ಚಿಕ್ಕಮಗಳೂರು, ಮೇ 3: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಚ್ಚರಿಯ ತಿರುವು ಕಂಡುಬಂದಿದ್ದು, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ 52 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಮತ ಎಣಿಕೆಯ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಅಧಿಕೃತ ಫಲಿತಾಂಶವನ್ನು ಇನ್ನೂ ಚುನಾವಣಾಧಿಕಾರಿಗಳು ಘೋಷಿಸಿಲ್ಲ. ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ರವಾನೆ ಮಾಡಲಾಗಿದ್ದು, ಪ್ರಕರಣದ ಸೂಕ್ಷ್ಮತೆ ಹಿನ್ನೆಲೆಯಲ್ಲಿ ಪ್ರಕಟಣೆ ಬಾಕಿ ಇಡಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜೀವರಾಜ್, “ಅಧಿಕೃತ ಅಂತರದ ಬಗ್ಗೆ ಹೇಳಲು ಸಾಧ್ಯವಿಲ್ಲ. ಆದರೆ ನಾನು ಮುನ್ನಡೆಯಲ್ಲಿದ್ದೇನೆ. ಮೂರು ವರ್ಷಗಳ ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ” ಎಂದು ತಿಳಿಸಿದ್ದಾರೆ.
ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಮಾತನಾಡಿ, ಹೈಕೋರ್ಟ್ ಸೂಚನೆಯಂತೆ ಅಂಚೆ ಮತಗಳ ಮರು ಎಣಿಕೆ ನಡೆಸಲಾಗಿದೆ. ಒಟ್ಟು 1,822 ಅಂಚೆ ಮತಗಳನ್ನು ಮರು ಪರಿಶೀಲನೆ ಮಾಡಿ ಎಣಿಸಲಾಗಿದೆ ಎಂದು ತಿಳಿಸಿದ್ದಾರೆ.
2023ರ ಮೊದಲ ಎಣಿಕೆಯಲ್ಲಿ ಜೀವರಾಜ್ ಅವರಿಗೆ 692 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ 569 ಮತಗಳು ಬಂದಿದ್ದವು. ಆದರೆ 2026ರ ಮರು ಎಣಿಕೆಯಲ್ಲಿ ಜೀವರಾಜ್ 690 ಮತಗಳನ್ನು ಪಡೆದರೆ, ರಾಜೇಗೌಡ 314 ಮತಗಳಿಗೆ ಇಳಿದಿದ್ದಾರೆ. ರಾಜೇಗೌಡರಿಗೆ ಬಂದಿದ್ದ 318 ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿದೆ.
ಮರು ಎಣಿಕೆ ಕುರಿತ ಸಂಪೂರ್ಣ ವರದಿಯನ್ನು ಚುನಾವಣಾ ಆಯೋಗ ಹಾಗೂ ಹೈಕೋರ್ಟ್‌ಗೆ ಸಲ್ಲಿಸಲಾಗಿದ್ದು, ಮತ ತೊಂದರೆ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರ ಇಲ್ಲ ಎಂದು ಚುನಾವಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ.