ಸುರಪುರ, ಫೆ.20: ಸುರಪುರ ತಾಲ್ಲೂಕಿನ ಚೌಡೇಶ್ವರಿಹಾಳ ಹಾಗೂ ಸೂಗೂರು ಗ್ರಾಮಗಳ ಬಳಿ ಮರಳು ನೀತಿ ಮತ್ತು ಕಾನೂನು ನಿಯಮಗಳನ್ನು ಉಲ್ಲಂಘಿಸಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಮೆ|| ಹಟ್ಟಿ ಗೋಲ್ಡ್ ಮೈನ್ಸ್ ಕಂಪನಿಯ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ಸಲ್ಲಿಸಲಾಗಿದೆ.
ಜೇವರ್ಗಿ ತಾಲ್ಲೂಕಿನ ಚೆನ್ನೂರು ಗ್ರಾಮದ ಕಿರಣ್‌ಕುಮಾರ್ (ತಂದೆ ವೀರಣಗೌಡ ಪಾಟೀಲ) ಅವರು ಫೆ.18ರಂದು ಯಾದಗಿರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಲ್ಲಿಸಿದ ದೂರಿನಲ್ಲಿ, ಕಂಪನಿ ನದಿಯೊಳಗೆ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳನ್ನು ನೇರವಾಗಿ ಇಳಿಸಿ ಲಾರಿಗಳಿಗೆ ಮರಳು ತುಂಬಿ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಮರಳು ನೀತಿಯ ಪ್ರಕಾರ ನದಿಯೊಳಗೆ ಭಾರೀ ಯಂತ್ರೋಪಕರಣಗಳನ್ನು ಬಳಸುವುದಕ್ಕೆ ಅವಕಾಶವಿಲ್ಲ. ಜೊತೆಗೆ ಪರಿಸರ ನಿರಾಕ್ಷೇಪಣೆ ಪತ್ರದಲ್ಲಿನ ಷರತ್ತುಗಳನ್ನೂ ಸಂಪೂರ್ಣವಾಗಿ ಉಲ್ಲಂಘಿಸಲಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಅಸಮಾಧಾನ:
ದೂರು ನೀಡಿದರೂ ಯಾದಗಿರಿ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿರಣ್‌ಕುಮಾರ್ ಅವರು ‘ಜನ ಆಕ್ರೋಶ’ ಪತ್ರಿಕೆಗೆ ತಿಳಿಸಿದ್ದಾರೆ.
ಕಾನೂನು ಹೋರಾಟದ ಎಚ್ಚರಿಕೆ:
ಮುಂದಿನ ದಿನಗಳಲ್ಲಿ ಕಾನೂನು ಹೋರಾಟವನ್ನು ತೀವ್ರಗೊಳಿಸಲಾಗುವುದು. ಸೂಕ್ತ ಕ್ರಮ ಜರುಗಿಸದಿದ್ದಲ್ಲಿ ವಿಷಯವನ್ನು ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.