Press ID & Credential Portal
Apply / Verify  ➔
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಸಂಬಂಧಗಳ ನಡುವೆ ಅನಾಥನಾದ ಮನುಷ್ಯ

ಚಂದ್ರವಳ್ಳಿ ನ್ಯೂಸ್, ಮೈಸೂರು
"ಮನುಷ್ಯನ ಬದುಕಿನ ನಿಜವಾದ ಶ್ರೀಮಂತಿಕೆ ಹಣ, ಹುದ್ದೆ ಅಥವಾ ಆಸ್ತಿಯಲ್ಲ. ಪ್ರೀತಿ, ವಿಶ್ವಾಸ, ಆತ್ಮೀಯತೆ ಮತ್ತು ಜೀವಂತ ಸಂಬಂಧಗಳೇ ಅವನ ಬದುಕಿನ ನಿಜವಾದ ಸಂಪತ್ತು. ಸಂಬಂಧಗಳು ಕ್ಷೀಣಿಸಿದಾಗ ಮನುಷ್ಯ ಜನರ ನಡುವೆ ಇದ್ದರೂ ಅನಾಥನಾಗುತ್ತಾನೆ. ಇದೇ ಇಂದಿನ ಸಮಾಜ ಎದುರಿಸುತ್ತಿರುವ ಅತ್ಯಂತ ಗಂಭೀರ ಮಾನವೀಯ ಸಂಕಷ್ಟ."

ಸಬಂಧವೇ ಬದುಕಿಗೆ ಸೂರ್ಯನ ಕಿರಣ
ಆತ್ಮೀಯತೆಯೇ ಜೀವನದ ಚಿರಂತನ ಧನ
ಮನಸು ಮನಸಿಗೆ ಬೆಸೆದರೆ ಭುವಿಯೇ ಸ್ವರ್ಗ
ಪ್ರೀತಿ ಕಳೆದುಹೋದರೆ ಬದುಕೇ ದುರ್ಗಮ.

ಮನುಷ್ಯನು ಪ್ರಕೃತಿಯ ಅತ್ಯಂತ ಸಾಮಾಜಿಕ ಜೀವಿ. ಅವನು ಒಬ್ಬಂಟಿಯಾಗಿ ಬದುಕಲು ಹುಟ್ಟಿಲ್ಲ. ಹುಟ್ಟಿದ ಕ್ಷಣದಿಂದಲೇ ತಾಯಿಯ ಮಮತೆ, ತಂದೆಯ ಆಸರೆ, ಕುಟುಂಬದ ಪ್ರೀತಿ, ಸ್ನೇಹಿತರ ವಿಶ್ವಾಸ ಮತ್ತು ಸಮಾಜದ ಸಹಕಾರದ ನಡುವೆ ಅವನ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಈ ಸಂಬಂಧಗಳೇ ಬದುಕಿನ ಬೇರುಗಳು. ಬೇರು ಗಟ್ಟಿಯಾಗಿದ್ದರೆ ಮರ ಹಸಿರಾಗಿರುತ್ತದೆ. ಸಂಬಂಧಗಳು ಗಟ್ಟಿಯಾಗಿದ್ದರೆ ಬದುಕು ಸಂತೃಪ್ತಿಯಿಂದ ತುಂಬಿರುತ್ತದೆ. ಆದರೆ ಇಂದು ಇದೇ ಬೇರುಗಳು ನಿಧಾನವಾಗಿ ಒಣಗುತ್ತಿವೆ. ಇದೇ ನಮ್ಮ ಕಾಲದ ಅತ್ಯಂತ ದೊಡ್ಡ ದುರಂತ.

ಇಂದು ಮನುಷ್ಯನ ಕೈಯಲ್ಲಿ ಜಗತ್ತನ್ನು ತಲುಪುವ ತಂತ್ರಜ್ಞಾನವಿದೆ. ಆದರೆ ಪಕ್ಕದಲ್ಲಿರುವ ಮನುಷ್ಯನ ಮನಸ್ಸನ್ನು ತಲುಪುವ ಸಮಯವಿಲ್ಲ. ಮನೆಯ ಲ್ಲಿರುವ ಎಲ್ಲರೂ ಒಂದೇ ಸೂರಿನಡಿ ವಾಸಿಸುತ್ತಿದ್ದಾರೆ. ಆದರೆ ಒಬ್ಬರ ಮನಸ್ಸಿನಲ್ಲಿ ಇನ್ನೊಬ್ಬರು ವಾಸಿಸುತ್ತಿಲ್ಲ. ಈ ಮೌನ ಅಂತರವೇ ಒಂಟಿತನದ ಮೂಲ ಕಾರಣವಾಗಿದೆ.

