ಜಿ ಮಾರ್ಟ್ ಎದುರು ಮೂತ್ರ ವಿಸರ್ಜನೆಯಿಂದ ವ್ಯಾಪಾರಸ್ಥರು–ಸಂಚಾರಿಗಳಿಗೆ ಸಂಕಷ್ಟ
ಅಥಣಿ (ಬೆಳಗಾವಿ): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬೆನ್ನಿಪೇಟೆ ಶಿವಣಗಿ ಕಾಂಪ್ಲೆಕ್ಸ್ ಹಿಂಭಾಗ, ಜಿ ಮಾರ್ಟ್ ಎದುರು ಸಾರ್ವಜನಿಕ ಮೂತ್ರ ವಿಸರ್ಜನೆ ನಡೆಯುತ್ತಿರುವುದರಿಂದ ವ್ಯಾಪಾರಸ್ಥರು ಹಾಗೂ ಸಂಚರಿಸುವ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಇಲ್ಲಿ ನಿರ್ಮಿಸಲಾಗುತ್ತಿದ್ದ ಸಾರ್ವಜನಿಕ ಶೌಚಾಲಯ ಅರ್ಧಕ್ಕೆ ನಿಂತಿರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.
ಸ್ಥಳದಲ್ಲಿ ಶೌಚಾಲಯ ಹಾಗೂ ಮೂತ್ರ ವಿಸರ್ಜನೆ ವ್ಯವಸ್ಥೆ ನಿರ್ಮಿಸುವ ಉದ್ದೇಶದಿಂದ ಕಾಮಗಾರಿ ಆರಂಭಿಸಿದ್ದರೂ, ಅದು ಮಧ್ಯದಲ್ಲೇ ಸ್ಥಗಿತಗೊಂಡಿದೆ. ಪರಿಣಾಮ ಸಾರ್ವಜನಿಕರು ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದ್ದು, ಪೂರಾ ಪ್ರದೇಶ ಗಲೀಜಾಗಿ ದುರ್ವಾಸನೆಯಿಂದ ಗಬ್ಬೆದ್ದು ನಾರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ದೃಶ್ಯಾವಳಿಗಳಲ್ಲಿ ನೋಡಿದರೆ ಶೌಚಾಲಯದ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಹಾಗೂ ಸುತ್ತಮುತ್ತಲಿನ ಪ್ರದೇಶ ಸಂಪೂರ್ಣ ಅಶುಚಿಯಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ದುಸ್ಥಿತಿಯಿಂದ ವ್ಯಾಪಾರಸ್ಥರು, ಮಹಿಳೆಯರು ಹಾಗೂ ಪಾದಚಾರಿಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಪ್ರದೇಶದಲ್ಲಿ ಮಲೇರಿಯಾ, ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ವಾಸನೆಯಿಂದ ಬೇಸತ್ತಿರುವ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಆರೋಗ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹಲವಾರು ಬಾರಿ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿದರೂ, ಕಣ್ಣು ಕಾಣದಂತೆ ಕುರುಡನಂತೆ ವರ್ತಿಸುತ್ತಿರುವ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಕಾಗದದಲ್ಲೇ ಉಳಿದಿದೆಯೇ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಪುರಸಭೆ, ತಾಲೂಕ ಆಡಳಿತ, ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಈ ಸಮಸ್ಯೆಯತ್ತ ಗಂಭೀರವಾಗಿ ಗಮನಹರಿಸಿ ತಕ್ಷಣ ಶೌಚಾಲಯ ಕಾಮಗಾರಿ ಪೂರ್ಣಗೊಳಿಸಿ, ಸುಸಜ್ಜಿತ ಮೂತ್ರ ವಿಸರ್ಜನೆ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಂಬಂಧಪಟ್ಟ ಇಲಾಖೆಯವರು, ಮಾನ್ಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಬಗೆಹರಿಸುವರೇ?
ಅಥವಾ ಈ ದುಸ್ಥಿತಿ ಯಥಾಸ್ಥಿತಿಯಲ್ಲೇ ಮುಂದುವರಿಯುವದೇ?
ಇದು ಈಗ ಅಥಣಿ ಜನತೆ ಕೇಳುತ್ತಿರುವ ಪ್ರಮುಖ ಪ್ರಶ್ನೆಯಾಗಿದೆ.
– ವರದಿ: ಮಹೇಶ್ ಶರ್ಮಾ