನಾಥಾಶ್ರಮದ ಬಳಿ ಬಿಟ್ಟು ಹೋದ ನಿಮ್ಮಿಬ್ಬರಿಗೂ ತುಂಬು ಹೃದಯದ ಧನ್ಯವಾದಗಳು.... ಇದೀಗ ನನ್ನ ಬದುಕಿನಲ್ಲಿ ನಾನೇನಾಗಿದ್ದೇನೋ ಅದೆಲ್ಲಕ್ಕೂ ಕಾರಣ ನಿಮ್ಮ ಕೈ ಬಿಡುವಿಕೆ" ಎಂದು ಹೇಳಿ ಅತ್ಯಂತ ನಿರಾಳವಾದ ಮನಸ್ಸಿನಿಂದ ಅಲ್ಲಿಂದ ಹೊರಟು ಹೋದಳು.

ನಮ್ಮನ್ನು ಪ್ರೀತಿಸುವ ನಮಗೆ ಬದುಕು ಮತ್ತು ಭದ್ರತೆಯನ್ನು ನೀಡುವ ಕುಟುಂಬವಿಲ್ಲದೆ ಬೆಳೆಯುವ ನೋವು ಆಕೆಗೆ ಗೊತ್ತು. ಬಹುಶಃ ಆಕೆಯ ಬದುಕಿನ ಅತ್ಯಂತ ದುರ್ಬರ ಸಂಗತಿಯಿಂದ ಆಕೆ ಕಲಿತ ಪಾಠ ಅದಕ್ಕಿಂತ ದೊಡ್ಡದು ಬದುಕು ನಿನಗೆ ಕಹಿಯನ್ನು ಉಣಿಸಿದರೂ ನೀನು ನಿನ್ನ ಹಾದಿಯನ್ನು ಸಿಹಿಯಾಗಿಸಿಕೊಳ್ಳಬಹುದು ಎಂದು.

ಅತ್ಯಂತ ಕಷ್ಟವಾದ ಸಂಗತಿ ಎಂದರೆ ಒಂಟಿಯಾಗಿರುವುದಲ್ಲ.. ಕ್ಷಮಿಸುವ ಕಲೆಯನ್ನು ಕಲಿಯುವುದು. ಕೆಲವೊಂದು ಬಾರಿ ಜೀವನ ನಮ್ಮನ್ನು ಅತ್ಯಂತ ಕಠಿಣವಾಗಿ ನಡೆಸಿಕೊಳ್ಳುತ್ತದೆ, ಅಂತಹ ಸಮಯದಲ್ಲಿ ತಾಳ್ಮೆಯಿಂದ ಹಲ್ಲು ಕಚ್ಚಿ ಹಿಡಿದು ಬದುಕನ್ನು ನಡೆಸಬೇಕು. ಅದಕ್ಕೂ ಹೆಚ್ಚಾಗಿ ಯಾರು ಬದುಕಿನಲ್ಲಿ ಕ್ಷಮಿಸಲು ಕಲಿಯುವರೋ ಅವರೇ ತಮ್ಮ ಬದುಕಿನ ಮರು ನಿರ್ಮಾಣವನ್ನು ಮಾಡಿಕೊಳ್ಳಬಲ್ಲರು.