ಆಧುನಿಕ ಜೀವನಶೈಲಿಯು ಅನುಕೂಲಗಳನ್ನು ಹೆಚ್ಚಿಸಿದೆ. ಆದರೆ ಅನುಬಂಧ ಗಳನ್ನು ಕಡಿಮೆ ಮಾಡಿದೆ. ಮನೆಗಳು ದೊಡ್ಡದಾಗಿವೆ. ಕೊಠಡಿಗಳು ಹೆಚ್ಚಾಗಿವೆ. ಬ್ಯಾಂಕ್ ಖಾತೆಗಳು ತುಂಬಿವೆ. ಆದರೆ ಹೃದಯಗಳು ಖಾಲಿಯಾಗುತ್ತಿವೆ. ಜೀವನದ ಗುಣಮಟ್ಟ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಆದರೆ ಜೀವನದ ಮೌಲ್ಯ ಕಡಿಮೆಯಾಗುತ್ತಿದೆ.

ಇಂದು ಯಶಸ್ಸಿನ ಅರ್ಥವೇ ಬದಲಾಗಿದೆ. ಹಣವಿದ್ದರೆ ಯಶಸ್ಸು. ಹುದ್ದೆಯಿದ್ದರೆ ಗೌರವ. ಅಧಿಕಾರವಿದ್ದರೆ ಪ್ರಭಾವ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಗಟ್ಟಿಯಾಗಿ ನೆಲೆಸಿದೆ. ಆದರೆ ನಿಜವಾದ ಯಶಸ್ಸು ಎಂದರೆ ಎಷ್ಟು ಜನ ನಮ್ಮನ್ನು ಗೌರವಿಸುತ್ತಾರೆ ಎಂಬುದಲ್ಲ. ಎಷ್ಟು ಜನ ನಮ್ಮನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ಎಂಬುದು.

ಗೌತಮ ಬುದ್ಧರು ಹೇಳಿದಂತೆ, "ದ್ವೇಷವನ್ನು ದ್ವೇಷದಿಂದಲ್ಲ, ಪ್ರೀತಿಯಿಂದ ಮಾತ್ರ ಗೆಲ್ಲಬಹುದು." ಈ ಸಂದೇಶ ಕೇವಲ ಧರ್ಮದ ಬೋಧನೆಯಲ್ಲ. ಅದು ಮಾನವ ಸಂಬಂಧಗಳ ಶಾಶ್ವತ ತತ್ವ. ಪ್ರೀತಿಯಿಲ್ಲದ ಸಮಾಜ ಎಷ್ಟೇ ಶ್ರೀಮಂತವಾಗಿದ್ದರೂ ಒಳಗಿನಿಂದ ಬಡವಾಗಿರುತ್ತದೆ.

ಬಸವಣ್ಣನವರು ಕಾಯಕ ಮತ್ತು ದಾಸೋಹದ ಮೂಲಕ ಮಾನವೀಯತೆಯ ಮಹತ್ವವನ್ನು ಸಾರಿದರು. ಅವರ ದೃಷ್ಟಿಯಲ್ಲಿ ಮನುಷ್ಯನ ಶ್ರೇಷ್ಠತೆ ಜಾತಿಯಲ್ಲಿ ಇರಲಿಲ್ಲ. ಗುಣದಲ್ಲಿ ಇತ್ತು. ಸೇವೆಯಲ್ಲಿ ಇತ್ತು. ಇತರರ ನೋವಿಗೆ ಸ್ಪಂದಿಸುವ ಹೃದಯದಲ್ಲಿತ್ತು. ಇಂದು ನಾವು ಈ ತತ್ವವನ್ನು ಮರೆಯುತ್ತಿದ್ದೇವೆ.

