ಮಂಗಳೂರು: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ವಸ್ತುವನ್ನು ಟ್ರ್ಯಾಕ್ ಮಾಡುವ ನೆಪದಲ್ಲಿ ಅಪಾಯಕಾರಿ ಎಪಿಕೆ (Apk) ಫೈಲ್ ಲಿಂಕ್ ರವಾನಿಸಿ, ಖಾಸಗಿ ಸಂಸ್ಥೆಯ ಹಿರಿಯ ಕೆಮಿಸ್ಟ್ ಒಬ್ಬರ ಕ್ರೆಡಿಟ್ ಕಾರ್ಡ್‌ನಿಂದ ಹಂತ-ಹಂತವಾಗಿ ₹1.18 ಲಕ್ಷಕ್ಕೂ ಅಧಿಕ ಹಣವನ್ನು ಲಪಟಾಯಿಸಿರುವ ನಯವಂಚಕ ಕೃತ್ಯ ಬೆಳಕಿಗೆ ಬಂದಿದೆ.
ನಡೆದದ್ದೇನು?:
ನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಸೀನಿಯರ್ ಕೆಮಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ 38 ವರ್ಷದ ವ್ಯಕ್ತಿಯೊಬ್ಬರು, ಅಕ್ಟೋಬರ್ 1ರಂದು ತಮ್ಮ ಕಚೇರಿಯ ಕೆಲಸಕ್ಕಾಗಿ ಕಾನ್ಪುರದ ಗೇಲ್ ಇಂಡಿಯಾ ಕಂಪೆನಿಯಿಂದ ‘ಕೆಮಿಕಲ್ ಹೋಲ್ಡರ್’ ಅನ್ನು ಆನ್‌ಲೈನ್ ಮೂಲಕ ತರಿಸಲು ಬುಕ್ ಮಾಡಿದ್ದರು. ಇದಾದ ನಾಲ್ಕು ದಿನಗಳ ಬಳಿಕ, ಅಂದರೆ ಅಕ್ಟೋಬರ್ 5ರಂದು ಇವರ ವಾಟ್ಸ್‌ಆ್ಯಪ್‌ಗೆ ಅಪರಿಚಿತ ನಂಬರ್‌ಗಳಿಂದ (9835417309 ಮತ್ತು 7978171089) ಸಂದೇಶವೊಂದು ಬಂದಿದೆ. ತಾವು ಕಾಯುತ್ತಿದ್ದ ಪಾರ್ಸಲ್ ಟ್ರ್ಯಾಕಿಂಗ್‌ಗೆ ಸಂಬಂಧಿಸಿದ ಅಧಿಕೃತ ಲಿಂಕ್ ಇರಬಹುದೆಂದು ಭಾವಿಸಿದ ಅವರು, ಸಂದೇಶದಲ್ಲಿದ್ದ ಎಪಿಕೆ ಫೈಲ್ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ.
ಖಾತೆಯಿಂದ ಹಣ ಎಗರಿಸಿದ ಸೈಬರ್ ಕಳ್ಳರು:
ಲಿಂಕ್ ತೆರೆಯುತ್ತಿದ್ದಂತೆ ಮೊಬೈಲ್ ಪರದೆಯ ಮೇಲೆ ಆ್ಯಪ್ ಮಾದರಿಯ ಪುಟವೊಂದು ಕಾಣಿಸಿಕೊಂಡಿದ್ದು, ಅದರಲ್ಲಿ ಕೇಳಲಾದ ವೈಯಕ್ತಿಕ ಹೆಸರು ಹಾಗೂ ಕ್ರೆಡಿಟ್ ಕಾರ್ಡ್‌ನ ಅತ್ಯಂತ ರಹಸ್ಯ ಮಾಹಿತಿಗಳನ್ನು ನಮೂದಿಸಿದ್ದಾರೆ. ಈ ಗೌಪ್ಯ ವಿವರಗಳು ಸೈಬರ್ ಕಳ್ಳರ ಕೈಸೇರುತ್ತಿದ್ದಂತೆಯೇ, ಹಂತ-ಹಂತವಾಗಿ ಒಟ್ಟು ₹1,18,707 ಹಣ ಅನಾಮಧೇಯ ಖಾತೆಗೆ ವರ್ಗಾವಣೆಯಾಗಿದೆ. ತಾವು ಡಿಜಿಟಲ್ ಖದೀಮರ ಜಾಲಕ್ಕೆ ಬಲಿಯಾಗಿರುವುದು ಖಚಿತವಾಗುತ್ತಿದ್ದಂತೆ ಸಂತ್ರಸ್ತರು ಮಂಗಳೂರು ನಗರ ಸಿಇಎನ್ (CEN) ಅಪರಾಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೃತ್ಯಕ್ಕೆ ಬಳಸಲಾದ ಮೊಬೈಲ್ ಸಂಖ್ಯೆಗಳು ಹಾಗೂ ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳ ಬೆನ್ನುಬಿದ್ದಿದ್ದಾರೆ.
