ಕೊಪ್ಪಳ: ಅಪ್ರಾಪ್ತೆಯೊಂದಿಗೆ ಲವ್ ಜಿಹಾದ್ ನಡೆಸುತ್ತಿದ್ದಾನೆ ಎಂದು ಆರೋಪಿಸಿ ಮುಸ್ಲಿಂ ವ್ಯಕ್ತಿಗೆ ಹಿಂದೂ ಪರ ಸಂಘಟನೆಗಳ ಯುವಕರು ಥಳಿಸಿದ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ.
ನಿರ್ಮಿತಿ ಕೇಂದ್ರ ವ್ಯಾಪ್ತಿಯ ನಿವಾಸಿ ಸಮೀರ್ ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೋಕ್ಸೊ ಕೇಸ್ ದಾಖಲಿಸಿ ಆರೋಪಿಯನ್ನು ಜೈಲಿಗೆ ಕಳುಹಿಸುವಂತೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಅಪ್ರಾಪ್ತೆಯೊಂದಿಗೆ ಸಮೀರ್ ಸುತ್ತಾಡುವುದನ್ನು ಕೆಲವು ದಿನಗಳಿಂದ ಹಿಂದೂ ಪರ ಸಂಘಟನೆಗಳ ಯುವಕರು ಗಮನಿಸಿದ್ದರು. ಬುಧವಾರ ಕೊಪ್ಪಳ ನಗರದ ಕೆಫೆಯೊಂದರಲ್ಲಿ ಕುಳಿತಿರುವಾಗ ಈ ಬಗ್ಗೆ ಪ್ರಶ್ನಿಸಿದ್ದು, ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳದ ವೇಳೆ ಸಮೀರ್ ನನ್ನು ಥಳಿಸಿದ್ದಾರೆ. ಇದರಿಂದ ಕೆರಳಿದ ಮುಸ್ಲಿಂ ಯುವಕರು ಗುಂಪು ಕೊಪ್ಪಳ ನಗರ ಠಾಣೆ ಮುಂದೆ ಸೇರಿ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಪೊಲೀಸರು ಕೆಫೆಯಲ್ಲಿನ ಸಿಸಿಟಿವಿ ದೃಶ್ಯಾವಳಿ ಗಮನಿಸಿ ಎಂಟು ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಪ್ರಾಪ್ತೆಗೆ ಕಿರುಕುಳ ನೀಡಿದ ಸಮೀರ್ ವಿರುದ್ಧ ಪೋಕ್ಸೊ ಕೇಸ್ ದಾಖಲಿಸಿ ಬಂಧಿಸುವಂತೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.