ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಆಧಾರ್ ಕಾರ್ಡ್ನಲ್ಲಿ ಹೆಸರು ಬದಲಾವಣೆ ಮತ್ತು ತಿದ್ದುಪಡಿಗೆ ಸಂಬಂಧಿಸಿದಂತೆ ಮಹತ್ವದ ನೂತನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಗುರುತಿನ ದುರ್ಬಳಕೆ ತಡೆಯಲು ಹಾಗೂ ದಾಖಲೆಗಳ ನಿಖರತೆ ಕಾಯ್ದುಕೊಳ್ಳಲು ಸಣ್ಣಪುಟ್ಟ ತಿದ್ದುಪಡಿಗಳು, ಮದುವೆ ನಂತರದ ಬದಲಾವಣೆಗಳು ಹಾಗೂ ಪೂರ್ಣ ಹೆಸರು ಬದಲಾವಣೆಗೆ ಪ್ರತ್ಯೇಕ ನಿಯಮಗಳನ್ನು ಜಾರಿಗೆ ತರಲಾಗಿದೆ.
ಸಣ್ಣಪುಟ್ಟ ತಿದ್ದುಪಡಿಗಳಿಗೆ ಸಾಮಾನ್ಯ ಗುರುತಿನ ಪುರಾವೆ ಸಾಕು
ವ್ಯಕ್ತಿಯ ಮೂಲ ಗುರುತಿಗೆ ಧಕ್ಕೆಯಾಗದಂತಹ ಸಣ್ಣ ಬದಲಾವಣೆಗಳನ್ನು 'ಕಿರು ತಿದ್ದುಪಡಿ' (Minor Corrections) ಎಂದು ವರ್ಗೀಕರಿಸಲಾಗಿದ್ದು, ಇವುಗಳಿಗೆ ಸಾಮಾನ್ಯ ಗುರುತಿನ ಪುರಾವೆ (PoI) ಸಲ್ಲಿಸಿದರೆ ಸಾಕಾಗುತ್ತದೆ:
-
ಸಂಕ್ಷಿಪ್ತ ಹೆಸರನ್ನು ವಿಸ್ತರಿಸುವುದು ಅಥವಾ ಪೂರ್ಣ ಹೆಸರನ್ನು ಸಂಕ್ಷಿಪ್ತಗೊಳಿಸುವುದು
-
ಮಧ್ಯದ ಹೆಸರು (Middle Name) ಅಥವಾ ಉಪನಾಮವನ್ನು (Surname) ಸೇರಿಸುವುದು/ತೆಗೆದುಹಾಕುವುದು
-
ಹೆಸರಿನ ಪದಗಳ ಅನುಕ್ರಮವನ್ನು (Sequence) ಬದಲಾಯಿಸುವುದು
-
ಉಚ್ಚಾರಣೆಗೆ ಧಕ್ಕೆಯಾಗದ ಸಣ್ಣ ಕಾಗುಣಿತ (Spelling) ದೋಷಗಳ ಸರಿಪಡಿಸುವಿಕೆ
-
ಕುಟುಂಬದ ಮುಖ್ಯಸ್ಥರ (HoF) ಮೂಲಕ ಮಗುವಿನ ಹೆಸರು ತಿದ್ದುಪಡಿ ಮಾಡಲು ಮಾನ್ಯವಾದ PoI ಅಥವಾ ಸಂಬಂಧದ ಪುರಾವೆ (PoR) ಕಡ್ಡಾಯ
ಮದುವೆ, ವಿಚ್ಛೇದನ ಹಾಗೂ ಲಿಂಗ ಬದಲಾವಣೆ ಸಂದರ್ಭ
ವಿವಾಹ ಅಥವಾ ವಿಚ್ಛೇದನದ ನಂತರ ಹೆಸರಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಸಾಮಾನ್ಯ ಗುರುತಿನ ದಾಖಲೆಯ ಜತೆಗೆ ನಿರ್ದಿಷ್ಟ ನಮೂನೆಯ ಅಫಿಡವಿಟ್ (ಪ್ರಮಾಣಪತ್ರ) ಸಲ್ಲಿಸುವುದು ಕಡ್ಡಾಯವಾಗಿದೆ. ಇನ್ನು ಲಿಂಗ ಪರಿವರ್ತನೆಯ ನಂತರ ಹೆಸರು ಬದಲಾಯಿಸಿಕೊಳ್ಳುವ ವ್ಯಕ್ತಿಗಳಿಗೂ ವಿಶೇಷ ಸೌಲಭ್ಯ ಕಲ್ಪಿಸಲಾಗಿದ್ದು, ಸೂಕ್ತ ಗುರುತಿನ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
ನೋಂದಣಿ ವೇಳೆ ಆದ ದೋಷಗಳ ಸರಿಪಡಿಸುವಿಕೆ
ನೋಂದಣಿ ಸಮಯದಲ್ಲಿ ಸರಿಯಾದ ದಾಖಲೆಗಳನ್ನು ನೀಡಿದ್ದರೂ ಡೇಟಾ ಎಂಟ್ರಿ ದೋಷದಿಂದ ಹೆಸರು ತಪ್ಪಾಗಿ ದಾಖಲಾಗಿದ್ದರೆ, ವಯಸ್ಕರು ಸರಿಯಾದ ದಾಖಲೆಯೊಂದಿಗೆ ನಿಗದಿತ ಅಫಿಡವಿಟ್ ಸಲ್ಲಿಸಬೇಕು. ಅಪ್ರಾಪ್ತರ ವಿಷಯದಲ್ಲೂ ಅವರ ಪೋಷಕರು ನಿರ್ದಿಷ್ಟ ಅಫಿಡವಿಟ್ ಹಾಗೂ ಪೂರಕ ದಾಖಲೆಗಳನ್ನು ನೀಡುವುದು ಅಗತ್ಯವಾಗಿದೆ.