ಸ್ವಾಮಿ ವಿವೇಕಾನಂದರು ಯುವಕರಿಗೆ ದೇಹದ ಬಲಕ್ಕಿಂತ ವ್ಯಕ್ತಿತ್ವದ ಬಲ ಮುಖ್ಯವೆಂದು ಹೇಳಿದರು. ವ್ಯಕ್ತಿತ್ವವು ಕೇವಲ ಜ್ಞಾನದಿಂದ ರೂಪುಗೊಳ್ಳುವುದಿಲ್ಲ. ಕರುಣೆ, ಪ್ರಾಮಾಣಿಕತೆ, ಆತ್ಮೀಯತೆ ಮತ್ತು ಜವಾಬ್ದಾರಿಯಿಂದ ರೂಪುಗೊಳ್ಳುತ್ತದೆ.

ಮಹಾತ್ಮ ಗಾಂಧೀಜಿ ಸಮಾಜದ ನಿಜವಾದ ಪ್ರಗತಿಯನ್ನು ಕೊನೆಯ ವ್ಯಕ್ತಿಯ ಜೀವನದಿಂದ ಅಳೆಯಬೇಕು ಎಂದು ಹೇಳಿದರು. ಇಂದು ನಾವು ಅಭಿವೃದ್ಧಿಯನ್ನು ಕಟ್ಟಡಗಳಿಂದ ಅಳೆಯುತ್ತಿದ್ದೇವೆ. ಆದರೆ ಸಂಬಂಧಗಳ ಗುಣಮಟ್ಟದಿಂದ ಅಳೆಯುವುದನ್ನು ಮರೆತಿದ್ದೇವೆ.

ಕುವೆಂಪು ವಿಶ್ವಮಾನವನ ಕನಸು ಕಂಡರು. ಮನುಷ್ಯ ಮನುಷ್ಯನನ್ನು ಪ್ರೀತಿಸುವ ವಿಶ್ವವನ್ನು ಅವರು ಬಯಸಿದರು. ಆದರೆ ಇಂದು ಪಕ್ಕದ ಮನೆಯವರ ಹೆಸರನ್ನೇ ತಿಳಿಯದ ಸ್ಥಿತಿಗೆ ನಾವು ತಲುಪಿದ್ದೇವೆ. ವಿಶ್ವಮಾನವವಾಗುವ ಮುನ್ನ ನೆರೆಮಾನವನಾಗುವುದು ನಮ್ಮ ಮೊದಲ ಕರ್ತವ್ಯ.

news_1783294565_0_314.jpg

 

news_1783294552_9_616.jpg

 

ಇಂದು ಮಕ್ಕಳಿಗೆ ಶಿಕ್ಷಣ ಸಿಗುತ್ತಿದೆ. ಆದರೆ ಜೀವನ ಶಿಕ್ಷಣ ಸಿಗುತ್ತಿಲ್ಲ. ಅಂಕಗಳು ಬರುತ್ತಿವೆ. ಆದರೆ ಸಂಸ್ಕಾರ ಕಡಿಮೆಯಾಗುತ್ತಿದೆ. ಸ್ಪರ್ಧೆ ಕಲಿಸಲಾಗುತ್ತಿದೆ. ಸಹಬಾಳ್ವೆ ಕಲಿಸಲಾಗುತ್ತಿಲ್ಲ. ಯಶಸ್ಸಿನ ಪಾಠ ಕಲಿಸಲಾಗುತ್ತಿದೆ. ಸಂಬಂಧಗಳ ಪಾಠ ಮರೆತುಹೋಗುತ್ತಿದೆ. ಇದೇ ಭವಿಷ್ಯದ ದೊಡ್ಡ ಅಪಾಯ.

ಯುವಕರು ವೃತ್ತಿಜೀವನದಲ್ಲಿ ಮುಂದೆ ಸಾಗುತ್ತಿದ್ದಾರೆ. ಆದರೆ ಮನಸ್ಸಿನ ಮಟ್ಟದಲ್ಲಿ ಹಿಂದೆ ಬೀಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಸ್ನೇಹಿತರಿರಬಹುದು. ಆದರೆ ಸಂಕಷ್ಟದ ಕ್ಷಣದಲ್ಲಿ ಕೈಹಿಡಿಯುವ ಒಬ್ಬ ಸ್ನೇಹಿತನ ಕೊರತೆ ಅವರನ್ನು ಕಾಡುತ್ತಿದೆ. ಪರಿಚಯಗಳು ಹೆಚ್ಚಿವೆ. ಆತ್ಮೀಯತೆ ಕಡಿಮೆಯಾಗಿದೆ.

