ಬೆಂಗಳೂರು : ಆರೋಗ್ಯ ಇಲಾಖೆಯು ತೀವ್ರ ಶ್ರವಣದೋಷವುಳ್ಳ ಮಕ್ಕಳಿಗೆ ಹೊಸ ಜೀವನವನ್ನು ಕಲ್ಪಿಸುವ ಉದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ 'ಆಲಿಸು ಕಂದ' ಕಾರ್ಯಕ್ರಮದಡಿ 200 ಮಕ್ಕಳಿಗೆ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಶ್ರವಣದೋಷ ಮುಕ್ತ ಕರ್ನಾಟಕ ಅಭಿಯಾನದ ಭಾಗವಾಗಿ ರೂಪುಗೊಂಡಿರುವ ಈ ಯೋಜನೆಯು, ತೊಟ್ಟಿಲಿನಿಂದ ತರಗತಿಯವರೆಗೆ ಪ್ರತಿಯೊಂದು ಮಗುವಿಗೂ ಶ್ರವಣ ಆರೈಕೆ ಒದಗಿಸುವ ಮೂಲಭೂತ ಹಕ್ಕನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟಿದೆ.
ಈ ಕಾರ್ಯಕ್ರಮದ ಇದುವರೆಗಿನ ಸಾಧನೆಗಳ ಅವಲೋಕನ ಹಾಗೂ ಮುಂಬರುವ ದಿನಗಳಲ್ಲಿ ಆಯ್ಕೆಯಾದ 200 ಮಕ್ಕಳಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವ ಕಾರ್ಯಕ್ರಮಕ್ಕೆ ಇಂದು ಅಕ್ಟೋಬರ್ 22 ರಂದು ಬೆಳಗ್ಗೆ 10:30 ಗಂಟೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಅಧಿಕೃತ ಚಾಲನೆ ನೀಡಲಿದ್ದಾರೆ. ಬೆಂಗಳೂರಿನ ಆರೋಗ್ಯ ಸೌಧದ ಬಿ.ಸಿ. ರಾಯ್ ಸಭಾಂಗಣದಲ್ಲಿ ಈ ವಿಶೇಷ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧಡೆಯಿಂದ ಆಗಮಿಸಲಿರುವ ಫಲಾನುಭವಿ ಮಕ್ಕಳು ಹಾಗೂ ಅವರ ಪೋಷಕರು ಪಾಲ್ಗೊಳ್ಳಲಿದ್ದಾರೆ. ಶ್ರವಣದೋಷದಿಂದ ಬಳಲುವ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಮತ್ತು ಅವರ ಬಾಳಿನಲ್ಲಿ ಮಂದಹಾಸ ಮೂಡಿಸಲು ಸರ್ಕಾರದ ಈ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯೋಜನೆಯು ಅತ್ಯಂತ ಮಹತ್ವದ ಹೆಜ್ಜೆಯಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.