ಯಾವುದೇ ಯಶಸ್ಸು ಏಕಾಏಕಿ ಬರುವುದಿಲ್ಲ, ಕೇವಲ ಅದೃಷ್ಟವೊಂದೇ ಯಶಸ್ಸಿಗೆ ಕಾರಣವಲ್ಲ.. ಬದುಕಿನ ಯಶಸ್ಸಿಗೆ ಶ್ರದ್ಧೆ, ನಿರಂತರ ಪರಿಶ್ರಮ ಮತ್ತು ಬದ್ಧತೆ ಬೇಕೇ ಬೇಕು.
ಎಲ್ಲರಿಗೂ ಇರುವುದು ಕೇವಲ 24 ಗಂಟೆ ಮಾತ್ರ. ಕೆಲ ಜನರು ದಿನದ 24 ಗಂಟೆಗಳಲ್ಲಿ ಕೇವಲ ಊಟ ತಿಂಡಿ , ತುಸುವೇ ಕೆಲಸ ಮತ್ತು ಬಹಳಷ್ಟು ವಿಶ್ರಾಂತಿಯನ್ನು
ಪಡೆದು ಮೋಜಿನ, ಐಷಾರಾಮಿ ಜೀವನಶೈಲಿಯನ್ನು
ತಮ್ಮದಾಗಿಸಿಕೊಳ್ಳುತ್ತಾರೆ. ಅಂತಹವರು ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ತಮ್ಮ ವರಮಾನಕ್ಕಿಂತಲೂ ಹೆಚ್ಚು ಖರ್ಚು ಮಾಡುವ ಮೂಲಕ ಸಾಲದ ಸುಳಿಗೆ ಸಿಲುಕುತ್ತಾರೆ. ನಿಯಮಿತ ಜೀವನಶೈಲಿಯನ್ನು ನಡೆಸದೆ ಇರುವ ಕಾರಣ ಸಾಲವನ್ನು ತೀರಿಸಲಾಗದೆ ಅವರಿವರ ಬಳಿ ಕಡ ಪಡೆದು ಅಲ್ಲಿಯೂ ತೀರಿಸಲಾಗದೆ ಮಾತು ತಪ್ಪಿದ ಮತಿ ಭ್ರಷ್ಟರಾಗಿ ಸಾಮಾಜಿಕವಾಗಿ ಅವಮಾನಗಳನ್ನು ಅನುಭವಿಸುತ್ತಾರೆ.

ಮತ್ತೆ ಕೆಲವರು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಎಂಬ ಮಾತಿನಂತೆ ತಮ್ಮ ಆದಾಯದ ಮಿತಿಯನ್ನು ಅರಿತು ಅವಶ್ಯಕವಾದ ಖರ್ಚು ವೆಚ್ಚಗಳನ್ನು ನಿಭಾಯಿಸಿ ಅನವಶ್ಯಕ ಖರ್ಚುಗಳನ್ನು ಸಾರಾಸಗಟಾಗಿ ನಿರಾಕರಿಸುತ್ತಾರೆ. ಹಾಗೆಂದು ಅವರಿಗೆ ಐಷಾರಾಮಿ ವಸ್ತುಗಳ ಆಸೆ ಇಲ್ಲವೆಂದಲ್ಲ... ತಮ್ಮ ಮಿತಿಯನ್ನು ಅರಿತು ಖರ್ಚು ಮಾಡುವ ಬದ್ಧತೆಯನ್ನು ಹೊಂದಿದ್ದು ತಮ್ಮ ಆಸೆಯ ಮೇಲೆ ಬುದ್ಧಿವಂತಿಕೆಯ ಲಗಾಮನ್ನು ಅವರು ಹಾಕುತ್ತಾರೆ. ಅವಶ್ಯಕತೆ ಮೀರಿದ ಸಾಲದ ಬದುಕನ್ನು ತಿರಸ್ಕರಿಸುವ ಅವರು ಆರ್ಥಿಕ ಶಿಸ್ತನ್ನು ಕಾಯ್ದುಕೊಳ್ಳುತ್ತಾರೆ.

ಪಾಲಕರ ಅಶಿಸ್ತಿನ ಆರ್ಥಿಕ ಜೀವನ ಮಕ್ಕಳ ಬದುಕಿನ ಮೇಲೆ ಬೀರುವ ಪರಿಣಾಮ ಹೇಗೆ ಇರುತ್ತದೆ ಎಂಬುದನ್ನು ಯಾರು ಬಲ್ಲರು? ನಮ್ಮ ಕಥೆಯ ನಾಯಕಿ ತನ್ನ ಬದುಕನ್ನು ಸಕಾರಾತ್ಮಕವಾಗಿ ಕಟ್ಟಿಕೊಂಡ ಪರಿಣಾಮವಾಗಿ ಯಶಸ್ವಿಯಾದಳು... ಆದರೆ ಪಾಲಕರು ಬಿಟ್ಟು ಹೋದ ಆಘಾತವನ್ನು ತಡೆಯದೆ ಮಾನಸಿಕವಾಗಿ ಕಂದಿ ಹೋಗಿದ್ದರೆ? ಎಂಬ ಭಾವ ಮನಸ್ಸಿನಲ್ಲಿ ಸುಳಿದಾಗ ಎದೆಯಲ್ಲಿ ನಡುಕ ಹುಟ್ಟುತ್ತದೆಯಲ್ಲವೇ??