ವೃದ್ಧರ ಬದುಕು ಇನ್ನೂ ಹೆಚ್ಚು ನೋವಿನಿಂದ ಕೂಡಿದೆ. ತಮ್ಮ ಜೀವನವನ್ನೆಲ್ಲ ಮಕ್ಕಳಿಗಾಗಿ ಮುಡಿಪಾಗಿಟ್ಟವರು ಕೊನೆಯ ದಿನಗಳಲ್ಲಿ ಏಕಾಂತದೊಂದಿಗೆ ಹೋರಾಡುತ್ತಿದ್ದಾರೆ. ಅವರಿಗೆ ದುಬಾರಿ ಉಡುಗೊರೆಗಳ ಅಗತ್ಯವಿಲ್ಲ. ಅವರ ಕೈ ಹಿಡಿದು ಮಾತನಾಡುವ ಹೃದಯ ಬೇಕು. ಅವರ ಅನುಭವಕ್ಕೆ ಗೌರವ ನೀಡುವ ಮನಸ್ಸು ಬೇಕು.

ವಿಮರ್ಶಾತ್ಮಕವಾಗಿ ನೋಡಿದರೆ, ಇಂದಿನ ಸಮಾಜದಲ್ಲಿ ಸಂಬಂಧಗಳು ಉಪಯೋಗದ ವಸ್ತುವಾಗುತ್ತಿವೆ. ಕೆಲಸ ಇರುವವರೆಗೆ ಸಂಬಂಧ. ಲಾಭ ಇರುವವರೆಗೆ ಸ್ನೇಹ. ಸ್ವಾರ್ಥ ಮುಗಿದರೆ ಆತ್ಮೀಯತೆಯೂ ಮುಗಿಯುತ್ತದೆ. ಈ ಮನೋಭಾವವೇ ಮಾನವೀಯತೆಯ ಅಸ್ತಿತ್ವಕ್ಕೆ ದೊಡ್ಡ ಅಪಾಯವಾಗಿದೆ.

ಅಲ್ಲದೆ ಮತ್ತೊಂದು ಆತಂಕಕಾರಿ ಬೆಳವಣಿಗೆ ಎಂದರೆ, ಮನುಷ್ಯ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಹೆದರುತ್ತಿದ್ದಾನೆ. ನೋವಿದ್ದರೂ ಹೇಳುವುದಿಲ್ಲ. ದುಃಖವಿದ್ದರೂ ಹಂಚಿಕೊಳ್ಳುವುದಿಲ್ಲ. ಪರಿಣಾಮವಾಗಿ ಮನಸ್ಸಿನ ನೋವು ಒಳಗೇ ಬೆಳೆದು ಒಂಟಿತನವಾಗಿ ಮಾರ್ಪಡುತ್ತದೆ.

ಸಂಬಂಧಗಳನ್ನು ಉಳಿಸಿಕೊಳ್ಳಲು ದೊಡ್ಡ ಸಂಪತ್ತಿನ ಅಗತ್ಯವಿಲ್ಲ. ಒಂದು ನಗು ಸಾಕು. ಒಂದು ಪ್ರೀತಿಯ ಮಾತು ಸಾಕು. ಒಬ್ಬರ ನೋವನ್ನು ಕೇಳುವ ತಾಳ್ಮೆ ಸಾಕು. ತಪ್ಪನ್ನು ಕ್ಷಮಿಸುವ ಉದಾರತೆ ಸಾಕು. ಇವೇ ಬದುಕಿನ ನಿಜವಾದ ಬಂಡವಾಳ. ಅದರಂತೆ ಸಮಾಜದ ಆರೋಗ್ಯ ಆಸ್ಪತ್ರೆಗಳಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಕುಟುಂಬಗಳ ಆರೋಗ್ಯದಿಂದ ನಿರ್ಧಾರವಾಗುತ್ತದೆ. ಕುಟುಂಬಗಳ ಆರೋಗ್ಯವು ಸಂಬಂಧಗಳ ಆರೋಗ್ಯದ ಮೇಲೆ ನಿಂತಿದೆ. ಸಂಬಂಧಗಳು ಜೀವಂತವಾಗಿದ್ದರೆ ಸಮಾಜವೂ ಜೀವಂತವಾಗಿರುತ್ತದೆ.