ದಾಖಲೆಗಳಿಲ್ಲದೆ ಮಾಡಬಹುದಾದ ಫಾರ್ಮ್ಯಾಟಿಂಗ್ ತಿದ್ದುಪಡಿಗಳು
ಕೆಲವು ತಾಂತ್ರಿಕ ದೋಷಗಳಿಗೆ ಯಾವುದೇ ದಾಖಲೆಗಳನ್ನು ನೀಡಬೇಕಾಗಿಲ್ಲ. ಹೆಸರಿನ ಮಧ್ಯದಲ್ಲಿ ಅನಗತ್ಯವಾಗಿ ಬಂದಿರುವ ಕ್ಯಾಪಿಟಲ್ ಅಕ್ಷರಗಳನ್ನು ತೆಗೆದುಹಾಕುವುದು, ಅನಗತ್ಯ ಚುಕ್ಕೆಗಳು (ಡಾಟ್ಸ್) ಅಥವಾ ವಿರಾಮಚಿಹ್ನೆಗಳನ್ನು ಸರಿಪಡಿಸಲು ಯಾವುದೇ ಪ್ರತ್ಯೇಕ ದಾಖಲೆಗಳ ಅಗತ್ಯವಿರುವುದಿಲ್ಲ.
ಬಿರುದು, ಹುದ್ದೆಗಳ ನಮೂದು ಸಂಪೂರ್ಣ ನಿಷೇಧ
ಹೆಸರಿನ ಜತೆಗೆ ಯಾವುದೇ ರೀತಿಯ ಬಿರುದುಗಳು, ಮಿಲಿಟರಿ ಶ್ರೇಣಿಗಳು, ಪ್ರಶಸ್ತಿಗಳು, ಹುದ್ದೆಯ ವಿವರಗಳು ಅಥವಾ ಉಪನಾಮಗಳನ್ನು ('ಉರ್ಫ್', 'ಅಲಿಯಾಸ್') ಸೇರಿಸುವುದನ್ನು ಯುಐಡಿಎಐ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಈಗಾಗಲೇ ಇಂತಹ ವಿವರಗಳು ಕಾರ್ಡ್ನಲ್ಲಿದ್ದರೆ, ಅದನ್ನು ತೆಗೆದುಹಾಕಲು ಅಫಿಡವಿಟ್ ಮತ್ತು ಮಾನ್ಯ ಗುರುತಿನ ಚೀಟಿ ಒದಗಿಸಬೇಕು.
ಪೂರ್ಣ ಹೆಸರು ಬದಲಾವಣೆಗೆ ಗೆಜೆಟ್ ಅಧಿಸೂಚನೆ ಕಡ್ಡಾಯ
ಹೊಸ ನಿಯಮಗಳ ಪ್ರಕಾರ, ತಮ್ಮ ಮೂಲ ಹೆಸರನ್ನು ಸಂಪೂರ್ಣವಾಗಿ ಬದಲಾಯಿಸಲು ಬಯಸುವವರಿಗೆ ಕೇವಲ ಸಾಮಾನ್ಯ ಗುರುತಿನ ಚೀಟಿಗಳು ಸಾಕಾಗುವುದಿಲ್ಲ. ವ್ಯಕ್ತಿಯ ಮೂಲ ಗುರುತನ್ನೇ ಬದಲಿಸುವಂತಹ ಪ್ರಮುಖ ತಿದ್ದುಪಡಿಗಳಿಗೆ ಕೇಂದ್ರ ಅಥವಾ ರಾಜ್ಯ ಸರ್ಕಾರ ಅಧಿಕೃತವಾಗಿ ಹೊರಡಿಸಿರುವ ಗೆಜೆಟ್ ಅಧಿಸೂಚನೆ (Gazette Notification) ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅಧಿಕಾರಿಗಳು ದಾಖಲೆಗಳು, ಅಫಿಡವಿಟ್ ಮತ್ತು ಗೆಜೆಟ್ ಪ್ರತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರವಷ್ಟೇ ಹೆಸರು ಅಪ್ಡೇಟ್ಗೆ ಅನುಮೋದನೆ ನೀಡಲಿದ್ದಾರೆ.