ಮದುವೆ ಮನೆಯಲ್ಲಿ 3.5 ವರ್ಷದ ಕಂದಮ್ಮನ ಕತ್ತಿನಲ್ಲಿದ್ದ ₹1.35 ಲಕ್ಷ ಮೌಲ್ಯದ ಚಿನ್ನದ ಸರ ಕಸಿದು ಮಹಿಳೆ ಪರಾರಿ
ಮಂಗಳೂರು ನಗರದ ಪ್ರತಿಷ್ಠಿತ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಸಂಭ್ರಮದ ಜನದಟ್ಟಣೆಯನ್ನೇ ದುರುಪಯೋಗಪಡಿಸಿಕೊಂಡ ಚಾಲಾಕಿ ಮಹಿಳೆಯೊಬ್ಬಳು, ಮೂರೂವರೆ ವರ್ಷದ ಪುಟ್ಟ ಮಗುವಿನ ಕುತ್ತಿಗೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಎಸ್ಕೇಪ್ ಆಗಿರುವ ಘಟನೆ ಅಕ್ಟೋಬರ್ 18ರ ಭಾನುವಾರ ಮಧ್ಯಾಹ್ನ ನಡೆದಿದೆ.
ಐಸ್‌ಕ್ರೀಮ್ ಪಡೆಯಲು ಹೋದಾಗ ದುಷ್ಕೃತ್ಯ:
ಕೊಡಿಯಾಲ್‌ಬೈಲ್‌ನ ಟಿ.ಎಂ.ಎ. ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೀಮಾ ಬಾನು ಎಂಬುವರು ತಮ್ಮ ಮೂರೂವರೆ ವರ್ಷದ ಪುತ್ರಿ ಶಾಝ್ಮಾ ಜೊತೆ ತೆರಳಿದ್ದರು. ಮಧ್ಯಾಹ್ನ ಸುಮಾರು 2:15ರ ಹೊತ್ತಿಗೆ ಮೊದಲ ಮಹಡಿಯ ಊಟದ ಸಭಾಂಗಣದಲ್ಲಿ ಮಗು ಐಸ್‌ಕ್ರೀಮ್ ತರಲೆಂದು ಮುಂದಾಗಿದೆ. ಕೆಲವೇ ಕ್ಷಣಗಳಲ್ಲಿ ಬಾಲಕಿ ಕಣ್ಣೀರು ಹಾಕುತ್ತಾ ತಾಯಿಯ ಬಳಿ ಓಡಿಬಂದು, ಮಹಿಳೆಯೊಬ್ಬಳು ತನ್ನ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದುಕೊಂಡು ಪರಾರಿಯಾದ ವಿಚಾರವನ್ನು ಅಳುತ್ತಲೇ ತಿಳಿಸಿದೆ.
ಕ್ಯಾಮೆರಾದಲ್ಲಿ ಕಳ್ಳಿಯ ಮುಖಚಹರೆ ಪತ್ತೆ:
ಮಗುವಿನ ಮಾತು ಕೇಳಿ ಕಂಗಾಲಾದ ಪೋಷಕರು ಹಾಗೂ ನೆಂಟರಿಷ್ಟರು ಸಭಾಂಗಣದಲ್ಲೆಲ್ಲಾ ಹುಡುಕಾಟ ನಡೆಸಿದರೂ ಕಳ್ಳಿ ಸುಳಿವು ಸಿಗಲಿಲ್ಲ. ಬಳಿಕ ಸಭಾಂಗಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಮಹಿಳೆಯೊಬ್ಬಳು ಜನಸಂದಣಿಯ ಮಧ್ಯೆಯೇ ಬಾಲಕಿಯ ಕತ್ತಿನ ಸರವನ್ನು ಕಿತ್ತುಕೊಂಡು ಕ್ಷಣಾರ್ಧದಲ್ಲಿ ಕಾಲ್ಕಿತ್ತಿರುವುದು ಪತ್ತೆಯಾಗಿದೆ.
ಕಳವಾದ ಪೆಂಡೆಂಟ್ ಸಹಿತ ಸುಮಾರು 10 ಗ್ರಾಂ ತೂಕದ ಈ ಆಭರಣದ ಮೌಲ್ಯ ₹1.35 ಲಕ್ಷ ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸೀಮಾ ಬಾನು ನೀಡಿದ ದೂರಿನ ಮೇರೆಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ಫೂಟೇಜ್ ಆಧರಿಸಿ ಆರೋಪಿ ಮಹಿಳೆಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.