ಇಂದು ನಾವು ಮಕ್ಕಳಿಗೆ ಆಸ್ತಿ ಬಿಟ್ಟುಹೋಗಲು ಪ್ರಯತ್ನಿಸುತ್ತಿದ್ದೇವೆ. ಆದರೆ ಮೌಲ್ಯಗಳನ್ನು ಬಿಟ್ಟುಹೋಗಲು ಮರೆತಿದ್ದೇವೆ. ಹಣವನ್ನು ಸಂಪಾದಿಸುವುದನ್ನು ಕಲಿಸುತ್ತಿದ್ದೇವೆ. ಮನುಷ್ಯರನ್ನು ಸಂಪಾದಿಸುವುದನ್ನು ಕಲಿಸುತ್ತಿಲ್ಲ. ಇದೇ ಮುಂದಿನ ಪೀಳಿಗೆಯ ದೊಡ್ಡ ನಷ್ಟ.

ಡಿ. ವಿ. ಗುಂಡಪ್ಪ ಅವರ ಚಿಂತನೆಯ ಸಾರ ಒಂದೇ. ಬದುಕಿನಲ್ಲಿ ಸಮತೋಲ ನ ಅಗತ್ಯ. ಜ್ಞಾನಕ್ಕೆ ವಿನಯ ಬೆಸೆಯಬೇಕು. ಸಾಧನೆಗೆ ಸಂಸ್ಕಾರ ಜೊತೆಯಾಗ ಬೇಕು.ಸಂಬಂಧಗಳಿಗೆ ಗೌರವ ಇರಬೇಕು. ಆಗ ಮಾತ್ರ ಬದುಕು ಸಾರ್ಥಕವಾಗುತ್ತದೆ.  ಆದರೆ ನಾವು  ಒಂದು ಅಂಶವನ್ನು ಒಪ್ಪಿಕೊಳ್ಳಬೇಕು. ಮನುಷ್ಯನು ತನ್ನ ಕೊನೆಯ ಕ್ಷಣದಲ್ಲಿ ನೆನಪಿಸಿಕೊಳ್ಳುವುದು ಬ್ಯಾಂಕ್ ಖಾತೆಯನ್ನು ಅಲ್ಲ. ತನ್ನ ಹುದ್ದೆಯನ್ನು ಅಲ್ಲ. ತನ್ನ ಪ್ರೀತಿಪಾತ್ರರನ್ನು. ತನ್ನೊಂದಿಗೆ ನಡೆದವರನ್ನು. ತನ್ನ ಕೈಹಿಡಿದವರನ್ನು. ಆದ್ದರಿಂದ ಸಂಬಂಧಗಳನ್ನು ಕಳೆದುಕೊಳ್ಳುವಷ್ಟು ದೊಡ್ಡ ನಷ್ಟ ಮತ್ತೊಂದಿಲ್ಲ.

ಕಾಶಿಗೌ ಸಾಹಿತಿಯವರ ಮಾತೊಂದು ನೆನಪಿಗೆ ಬರುತ್ತದೆ "ಸಂಬಂಧಗಳನ್ನು ಕಳೆದುಕೊಂಡ ಮನುಷ್ಯ ಎಷ್ಟೇ ಶ್ರೀಮಂತನಾದರೂ ಬದುಕಿನಲ್ಲಿ ಬಡವನಾಗಿ ರುತ್ತಾನೆ. ಮನುಷ್ಯನ ನಿಜವಾದ ಸಂಪತ್ತು ಹಣವಲ್ಲ. ಅವನನ್ನು ಪ್ರೀತಿಯಿಂದ ನೆನೆಯುವ ಹೃದಯಗಳೇ ಅವನ ಜೀವಮಾನದ ದೊಡ್ಡ ಆಸ್ತಿ." ಎಂಬುದು ಇದು ಇಡೀ ಮನುಷ್ಯನ ವ್ಯಕ್ತಿತ್ವದ ಮಾಪನದ ಸಾರವಾಗಿವೆ.