ಆದ್ದರಿಂದ ಸ್ನೇಹಿತರೆ, ನಮ್ಮ ಪಾಲಕರು ನಮ್ಮ ಕುರಿತು ಅಭಿಮಾನವನ್ನು ಹೊಂದಲು ಸಂಗಾತಿ ನಮ್ಮಲ್ಲಿ ಭರವಸೆ ಹೊಂದಿರಲು ಸ್ನೇಹಿತರ ವಿಶ್ವಾಸವನ್ನು ಹೊಂದಲು ಮತ್ತು ಮುಖ್ಯವಾಗಿ ನಮ್ಮ ಮಕ್ಕಳು ತೊಂದರೆ ಪಡದೆ ಇರಲು ನಾವು ಆರ್ಥಿಕ ಶಿಸ್ತನ್ನು ನಮ್ಮದಾಗಿಸಿಕೊಳ್ಳೋಣ.ಅಗೋಚರವಾಗಿ ನಮ್ಮ
ಬದುಕನ್ನು ಹೃದ್ಗತ ಮಾಡಿಕೊಳ್ಳುವ ಮಕ್ಕಳ ಭವಿಷ್ಯದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಒಳ್ಳೆಯ ಆರ್ಥಿಕ ಶಿಸ್ತನ್ನು ಪಾಲಿಸೋಣ... ಏನಂತೀರಾ?

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೀಪೇಡ್ ಮರಣಬಳ್ಳಾರಿ: ವಸತಿ ನಿಲಯಗಳ ನೋಂದಣಿಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಆದೇಶಕೈಮಗ್ಗ ನೇಕಾರರಿಗೆ ರಾಜ್ಯ ಮಟ್ಟದ ಪ್ರಶಸ್ತಿ: ಅರ್ಜಿ ಆಹ್ವಾನಕೈಮಗ್ಗ ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಬಳ್ಳಾರಿ: ಮೇ ಮತ್ತು ಜೂನ್ ತಿಂಗಳ ಪಡಿತರ ಹಂಚಿಕೆಬಳ್ಳಾರಿ: ಭೂ ರಹಿತ ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಜಮೀನು ಖರೀದಿ - ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನಕನಕಗಿರಿ ಉತ್ಸವದಲ್ಲಿ ಸಾರ್ವಜನಿಕರಿಗಾಗಿ ವೈವಿದ್ಯಮಯ ಕಾರ್ಯಕ್ರಮಗಳು: ಡಾ.ಸುರೇಶ ಬಿ ಇಟ್ನಾಳಅಂಜನಾದ್ರಿ ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನದ ಆಭರಣದಲ್ಲಿ ತಾಮ್ರ ಪತ್ತೆ2.30 ಕೋಟಿ ಮೌಲ್ಯದ ಕಾಣಿಕೆಯಲ್ಲಿ ಅನುಮಾನ; ಮೌಲ್ಯಮಾಪನ ವೇಳೆ ಬಹಿರಂಗಸುಕ್ಷೇತ್ರ ಹುಲಿಗಿಯಲ್ಲಿ ಹಬ್ಬದ ಸಡಗರ * ಭಕ್ತಗಣದಿಂದ ಉದೋ ಉದೋ ಘೋಷ *ವಿಜ್ರಂಭಣೆಯಿಂದ ಜರುಗಿದ ಲೋಕಮಾತೆ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ*ಅಂಜನಾದ್ರಿಗೆ ಹೈದ್ರಾಬಾದ್ ದಾನಿ ದೇಣಿಗೆ ನೀಡಿದ ಲೋಹಗಳ ಬಿಲ್, ದಾಖಲೆಗಳನ್ನು ಪುನಃ ಪರಿಶೀಲಿಸಲಾಗುವುದು: ಜಿಲ್ಲಾಧಿಕಾರಿಗಳು