ಆದುದರಿಂದ  ನಿಜವಾದ ನಾಗರಿಕತೆ ರಸ್ತೆಗಳಲ್ಲಿ ಇಲ್ಲ. ಸಂಬಂಧಗಳಲ್ಲಿ ಇದೆ. ನಿಜವಾದ ಅಭಿವೃದ್ಧಿ ಕಟ್ಟಡಗಳಲ್ಲಿ ಇಲ್ಲ. ಹೃದಯಗಳಲ್ಲಿ ಇದೆ. ನಿಜವಾದ ಶ್ರೀಮಂತಿಕೆ ಹಣದಲ್ಲಿಲ್ಲ. ನಮ್ಮನ್ನು ಪ್ರೀತಿಯಿಂದ ನೆನೆಯುವ ಮನಸ್ಸುಗಳಲ್ಲಿ ಇದೆ.ಸಂಬಂಧಗಳು ಉಳಿದರೆ ಮನುಷ್ಯ ಉಳಿಯುತ್ತಾನೆ. ಮನುಷ್ಯ ಉಳಿದರೆ ಸಮಾಜ ಉಳಿಯುತ್ತದೆ. ಸಮಾಜ ಉಳಿದರೆ ಮಾನವೀಯತೆ ಉಳಿಯುತ್ತದೆ. ಆದ್ದರಿಂದ ಬದುಕಿನಲ್ಲಿ ಗಳಿಸಬೇಕಾದ ದೊಡ್ಡ ಸಂಪತ್ತು ಸಂಬಂಧಗಳೇ. ಉಳಿಸಬೇಕಾದ ದೊಡ್ಡ ಮೌಲ್ಯ ಆತ್ಮೀಯತೆಯೇ.
ಲೇಖನ: ಕಾಶಿಗೌ, ಮೈಸೂರು.

 

Author
Chandravalli News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು : ಜಿಲ್ಲಾ ಉಸ್ತುವಾರಿ ಸಚಿವರು ಟಿ ರಘುಮೂರ್ತಿಸಾಂಸ್ಕೃತಿಕ ನೆಲೆಗಟ್ಟಿನ ಮೇಲೆ ಕಾಡುಗೊಲ್ಲರ ಬದುಕು - ಸಣ್ಣಚಿತ್ತಯ್ಯ ಸಾರ್ವಜನಿಕ ಗಣೇಶೋತ್ಸವಕ್ಕೆ ಹಂದರಗಂಭ ಪೂಜೆನೂತನ ಬಸ್ ನಿಲ್ದಾಣ ಲೋಕಾರ್ಪಣೆ ನೆರವೇರಿಸಿದ ಸಚಿವ ಟಿ.ರಘುಮೂರ್ತಿ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳ ಉದ್ಘಾಟನೆಬೆಳೆ ಸಮೀಕ್ಷೆದಾರರ ಬೇಡಿಕೆ ಈಡೇರಿಕೆಗೆ ಕ್ರಮ: ಸರ್ಕಾರದೊಂದಿಗೆ ಚರ್ಚಿಸುವ ಭರವಸೆ ನೀಡಿದ ಸಚಿವ ರಘುಮೂರ್ತಿದೇವಾಲಯ ನಿರ್ಮಾಣ ಪವಿತ್ರ ಕಾರ್ಯ - ಟಿ. ರಘುಮೂರ್ತಿಡಾ.ಹೇಮಂತರಾಜು ರವರ ನಾನು ನೀನು ಮತ್ತು ಸ್ಕಿಜೋಫ್ರೇನಿಯಾ ಕವನ ಸಂಕಲನ ಲೋಕಾರ್ಪಣೆಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಭಾರತದ ಶೂಟಿಂಗ್ ತಾರೆ ಮನು ಭಾಕರ್ಪ್ಯಾರಾ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದು ಇತಿಹಾಸ ಬರೆದ ಕೆ.ಎಸ್. ಶಿಲ್ಪಾ